ಧಾರವಾಡ: ಮಕ್ಕಳು ಚೆನ್ನಾಗಿ ಇರಲೆಂದು ತಂದೆ-ತಾಯಿ ಎಂತಹ ತ್ಯಾಗವನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೀಗ ಮತ್ತೂಂದು ಉದಾಹರಣೆ ಸಿಕ್ಕಿದೆ. ಮಗ ಅನಾರೋಗ್ಯಕ್ಕೆ ತುತ್ತಾಗಿದ್ದನ್ನು ನೋಡಲಾಗದೇ ತಂದೆಯು ಕರುಳ ಕುಡಿ ಬದುಕಬೇಕೆಂದು ತನ್ನ ಒಂದು ಕಿಡ್ನಿ ದಾನ ಮಾಡಿದ್ದು, ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಮೊದಲ ಯಶಸ್ವಿ ಕಿಡ್ನಿ ಕಸಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶುಕ್ರವಾರ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ| ಮಹೇಶ ಬೆನ್ನಿಕಲ್ ಈ ಕುರಿತು ಮಾಹಿತಿ ನೀಡಿದರು. ಬಳ್ಳಾರಿಯ ಹರೀಶ(23) (ಹೆಸರು ಬದಲಾಯಿಸಲಾಗಿದೆ) ಎಂಬುವರು ಡಯಾಲಿಸಿಸ್ ಆ್ಯಂಡ್ ಇಂಡ್ ಸ್ಟೆಜ್ ಕಿಡ್ನಿ ಡಿಸೀಸ್ ಎಂಬ ರೋಗದಿಂದ ಬಳಲುತ್ತಿದ್ದರು. ಇವರು ಬಳ್ಳಾರಿಯಲ್ಲಿ ಹಿಮೋಡಯಾಲಿಸಿಸ್ ಪಡೆಯುತ್ತಿದ್ದರು. ನಂತರ ಎಸ್‌ಡಿಎಂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಿದ್ದಾರೆ ಎಂದರು.
ಹರೀಶ ಅವರು ಎಸ್‌ಡಿಎಂ ಆಸ್ಪತೆಗೆ ಬಂದು ಸೇರಿದಾಗ ಅವರ ಚಿಕ್ಕ ವಯಸ್ಸನ್ನು ಪರಿಗಣಿಸಿ ಕಿಡ್ನಿ ತಜ್ಞ ವೈದ್ಯರು ಕಿಡ್ನಿ ಕಸಿಗೆ ಒಳಗಾಗುವಂತೆ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಹರೀಶ ಕಿಡ್ನಿ ಕಸಿಗೆ ಒಪ್ಪಿ ಎಲ್ಲ ರೀತಿಯ ಚಿಕಿತ್ಸೆಗೆ ಒಳಗಾದರು. ನಂತರ ಕಿಡ್ನಿದಾನಿಗಳಿಗೆ ಹುಡುಕಲು ಮುಂದಾದಾಗ ಹರೀಶ ಅವರ ತಂದೆ ಪ್ರಕಾಶ(ಹೆಸರು ಬದಲಾಯಿಸಲಾಗಿದೆ) ತಾವೇ ಖುದ್ದಾಗಿ ಕಿಡ್ನಿ ದಾನ ಮಾಡುವುದಾಗಿ ಒಪ್ಪಿಕೊಂಡರು. ನಂತರ ವೈದ್ಯರು ಕನಿಷ್ಟ ಆಕ್ರಮಣ ಶೀಲ(ಲ್ಯಾಪರೋಸ್ಕೋಪಿ) ಚಿಕಿತ್ಸೆ ಮೂಲಕ ಪ್ರಕಾಶ ಅವರ ಕಿಡ್ನಿ ತೆಗೆದು ಮೇ 14ರಂದು ಹರೀಶ ಅವರಿಗೆ ಕಸಿ ಮಾಡಿದರು ಎಂದು ವಿವರಿಸಿದರು.
ಶಸ್ತ್ರ ಚಿಕಿತ್ಸೆ ನಂತರ ತಂದೆ ಹಾಗೂ ಮಗ ಚೇತರಿಸಿಕೊಂಡಿದ್ದು, ಈ ವೇಳೆ ಯಾವುದೇ ತೊಂದರೆ ಆಗದಂತೆ ಮೇಲ್ವಿಚಾರಣೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆ ಆದ 3ನೇ ದಿನಕ್ಕೆ ಹರೀಶ ಅವರ ಮೂತ್ರಪಿಂಡದ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿದ್ದವು. ನಂತರ 5ನೇ ದಿನಕ್ಕೆ ಹರೀಶ ಅವರ ತಂದೆ ಪ್ರಕಾಶ ಹಾಗೂ 10ನೇ ದಿನದಂದು ಹರೀಶ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.
ಡಾ|ಅಕ್ಕಮಹಾದೇವಿ ಎಸ್.ಎಸ್ ಮಾತನಾಡಿ, ಈ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಪಿಂಡ ಶಾಸ್ತ್ರಜ್ಞರು, ಮೂತ್ರ ಶಾಸ್ತ್ರಜ್ಞರು, ಅನಸ್ತೇಶಿಯಾ ತಂಡದವರಾದ ಡಾ|ಮಹೇಶ ಬಿನ್ನಿಕಲ್, ಡಾ|ಅತುಲ್ ದೇಸಾಯಿ, ಡಾ| ಮಂಜುನಾಥ ಆರ್., ಡಾ| ಸಂಜಯ ಪಾಟೀಲ, ಡಾ| ನಾಗರಾಜ ನಾಯ್ಕ ಸೇರಿದಂತೆ ಸರ್ಜಿಕಲ್ ಮೂತ್ರಶಾಸ್ತ್ರಜ್ಞರ ತಂಡ ಭಾಗವಹಿಸಿ ಯಶಸ್ವಿ ಆಗಿದೆ ಎಂದರು.
ಸದ್ಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಆರಂಭಿಸಿರುವುದರಿಂದ ತಜ್ಞ ವೈದ್ಯ ತಂಡವು ಉತ್ತರ ಕರ್ನಾಟಕದ ಬಡ ರೋಗಿಗಳ ಸೇವೆ ಮಾಡಲು ಸಹಾಯ ಮಾಡುತ್ತದೆ. ಮುಂದೆ ಬ್ರೇನ್ ಡೆಡ್ ರೋಗಿಗಳ ಕಸಿ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.
ಎಸ್‌ಡಿಎಂನ ವೈಸ್ ಚಾನ್ಸ್‌ಲರ್ ಡಾ| ನಿರಂಜನಕುಮಾರ, ಡಾ| ಶ್ರೀನಿವಾಸ, ಡಾ| ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.