ಅಮ್ಮನ ಮಡಿಲು ಲೋಕ ಕಾಯಕ, ಅಪ್ಪನ ಹೆಗಲು ವಿಶ್ವದಾಯಕ. ಅಪ್ಪನಿಗೆ ಕಾಣುವ ವಿಶ್ವವನ್ನು ನಮಗೆ ಪರಿಚಯಿಸುತ್ತಾನೆ. ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ಮಹಾಗುರು ಅಪ್ಪ, ಸಾಂಸಾರಿಕ ಜೀವನದಲ್ಲಿ ಎಲ್ಲವನ್ನು ನಿಭಾಯಿಸುವ ಹೊಣೆಗಾರ ಅಪ್ಪ. ಪ್ರತಿಯೊಬ್ಬರ ಜೀವನದಲ್ಲಿ ಅಪ್ಪ ಮುಖ್ಯವೆನ್ನಿಸುವುದು ಅವನು ಮಾಡುವ ತ್ಯಾಗ, ತನ್ನವರಿಗಾಗಿ ಎಲ್ಲವನ್ನು ಸಹಿಸಿಕೊಳ್ಳುವ ತಾಳ್ಮೆಯಿಂದ. ಅಪ್ಪ ನಮ್ಮ ಕೈ ಹಿಡಿದು ನಡೆಸುವ ಮಾರ್ಗದರ್ಶಿ. ಅಪ್ಪ ಮನೆಯ ಯಜಮಾನ, ಆದರೆ ಯಾವುದೇ ಕಾರಣಕ್ಕೂ ಯಜಮಾನ ಎಂಬ ಅಹಂಕಾರ ಆತನಿಗಿಲ್ಲ. ಎಲ್ಲರನ್ನು ಪ್ರೀತಿಸುವ ಮುಗ್ಧ ಜೀವಿ ಅಪ್ಪ. ಮನೆಯವರ ಬಗ್ಗೆ ಮನಸ್ಸಿನಲ್ಲಿ ಆಕಾಶದಷ್ಟು ಕನಸುಗಳನ್ನು ಹೊಂದಿರುತ್ತಾನೆ. ಅದರಲ್ಲೂ ಹೆಣ್ಣು ಮಕ್ಕಳು ಎಂದರೆ ಸಾಕು ಜವಾಬ್ದಾರಿ ಇನ್ನೂ ಹೆಚ್ಚು. ಎಲ್ಲದಕ್ಕೂ ಹೆಚ್ಚಾಗಿ ಮಗಳ ಬಗ್ಗೆ ಅಪ್ಪನಿಗೆ ಇರುವ ಕಾಳಜಿ. ನಾವು ಚಿಕ್ಕ ವಯಸ್ಸಿನಲ್ಲಿ ಅಪ್ಪ ಜತೆಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಅವನು ನೀಡುವ ಪ್ರೀತಿ, ವಿಶ್ವಾಸ, ಬದುಕಿನ ಪಾಠ ಯಾರೂ ನೀಡಲು ಸಾಧ್ಯವಿಲ್ಲ.
ಸಣ್ಣ ವಯಸ್ಸಿನಲ್ಲಿ ಅಪ್ಪನ ಜತೆ ಕೈ ಹಿಡಿದುಕೊಂಡು ನಡೆಯುವ ಖುಷಿಯೇ ಬೇರೆ. ಅಪ್ಪನ ಕೈ ಬಿಟ್ಟು ಹೋಗ್ತಾನೆ ಇರಲಿಲ್ಲ. ನಮ್ಮ ಬಾಲ್ಯವನ್ನೇ ಮರೆಯಲು ಸಾಧ್ಯವಿಲ್ಲ. ಅಪ್ಪ ಪೇಟೆಗೆ ಹೋಗಿ ಬಂದರೆ ಸಾಕು, ಅಪ್ಪ ಬಂದರು, ತಿಂಡಿ ತಂದರು ಎಂದು ಬೊಬ್ಬೆ ಹಾಕಿ ಕುಣಿದಾಡುತ್ತ ಇದ್ದೆವು. ತಂದೆ ತಾನು ಎಷ್ಟೆಲ್ಲ ಕಷ್ಟ ಪಡುತ್ತಿದ್ದೇನೆ ಎಂದು ಯೋಚನೆ ಮಾಡದೇ ತನ್ನ ಬದುಕನ್ನು ನಡೆಸುವ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಬರಬಾರದು ಎಂದು ಶ್ರಮ ಪಡುತ್ತಾನೆ. ತನ್ನ ಮಗ, ಮಗಳನ್ನು ಚೆನ್ನಾಗಿ ಓದಿಸಬೇಕು. ಆಮೇಲೆ ಒಂದು ದೊಡ್ಡ ಉದ್ಯೋಗ ಸಿಗುವಂತೆ ಮಾಡಬೇಕೆಂದು ಕನಸು ಕಾಣುತ್ತಾನೆ.
ಬಾಲ್ಯದ ದಿನಗಳು ಮತ್ತೂಮ್ಮೆ ಬರಬೇಕೆಂದು ಅನಿಸುತ್ತಿದೆ. ಅಪ್ಪನ ಕೈ ಹಿಡಿದು ನಡೆದ ದಿನಗಳು ಮತ್ತೆ ಮತ್ತೆ ಕಾಡುತ್ತವೆ. ಅಪ್ಪ ನಮ್ಮನ್ನು ಜತೆಗೆ ಕರೆದುಕೊಂಡು ಹೋಗಿ ಬೇಕಾದ ಆಟಿಕೆಗಳನ್ನು ತೆಗೆದುಕೊಡುತ್ತಿದ್ದ ದಿನಗಳು ಈಗಲೂ ಹಸುರು. ತಂದೆ ನಮಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ಈಗ ಕೆಲವರಿಗೆ ಗೊತ್ತಿಲ್ಲ. ತಂದೆ ಕಷ್ಟ ಪಟ್ಟು ದುಡಿದ ಹಣದಲ್ಲಿ ಶೋಕಿ ಮಾಡುವ ಅದೆಷ್ಟೋ ಜನರು ಇದ್ದಾರೆ. ಆದರೆ ತಾನು ದುಡಿದ ಹಣಕ್ಕೆ ಬೆಲೆ ಇದೆ ಎನ್ನುವವರೇ ಹೆಚ್ಚು. ಮಕ್ಕಳು ತಂದೆಯ ಬಳಿ ಹಣ ಕೇಳಿದರೆ ಯೋಚನೆ ಮಾಡದೇ ಕೊಡುತ್ತಾರೆ. ಆದರೆ ಅದೇ ಮಕ್ಕಳಲ್ಲಿ ತಂದೆ ಕೇಳಿದರೆ ಒಂದು ರೂಪಾಯಿ ಕೊಡದ ಮಕ್ಕಳೂ ಇದ್ದಾರೆ.
ತಂದೆ ಮಕ್ಕಳಿಗೆ ವಾಹನ ತೆಗೆದು ಕೊಟ್ಟರೂ ಕೆಲವರು ಅವರನ್ನು ಕರೆದುಕೊಂಡು ಹೋಗುವುದಿಲ್ಲ. ಬೇಕಾದರೆ ನಡೆದುಕೊಂಡು ಹೋಗಿ; ಇಲ್ಲದಿದ್ದರೆ ಆಟೋ ಮಾಡಿಕೊಂಡು ಹೋಗಿ ಎಂದು ರೇಗಾಡುವ ಅದೆಷ್ಟೋ ಜನಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ತಂದೆಯ ಪ್ರಾಧಾನ್ಯ ಗೊತ್ತಿಲ್ಲದೆ ಹಾಗೆ ವರ್ತಿಸುತ್ತಾರೆ. ಆಮೇಲೆ ಪ್ರಾಯಶ್ಚಿತ ಪಡುವುದನ್ನು ಬಿಟ್ಟು ತಂದೆಯ ಜತೆ ನಗು ನಗುತ್ತಾ ಮಾತನಾಡಿದರೆ ಅವರಿಗೆ ಸಂತೃಪ್ತಿ, ನಿಮಗೂ ಖುಷಿ.
ರಸಿಕಾ ಮುರುಳ್ಯ
ವಿವೇಕಾನಂದ ಕಾಲೇಜು, ಪುತ್ತೂರು