ಮಂಗಳೂರು: ನಗರದ ಹೊರವಲಯದಲ್ಲಿನ ಸುರತ್ಕಲ್ ನಲ್ಲಿ ನಡೆದಿದ್ದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಇದೀಗ ಕೊಲೆ ಪ್ರಕರಣ ಸಂಬಂಧ ಮೊದಲ ಆರೋಪಿಯ ಬಂಧನವಾಗಿದೆ.
ಫಾಝಿಲ್ ಕೊಲೆಗೆ ಕಾರು ನೀಡಿ ಸಹಾಯ ಮಾಡಿದ್ದ ಆರೋಪದಡಿ ಅಜಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಜಿತ್ ಬಂಧನದ ವಿಚಾರವನ್ನು ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಗರ ಆಯುಕ್ತರು ಅಜಿತ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಗುರುವಾರ ರಾತ್ರಿ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಮಂಗಳಪೇಟೆ ನಿವಾಸಿ 23 ವರ್ಷದ ಫಾಝಿಲ್ ನ ಮೇಲೆ ಮಾರಕಾಸ್ತ್ರಗಳಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ:ಐಸಿಸ್ ಪರ ಒಲವು ತೋರಿ ಲೈಕ್,ಕಾಮೆಂಟ್: ಭಟ್ಕಳದಲ್ಲಿ ಓರ್ವನನ್ನು ವಶಕ್ಕೆ ಪಡೆದ ಎನ್.ಐ.ಎ
ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ಕು ಮಂದಿ ಹಾಗೂ ಇತರ ಇಬ್ಬರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು ಶೀಘ್ರ ಬಂಧನ ಪ್ರಕ್ರಿಯೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.