ಯಾದಗಿರಿ: ಎಫ್ಡಿಎ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತ 9 ಜನರ ತೀವ್ರ ವಿಚಾರಣೆ ನಡೆಸಲಾಗಿದ್ದು, ಆರ್.ಡಿ.ಪಾಟೀಲ್ ಅಕ್ರಮದ ಸೂತ್ರದಾರ’ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಹೊರಗೆ ಕುಳಿತು ಉತ್ತರ ಹೇಳಿದ 7 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಂಧಿತರ ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಅಕ್ರಮ ಎಸಗಿದವರೆಲ್ಲರೂ ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಸೊನ್ನ ಗ್ರಾಮದ ಆರ್.ಡಿ ಪಾಟೀಲ್ ಜತೆ ಸಂಪರ್ಕದಲ್ಲಿದ್ದರು ಎನ್ನುವುದು ತಿಳಿದುಬಂದಿದೆ.
ಅಕ್ರಮ ನಡೆಯುತ್ತಿದ್ದಂತೆ ಯಾದಗಿರಿ ಎಸ್‌ಪಿ ಮಾರ್ಗದರ್ಶನದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಐದು ತಂಡಗಳು ಪ್ರತ್ಯೇಕವಾಗಿ ಅಕ್ರಮ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಬಂಧನಕ್ಕೆ ಒಳಗಾದ 9 ಜನರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ 9 ಜನರಿಗೆ ಹೊರಗಡೆ ಕುಳಿತು ಉತ್ತರಗಳನ್ನು ಹೇಳುತ್ತಿದ್ದ 7 ಜನರನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ 9 ಜನರನ್ನು ಮಾತ್ರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇವರಿಗೆ ಸಹಕಾರ ನೀಡಿದ 7 ಜನರನ್ನು ಇನ್ನಷ್ಟು ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಚ್ಚೆತ್ತ ಪೊಲೀಸರು: ಶನಿವಾರ ನಡೆದ ಬ್ಲೂéಟೂತ್ ಬಳಸಿ ಅಕ್ರಮ ಎಸಗಿದ ಪ್ರಕರಣ ಸದ್ದು ಮಾಡುತ್ತಿದ್ದಂತೆ, ಯಾದಗಿರಿ ಪೊಲೀಸರು ರವಿವಾರ ಪರೀûಾ ಕೇಂದ್ರಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದಲ್ಲದೇ ಪ್ರತಿ ಕೇಂದ್ರದ ಮುಖ್ಯದ್ವಾರದಲ್ಲೂ ಮೆಟಲ್ ಡಿಟೆಕ್ಟರ್ ಫ್ರೆಮ್ ಜತೆಗೆ ಹ್ಯಾಂಡಿ ಡಿಟೆಕ್ಟರ್ ಬಳಸಿ ತಪಾಸಣೆ ನಡೆಸಿದ್ದಾರೆ.