Advertisement

ಕಂದನ ಉಳಿಸಿದ ಅಪ್ಪನ ಕಾಂಗರೂ ಪ್ರೀತಿ

12:57 PM Jan 28, 2018 | |

ಬೆಂಗಳೂರು: ಆಗಷ್ಟೇ ಹುಟ್ಟಿದ ಮಗನನ್ನು ಉಳಿಸಲು ಅಪ್ಪ ಕಾಂಗರೂವಿನ ಪ್ರೀತಿ ಕೊಟ್ಟು ಬದುಕಿಸಿದ ಕತೆ ಇದು. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳುತ್ತಿದ್ದ ದುರ್ಗಪ್ಪನಿಗೆ ಹುಟ್ಟಿದ ಮಗು ತೂಗುತ್ತಿದ್ದುದ್ದು 1500 ಗ್ರಾಂ! ತಾಯಿಗೆ ಹಾಲುಣಿಸುವಷ್ಟು ಶಕ್ತಿಯಿಲ್ಲವೆಂದಾಗ, ಅಪ್ಪ ಕೂಲಿ ಕೆಲಸ ತೊರೆದು ಮಗುವನ್ನು 2 ತಿಂಗಳು ಎದೆಗವುಚಿಕೊಂಡು, ಮೈ ಕಾವಿನಿಂದಲೇ ಕಂದನ ಪ್ರಾಣ ಉಳಿಸಿದರು. ಈಗ ಮಗುವಿನ ತೂಕ ಬರೋಬ್ಬರಿ ಮೂರೂವರೆ ಕಿಲೋ! ಕಿಲಕಿಲ ನಗುವ ಆ ಪುಟಾಣಿಗೆ “ಕಾರ್ತಿಕ’ ಎಂಬ ಮುದ್ದಾದ ಹೆಸರನ್ನಿಡಲಾಗಿದೆ.

Advertisement

ಗಾರೆ ಕೆಲಸ ಮಾಡಿ, ವಾರಕ್ಕೆ 3 ಸಾವಿರ ರೂ.ನಂತೆ ದುಡಿಯುತ್ತಿದ್ದ ದುರ್ಗಪ್ಪ, ಮಗು ಹುಟ್ಟಿದ ಸುದ್ದಿ ಕೇಳಿ ಬೆಂಗಳೂರಿನಿಂದ ತಮ್ಮ ಊರು ಗಂಗಾವತಿಗೆ ಓಡಿದರು. ಆದರೆ, ಆಗಷ್ಟೇ ಹುಟ್ಟಿದ ಮಗುವಿಗೆ ಕಾಡುತ್ತಿದ್ದದ್ದು “ಹೈಪೋಥರ್ಮಿಯಾ’! ಗರ್ಭದಲ್ಲಿ ಬೆಚ್ಚಗಿದ್ದ ಮಗುವಿನ ದೇಹ, ಅಪೌಷ್ಟಿಕವಾಗಿ ಹುಟ್ಟಿದ ಪರಿಣಾಮ, ತಣ್ಣಗಾಗುತ್ತಲೇ ಹೋಯಿತು. ಯಾವುದೇ ನವಜಾತ ಶಿಶುವಿಗೂ ಇದು ಪ್ರಾಣಾ ಪಾಯದ ಮುನ್ಸೂಚನೆ. ಸಿಸೇರಿಯನ್‌ ಆಗಿದ್ದ ಪತ್ನಿ ದುರ್ಗಮ್ಮ ಹಾಲುಣಿಸಲೂ ಅಶಕ್ತರಾಗಿದ್ದರಿಂದ, ಅವರಿಗೆ ಉಸಿರಾಟದ ತೊಂದರೆಯೂ ಇದ್ದಿದ್ದರಿಂದ, ಗಂಗಾವತಿಯ ತೇಜಸ್ವಿನಿ ಮಕ್ಕಳ ಆಸ್ಪತ್ರೆಯ ವೈದ್ಯರು ದುರ್ಗಪ್ಪ ಅವರಿಗೆ “ಕಾಂಗರೂ ಮದರ್‌ ಕೇರ್‌’ ಅಳವಡಿಸಿಕೊಳ್ಳಲು ಸೂಚಿಸಿದರು. ಅಪ್ಪ ಕಾಂಗರೂ ವಿನಂತೆ ಹಗಲೂರಾತ್ರಿ ಪ್ರೀತಿ ತೋರಿ, ಕೆಲವೊಮ್ಮೆ 12 ತಾಸು, ಇನ್ನೂ ಕೆಲವೊಮ್ಮೆ 24 ತಾಸೂ ಹೊತ್ತು ಕೊಂಡೇ, ಮಗುವನ್ನು ಉಳಿಸಿದರು.

ಏನಿದು ಕಾಂಗರೂ ಮದರ್‌ ಕೇರ್‌ (ಕೆಎಂಸಿ)?
ಕೊಪ್ಪಳ, ಗಂಗಾವತಿಯಂಥ ಪ್ರದೇಶಗಳಲ್ಲಿ ಅಪೌಷ್ಟಿಕವಾಗಿ ಹುಟ್ಟುವ ಮಕ್ಕಳ ಸಂಖ್ಯೆ ಅಧಿಕವಾಗಿದ್ದು, ಇದನ್ನು ನಿವಾರಿಸಲೆಂದೇ ಇತ್ತೀಚೆಗೆ ಅಲ್ಲಿನ ಆಸ್ಪತ್ರೆಗಳು ಕಾಂಗರೂ ಮದರ್‌ ಕೇರ್‌ನ ಮೊರೆ ಹೋಗಿವೆ. ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇಡುವ ಬದಲು ಕಂದನನ್ನು ಎದೆಗವುಚಿ ಕೊಂಡೇ ಇರಲು ತಾಯಿಗೆ ಸೂಚಿಸುತ್ತಾರೆ. ಆದರೆ, ದುರ್ಗಪ್ಪ ಅವರ ಪ್ರಕರಣದಲ್ಲಿ ತಂದೆಯೇ ಕಾಂಗರೂ ಅಪ್ಪುಗೆಯ ಚಿಕಿತ್ಸೆಗೆ ಸಹಕರಿಸಬೇಕಾಯಿತು. 

ಮಗುವಿಗೆ ಏನು ಲಾಭ?
 ಅಪ್ಪನ ಚರ್ಮದಿಂದ- ಮಗುವಿನ ಚರ್ಮಕ್ಕೆ ಉಷ್ಣತೆ ರವಾನೆಯಾಗುವುದರಿಂದ, ಮಗು ಶರೀರ ಬೆಚ್ಚಗಾಗುತ್ತದೆ. ಪ್ರೀ ಮೆಚೂರ್‌x ಆಗಿ ಹುಟ್ಟಿದ ಮಕ್ಕಳಿಗೆ ಗರ್ಭದ ಆಸರೆ ದೊರೆತಂತಾಗಿ, ನಿರ್ಭಯ ವಾತಾವರಣ ಸೃಷ್ಟಿಯಾ ಗುತ್ತದೆ. ಸಮಯಕ್ಕೆ ಸರಿಯಾಗಿ ತಾಯಿಯ ಹಾಲನ್ನೂ ಸೇವಿಸಿ, ಶಿಶುಗಳು ಬಹುಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತವೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿದ್ದರೆ, ಕೆಎಂಸಿಯಿಂದ ನಿವಾರಣೆಯಾಗ ುತ್ತದೆ. ಮೆದುಳಿನ ಬೆಳವಣಿಗೆಯೂ ಉತ್ತಮವಾಗು ತ್ತದೆ. ವೈಜ್ಞಾನಿಕವಾಗಿ ಕಾಂಗರೂ ಕೂಡ ಇದೇ ರೀತಿ ಮರಿಗಳನ್ನು ಬೇಗನೆ ದೊಡ್ಡ ಮಾಡುವುದರಿಂದ, 1976ರಲ್ಲಿ ಮೊದಲ ಬಾರಿಗೆ ಸ್ವೀಡನ್‌ನಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿತ್ತು.

Advertisement

ಈಗ ವಿಶ್ವ ಭೂಪಟ ದಲ್ಲಿ ಅಪೌಷ್ಠಿಕ ಪ್ರಕರಣಗಳು ಹೆಚ್ಚಾಗಿರುವ ಇಥಿಯೋಪಿಯಾವೂ ಸೇರಿ, ಕರ್ನಾಟಕದ ಕೋಲಾರ, ಕೊಪ್ಪಳದಂಥ ಜಿಲ್ಲೆಗಳಲ್ಲೂ ಇದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಗದರ್ಶನದಲ್ಲಿ ಅಳವಡಿಸಲಾಗುತ್ತಿದೆ. ಕೆಎಂಸಿ ಮಾಡುವ ವೇಳೆ ಮಗುವನ್ನು ಆಗಾಗ್ಗೆ ಕೈಯಲ್ಲಿ ಎತ್ತಿಕೊಳ್ಳುವಂತಿಲ್ಲ, ನಿರ್ದಿಷ್ಟ ತೂಕ ಹೊಂದುವ ತನಕ ಸ್ನಾನ ಮಾಡಿ ಸುವಂತಿಲ್ಲ, ಬಾಟಲಿ ಹಾಲನ್ನು ಕುಡಿಸುವಂತಿಲ್ಲ ಎಂದು ವೈದ್ಯರು ಸೂಚಿಸುತ್ತಾರೆ. ಕೊಪ್ಪಳ, ಗಂಗಾವತಿಯ ಭಾಗಗಳಲ್ಲಿ ಶಿಶು ಮರಣಗಳನ್ನು ತಪ್ಪಿಸುವಲ್ಲಿ ಕೆಎಂಸಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುತ್ತದೆ ಎನ್ನುತ್ತವೆ ವೈದ್ಯಕೀಯ ಮೂಲಗಳು.

ಮಗುವನ್ನು ಎದೆ ಮೇಲೆ ಹೊತ್ತುಕೊಳ್ಳುವುದಕ್ಕಾಗಿಯೇ ನಾನು ಎರಡು ತಿಂಗಳು ಕೂಲಿ ಕೆಲಸ ಬಿಟ್ಟೆ. ಈಗ ಮಗ ನಗುತ್ತಿ ದ್ದಾನೆ. ಅವನ ಆರೋಗ್ಯ ಚೆನ್ನಾಗಿದೆ.
 ●ದುರ್ಗಪ್ಪ, ಕೂಲಿ ಕೆಲಸಗಾರ

ಮಗು ಅಪೌಷ್ಟಿಕವಾಗಿ ಹುಟ್ಟಿದರೆ ಕಾಂಗರೂ ಮದರ್‌ ಕೇರ್‌ ಮಾಡುವುದೇ ಸೂಕ್ತ. ತಾಯಿಯ ಅಥವಾ ತಂದೆಯ ಚರ್ಮದಿಂದ ಬಿಸಿ ರವಾನೆಯಾಗಿ,ಮಗುವಿನ ತೂಕ ಹೆಚ್ಚುತ್ತವೆ.
 ●ಡಾ. ಎಸ್‌.ಜಿ. ಮಡ್ಡಿ, ತೇಜಸ್ವಿನಿ ಚಿಲ್ಡ್ರನ್‌ ಆಸ್ಪತ್ರೆ, ಗಂಗಾವತಿ

 ●ಕೀರ್ತಿ ಕೋಲ್ಗಾರ್‌
 

Advertisement

Udayavani is now on Telegram. Click here to join our channel and stay updated with the latest news.

Next