“ಒಬ್ಬ ಕಲಾವಿದನಿಗೆ ಆ್ಯಕ್ಟ್ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಾಗಿದ್ದು, ಆವಾಗಲೇ…’ ಹೀಗೆ ಹೇಳುತ್ತಾ ಒಂದು ನಿಟ್ಟುಸಿರು ಬಿಟ್ಟರು ನಟ ಗಣೇಶ್. ಇಂಥದ್ದೊದು ಮಾತಿಗೆ ಕಾರಣವಾಗಿದ್ದು, ಗಣೇಶ್ ಅಭಿನಯಿಸುತ್ತಿರುವ “ಗಿಮಿಕ್’ ಚಿತ್ರ. ಅಂದಹಾಗೆ, ಈ ವಾರ ಗಣೇಶ್ ಅಭಿನಯದ “ಗಿಮಿಕ್’ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿನ ಕಾಮಿಡಿ ಸನ್ನಿವೇಶದ ಹಿಂದಿನ ನೋವಿನ ಸಂಗತಿಗಳನ್ನು ಭಾವುಕರಾಗಿ ತೆರೆದಿಟ್ಟರು.
ಕಳೆದ ವರ್ಷ ಆಗಸ್ಟ್ 27ರಂದು ದೊಡ್ಡಬಳ್ಳಾಪುರದ ಹತ್ತಿರ ಮನೆಯೊಂದರಲ್ಲಿ “ಗಿಮಿಕ್’ ಚಿತ್ರದ ಚಿತ್ರೀಕರಣ ನಡೆಯುತ್ತಿರುತ್ತದೆ. ಇದೇ ದಿನ ಮಧ್ಯಾಹ್ನದ ಸುಮಾರಿಗೆ ಗಣೇಶ್ ಅವರಿಗೆ ಅವರ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರ ಬಗ್ಗೆ ಫೋನ್ ಬರುತ್ತದೆ. ಆದರೆ ಸೆಟ್‌ನಲ್ಲಿ ಅನೇಕ ಕಲಾವಿದರು, ತಂತ್ರಜ್ಞರು ಇದ್ದು, ಚಿತ್ರದಲ್ಲಿ ಬರುವ ಪ್ರಮುಖ ಭಾಗವೊಂದರ ಚಿತ್ರೀಕರಣ ನಡೆಯುತ್ತಿದ್ದರಿಂದ, ಇದ್ದಕ್ಕಿದ್ದಂತೆ ಶೂಟಿಂಗ್ ಬಿಟ್ಟು ಹೊರಟರೆ ಇಡೀ ಚಿತ್ರೀಕರಣ ನಿಲ್ಲಿಸಬೇಕಾಗುತ್ತದೆ.
ಅಲ್ಲದೆ ಇಡೀ ಚಿತ್ರತಂಡಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಗಣೇಶ್ ಚಿತ್ರೀಕರಣ ಮುಂದುವರೆಸುತ್ತಾರೆ. ಬಳಿಕ ಮಧ್ಯಾಹ್ನ ಸುಮಾರು 3.30ರ ಹೊತ್ತಿಗೆ ಗಣೇಶ್ ತಂದೆ ನಿಧನರಾದ ಸುದ್ದಿ ಮೊದಲು ನಟ ರವಿಶಂಕರ್ ಅವರಿಗೆ ತಿಳಿಯುತ್ತದೆ. ಬಳಿಕ ಗಣೇಶ್ ಅವರಿಗೂ ಗೊತ್ತಾಗುತ್ತದೆ. ಆದರೆ ಈ ವಿಷಯವನ್ನು ನಿರ್ಮಾಪಕರಿಗೆ ತಿಳಿಸಿದ ಗಣೇಶ್, ನಿರ್ದೇಶಕರು ಸೇರಿದಂತೆ ಬೇರೆ ಯಾರಿಗೂ ಈ ವಿಷಯ ತಿಳಿಸದೆ ಚಿತ್ರೀಕರಣ ಮುಂದುವರೆಸುವಂತೆ ಹೇಳುತ್ತಾರೆ.
ಅದರಂತೆ ಸಂಜೆಯವರೆಗೆ ಚಿತ್ರೀಕರಣ ಪೂರ್ಣಗೊಂಡು, ಚಿತ್ರತಂಡ ಪ್ಯಾಕಪ್ ಹೇಳಿದ ಬಳಿಕ ಗಣೇಶ್ ತಮ್ಮ ತಂದೆಯ ಅಂತಿಮ ದರ್ಶನಕ್ಕೆ ತೆರಳುತ್ತಾರೆ. ಚಿತ್ರತಂಡವೂ ಸೇರಿದಂತೆ ಬಹುತೇಕರಿಗೆ ಗೊತ್ತಿರದ “ಗಿಮಿಕ್’ ಹಿಂದಿನ ನೋವಿನ ಸನ್ನಿವೇಶವನ್ನು ಮೊದಲು ತೆರೆದಿಟ್ಟವರು ನಿರ್ದೇಶಕ ನಾಗಣ್ಣ. ಈ ಬಗ್ಗೆ ಮಾತಿಗಿಳಿದ ಗಣೇಶ್, “ಅಂದು ನಾವು “ಗಿಮಿಕ್’ ಚಿತ್ರದಲ್ಲಿ ಬರುವ ಶ್ರೀಮಂತ ಮನೆಯ ಹೆಣ್ಣನ್ನು ಕೇಳಲು ಹೋಗುವ ಸಂದರ್ಭ ಅದು.
ಚಿತ್ರದ ತುಂಬಾ ಪ್ರಮುಖ ದೃಶ್ಯ ಅದು. ಚಿತ್ರದಲ್ಲಿ ಪ್ರೇಕ್ಷಕರಿಗೆ ತುಂಬಾ ನಗುತರಿಸುವ ಕಾಮಿಡಿ ಸೀನ್, ಕಾಮಿಡಿ ಡೈಲಾಗ್ ಅಲ್ಲಿದೆ. ಅದಕ್ಕಾಗಿ ಚಿತ್ರದ ಅನೇಕ ಕಲಾವಿದರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಮಾಡಲಾಗುತ್ತಿತ್ತು. ಅನೇಕ ದೊಡ್ಡ ದೊಡ್ಡ ಕಲಾವಿದರು ಅಲ್ಲಿದ್ದರು. ಅಂದು ನಾನೇನಾದ್ರೂ ಶೂಟಿಂಗ್ ನಿಲ್ಲಿಸಿ ಹೊರಟಿದ್ದರೆ, ಮತ್ತೆ ಎಲ್ಲರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಮಾಡೋದು ಎಲ್ಲರಿಗೂ ಕಷ್ಟವಾಗುತ್ತಿತ್ತು.
ಒಂದು ವೇಳೆ ಆ ಸೀನ್ ಶೂಟಿಂಗ್ ಮಿಸ್ ಆದ್ರೆ, ಮತ್ತೆ ಅದನ್ನು ಶೂಟ್ ಮಾಡುವುದು ಕಷ್ಟವಾಗಬಹುದು. ಇದರಿಂದ ನಿರ್ಮಾಪಕರು, ನಿರ್ದೇಶಕರಿಗೂ ತೊಂದರೆಯಾಗುತ್ತಿತ್ತು. ಹಾಗಾಗಿ ಆ ದಿನದ ಶೂಟಿಂಗ್ ಕಂಪ್ಲೀಟ್ ಮಾಡುವ ನಿರ್ಧಾರಕ್ಕೆ ಬಂದೆ. ಅದೂ ಕೂಡ “ಗಿಮಿಕ್’ ಚಿತ್ರದಲ್ಲಿ ಬರುವ ಕಾಮಿಡಿ ಸೀನ್ ಅದು. ಒಂದು ಕಡೆ ಅಪ್ಪನ ಅಗಲಿಕೆಯ ನೋವು, ಮತ್ತೂಂದು ಕಡೆ ಪ್ರೇಕ್ಷಕರನ್ನು ನಗಿಸುವ ಜವಾಬ್ದಾರಿ. ಒಬ್ಬ ಕಲಾವಿದನಿಗೆ ಆ್ಯಕ್ಟ್ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಾಗಿದ್ದು, ಆವಾಗಲೇ…’ ಎಂದು “ಗಿಮಿಕ್’ ತೆರೆ ಹಿಂದಿನ ವೃತ್ತಾಂತ ತೆರೆದಿಟ್ಟರು.
“ಯಾವುದೇ ಸೀನ್ ಆದ್ರೂ ನಾನು ಅದನ್ನು ಖುಷಿಯಿಂದ ಮಾಡುತ್ತೇನೆ. ಆದ್ರೆ “ಗಿಮಿಕ್’ನಲ್ಲಿ ಪ್ರೇಕ್ಷಕರಿಗೆ ಖುಷಿಕೊಡುವ ಈ ಸೀನ್ ಅನ್ನು ದುಃಖದಲ್ಲಿಯೇ ಮಾಡಬೇಕಾಯಿತು. ನಿಜಕ್ಕೂ ಈ ಸಂದರ್ಭ ಕಲಾವಿದರ ಕಷ್ಟಗಳು ಏನು ಅಂಥ ನನಗೆ ಅರ್ಥ ಮಾಡಿಸಿತು. ಡಬ್ಬಿಂಗ್ ಮಾಡುವಾಗಲೂ, ಆ ಸೀನ್ ಬಂದಾಗ ಸಾಕಷ್ಟು ಭಾವುಕನಾದೆ. ಕೆಲ ಸಮಯ ತೆಗೆದುಕೊಂಡು ಡಬ್ಬಿಂಗ್ ಮುಂದುವರೆಸಬೇಕಾಯಿತು’ ಎನ್ನುತ್ತಾರೆ ಗಣೇಶ್.