ಬೆಂಗಳೂರು: ಫೇಸ್‌ಬುಕ್ ಮೂಲಕ ಪರಿಚಿತರಾದ ಬೆಂಗಳೂರಿನ ಬಾಲಕಿ ಮತ್ತು ಮಹಾರಾಷ್ಟ್ರದ ಯುವತಿ ನಡುವೆ ಪ್ರೇಮಾಂಕುರವಾಗಿದೆ. ಇದಕ್ಕೆ ವಿರೊಧ ವ್ಯಕ್ತಪಡಿಸಿದ ಬೆಂಗಳೂರು ಬಾಲಕಿಯ ಪೋಷಕರು, ಮಹಾರಾಷ್ಟ್ರದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಮಂಗಲದ ಪಿಯುಸಿ ವಿದ್ಯಾರ್ಥಿನಿಗೆ ಕಳೆದ ಎಂಟು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಮಹಾರಾಷ್ಟ್ರ ಮೂಲದ ಎಂಬಿಎ ವಿದ್ಯಾರ್ಥಿನಿಯ ಪರಿಚಯವಾಗಿದೆ. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಈ ವಿಚಾರ ತಿಳಿದ ಬಲಕಿ ಪೋಷಕರು, ಯುವತಿಯಿಂದ ದೂರ ಇರುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡ ಬಾಲಕಿ, ಮನೆ ತೊರೆದು ಮಹಾರಾಷ್ಟ್ರಕ್ಕೆ ಹೋಗಿ ಗೆಳತಿ ಜತೆ ನೆಲೆಸಿದ್ದಳು. ಈ ಸಂಬಂಧ ಬಲಕಿಯ ಪೋಷಕರು ಕೋರಮಂಗಲ ಠಾಣೆಗೆ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸರು, ಮೊಬೈಲ್ ನೆಟ್‌ವರ್ಕ್ ಮೂಲಕ ಬಾಲಕಿಯನ್ನು ಪತ್ತೆ ಹಚ್ಚಿ ಮಹಾರಾಷ್ಟ್ರದಿಂದ ನಗರಕ್ಕೆ ಕರೆತಂದಿದ್ದರು. ನಂತರ ಆಪ್ತಸಮಾಲೋಚಕರ ಮೂಲಕ ಬಾಲಕಿಗೆ “ಈ ಸ್ನೇಹ’ವನ್ನು ಕಾನೂನು ಒಪ್ಪದೆಂದು ತಿಳಿ ಹೇಳಿದ್ದರು.
ಈ ಮಧ್ಯೆ ಜ.7ರಂದು ನಗರದ ಬಾಲಕಿ 18ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಳು. ವಿಷಯ ತಿಳಿದ ಯುವತಿ, ಜ.13ರಂದು ಮಹಾರಾಷ್ಟ್ರದಿಂದ ನಗರಕ್ಕೆ ಬಂದು ಪಿಜಿಯೊಂದರಲ್ಲಿ ನೆಲೆಸಿದ್ದಳು.
ಬಳಿಕ ಗೆಳತಿಗೆ ಕರೆ ಮಾಡಿ “ಇನ್ಮುಂದೆ ನಮ್ಮನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ತಿಳಿಸಿ ಭೇಟಿಗೆ ಯತ್ನಿಸಿದ್ದಳು. ಅಷ್ಟರಲ್ಲಿ ಈ ಮಾಹಿತಿ ಪಡೆದ ಬಾಲಕಿಯ ಪೋಷಕರು ಯುವತಿ ನೆಲೆಸಿದ್ದ ಪಿಜಿಗೆ ಹೋಗಿ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರದ ಯುವತಿ, ಬಾಲಕಿಯ ಪೋಷಕರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.