Advertisement

ಅಪ್ಪನ ಆ 1 ದಿನದ ನಿರ್ಧಾರ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು!

03:00 PM Jun 16, 2018 | Sharanya Alva |

ಅಪ್ಪ…! ಈ ಎರಡಕ್ಷರದ ಪದದಲ್ಲಿರುವ ಗತ್ತು ಗಮ್ಮತ್ತು ತಿಳಿದವರೆ ಬಲ್ಲರು. ಹೌದು, ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಧೈರ್ಯ ಎಲ್ಲವನ್ನು ಸಾಧಿಸಲು ಬೆನ್ನೆಲುಬಾಗಿ ನಿಲ್ಲಬಲ್ಲ ಸ್ಪೂರ್ತಿ…! ಹೇಳುತ್ತಾ ಹೋದರೆ ಈ ಎರಡಕ್ಷರದ ಪದಕ್ಕೆ ವ್ಯಾಖ್ಯಾನವೇ ಕಡಿಮೆ ಆದೀತು. ಇಂದು ಅಪ್ಪಂದಿರ ದಿನದಲ್ಲಿ ನನ್ನ ಪ್ರೀತಿಯ ಅಪ್ಪನ ಕುರಿತಾಗಿ ಅಕ್ಷರ ರೂಪ.

Advertisement

ಅಪ್ಪ ಎಂದಾಗ ಎಲ್ಲರಿಗೂ ಮೊದಲು ನೆನಪಾಗುವುದು ಚಾಕಲೇಟ್‌, ಶಾಲೆ, ಆಟ, ಪಾಠ…, ಆದರೆ, ನನಗೆ ಅಪ್ಪ ಎಂದಾಗ ಮೊದಲು ನೆನಪಾಗುವುದು 1999ರ ಆ ಒಂದು ಶನಿವಾರದ ಸಂಜೆ(ನನಗೆ 13ರ ಪ್ರಾಯ ಇದ್ದಿರಬಹುದು). ಆ ಸಮಯದಲ್ಲಿ ನನ್ನ ಅಪ್ಪ ಎಲ್ಲಿ? ಯಾವ ಕೆಲಸ ಮಾಡುತ್ತಿದ್ದರು ಎಂಬುದು ಕೂಡ ತಿಳಿದಿರಲ್ಲಿಲ್ಲ. ಕಾರಣ ಆಪ್ಪನ ಪ್ರೀತಿಗಿಂತ ಅಜ್ಜ, ಆಜ್ಜಿಯ ಪ್ರೀತಿಯ ಜೊತೆಗೆ ಅಮ್ಮನ ನೋವು, ಕಾಳಜಿ ಸ್ವಲ್ಲ ಮಟ್ಟಿಗೆ ಅರಿವಿತ್ತು. ಈ ಸಮಯದಲ್ಲಿ ಅಪ್ಪನೊಂದಿಗೆ ಒಡನಾಟ ಕಡಿಮೆಯೆ ಇತ್ತು ಯಾವಾಗ ಮನೆಗೆ ಬರುತ್ತಿದ್ದರು? ಯಾವಾಗ ಹೋಗುತ್ತಿದ್ದರು ಎಂಬುದು ಕೂಡ ತಿಳಿದಿರಲಿಲ್ಲ.

ಮಕ್ಕಳೇ ಶಾಲೆಗೆ ಹೋಗುತ್ತಿದ್ದೀರಾ? ಏನು? ಎಂಥಾ ಎಂಬುದನ್ನು ವಿಚಾರಿಸಿದ ನೆನಪು ಕೂಡ ಇಲ್ಲ ಆದ್ದರಿಂದ ಅಲ್ಲಿಯ ತನಕದ ಅಪ್ಪನ ಪ್ರೀತಿ ಸಿಕ್ಕ ನೆನಪು ಕೂಡ ಇಲ್ಲ(ಕ್ಷಮಿಸಿ ಬಿಡು ಅಪ್ಪ).  ಇದಕ್ಕೆಲ್ಲ ಕಾರಣ ಅವರು ಕುಡಿತದ ದಾಸರಾಗಿದ್ದದ್ದು”. ಇಂತಹ ಸಮಯದಲ್ಲಿ ನಮ್ಮ ಊರಿಗೆ ಧರ್ಮಸ್ಥಳ ಮಂಜುನಾಥನ ವರ ಪ್ರಸಾದವೆಂಬಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯು ಕಾರ್ಯಾರಾಂಭ ಮಾಡಲು ಸಿದ್ದತೆ ನಡೆಯುತ್ತಿತ್ತು. ಅದರ ಯೋಜನೆಯಂತೆ ಮನೆಯ ಸುತ್ತ ಮುತ್ತಲಿನ 6 ಜನ ಸದಸ್ಯರು ಸೇರಿ ಒಂದು ತಂಡವನ್ನಾಗಿ ಮಾಡಿಕೊಂಡು ಈ ಯೋಜನೆಯನ್ನು ಪ್ರಾರಂಭ ಮಾಡಿತು(ಅದು ಅಗಸ್ಟ್‌ 12 1999). 6 ಜನರ ತಂಡದಲ್ಲಿ ನಮ್ಮ ತಂದೆಯೂ ಕೂಡ ಒಬ್ಟಾರಾಗಿದ್ದರು. ಇವರೆಲ್ಲರಲ್ಲಿ ನಮ್ಮ ತಂದೆಯೇ ವಿಶೇಷವಾಗಿದ್ದರು ಯಾಕೆಂದರೆ ಉಳಿದ ಯಾರಿಗೂ ಕುಡಿತದ ಚಟ ಇರಲಿಲ್ಲ. ಆದರೆ ಈ ಐವರು ಹೇಗಾದರೂ ಮಾಡಿ ನಮ್ಮ ತಂದೆಯ ಕುಡಿತದ ಚಟವನ್ನು ದೂರ ಮಾಡಬೇಕೆಂದು ಪ್ರಯತ್ನ ಪಡುತ್ತಿದ್ದದ್ದು ಇಂದಿಗೂ ನೆನಪಿದೆ. ಯೋಜನೆಯಲ್ಲಿ ಮಧ್ಯವರ್ಜನಶಿಬಿರದ ಬಗ್ಗೆ ಮಾಹಿತಿ ಕೂಡ ಸಿಗುತಿತ್ತು.

ಇದೆಲ್ಲವನ್ನು ಗಮನಿಸಿದ ತಂದೆಯವರು “ಸ್ವಪ್ರೇರಣೆ”ಯಿಂದ ಯೋಜನೆ ಪ್ರಾರಂಭಗೊಂಡು 3ರಿಂದ 4 ತಿಂಗಳ ನಂತರದಲ್ಲಿ ಒಂದು ಶನಿವಾರದ ಸಂಜೆ5.30ರಿಂದ 6 ಗಂಟೆಯ ಸುಮಾರಿಗೆ 2 ಕೋಳಿಯೊಂದಿಗೆ ಮನೆಗೆ ಆಗಮಿಸಿದ ಅವರು ಅಮ್ಮನಲ್ಲಿ ಇವತ್ತು ರಾತ್ರಿ ಮನೆಗೆ ಯೋಜನೆಯ ಸದಸ್ಯರು ಊಟಕ್ಕೆ ಬರುತ್ತಿದ್ದಾರೆ ಕೋಳಿ ಸಾರು, ನೀರ್‌ ದೋಸೆ ತಯಾರು ಮಾಡು ಎಂದು ಹೇಳಿ, ಅವರೊಂದಿಗೆ ನನ್ನನ್ನು ಕರೆದುಕೊಂಡು ಹೋದರು.  ಅವರೊಂದಿಗೆ ನಾನು ಹೆಜ್ಜೆ ಇಟ್ಟೆ 5ಜನ ಸದಸ್ಯರ ಮನೆಗೆ ತೆರಳಿ ರಾತ್ರಿ ಊಟಕ್ಕೆ ಆಮಂತ್ರಿಸಿದರು.  ಅಪ್ಪನ ಆಜ್ಞೆಯಂತೆ ಮನೆಯಲ್ಲಿ ಅಮ್ಮನ ಊಟ ರೆಡಿಯಾಗಿತ್ತು. ರಾತ್ರಿ ಎಲ್ಲರು ಊಟಕ್ಕೆ ಬಂದರು ಆ ಸಮಯದಲ್ಲಿ ತಂದೆಯವರು ಏನು  ಹೇಳಬಹುದು? ಯಾಕಾಗಿ ಈ ವಿಶೇಷ ಊಟ?ಎಂಬ ಕಾತುರ ಎಲ್ಲರದಾಗಿತ್ತು.

ಈ ಎಲ್ಲ ಕಾತರಕ್ಕೆ ಕೊನೆಗೂ ತೆರೆ ಎಳೆದ ಅವರು ಹೇಳಿದ ಮಾತು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. “ಇವತ್ತಿನಿಂದ ನಾನು ಕುಡಿಯೋದನ್ನು ಸಂಪೂರ್ಣವಾಗಿ ತ್ಯಜಿಸುತ್ತಿದ್ದೇನೆ ಇಷ್ಟು ದಿನ ನಿಮಗೆಲ್ಲ ನೋವು ಕೊಟ್ಟಿದ್ದೇನೆ ದಯವಿಟ್ಟು ಕ್ಷಮಿಸಿ “. ನನ್ನ ಕೊನೆಯ ದಿನದ ಸೇವನೆಯನ್ನು ಮುಗಿಸಿಕೊಂಡು ಬರ್ತೇನೆ ನೀವೆಲ್ಲ ಊಟ ಮಾಡಿ ಎಂದು ಕಣ್ಮರೆಯಾದವರು 45 ನಿಮಿಷಗಳ ನಂತರ ಅದೆಷ್ಟು ಸಾಧ್ಯವೋ ಅಷ್ಟು ಮದ್ಯ ಸೇವಿಸಿ ಮನೆ ಒಳಗೆ ಬಂದು ಮುಖ್ಯ ದ್ವಾರದ ಮುಂಭಾಗದಲ್ಲಿ ಬಂದು ಮಲಗಿದ್ದರು.  ಆದರೆ ಆ ದಿನ ನಾವೆಲ್ಲ ಅವರನ್ನು ಹೆಮ್ಮಯಿಂದಲೇ ಎತ್ತಿ ಮತ್ತೊಂದು ಕೋಣೆಯಲ್ಲಿ ಮಲಗಿಸಿದ್ದೆವು ಅವರ ಕುಡಿತ ಈ ಕ್ಷಣಕ್ಕೆ ಕೊನೆಗೊಳ್ಳಲಿದೆ ಎಂಬ ಸಂತೋಷ ಮನೆ ಮಾಡಿತ್ತು. ಅಂದು ನನ್ನ ಅಮ್ಮ ಹಾಗೂ ಅಜ್ಜಿಯ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಜೀವನದಲ್ಲಿ ನಾವೆನೋ ಸಾಧಿಸಿದೆವು ಎಂಬ ಸಂಭ್ರಮ ಎದ್ದು ಕಾಣುತ್ತಿತ್ತು. ಇವೆಲ್ಲದರ ನಡುವೆ ಮನೆಗೆ ಬಂದವರು ಊಟ ಮುಗಿಸಿಕೊಂಡು ಅವರವರ ಮನೆಗೆ ತೆರಳಿದರು. ಜೊತೆಗೆ ನಾವು ಊಟ ಮಾಡಿ ಮಲಗಿದೆವು. ರಾತ್ರಿ ಬೆಳಗಾಯಿತು,  ಆದರೆ ಆ ಸೂರ್ಯೋದಯ ನನ್ನ ಅಪ್ಪನಿಗೆ ಹೊಸದೊಂದು ಬೆಳಕನ್ನು ಮೂಡಿಸಿತ್ತು. ನವ ಜೀವನವನ್ನು ರೂಪಿಸಿತ್ತು. ನವ ಜೀವನ ರೂಪುಗೊಂಡು ಇಂದಿಗೆ19 ವರ್ಷ ಸಂದಿದೆ.

Advertisement

“ಆಂದಿನ ಅಪ್ಪನ ತೀರ್ಮಾನ ಇಂದು ಸಮಾಜದಲ್ಲಿ ಎಲ್ಲರಿಂದಲೂ ಸಮ್ಮಾನ ಗೌರವಕ್ಕೆ ಕಾರಣ”.

ಅಂದು ಊರಿನಲ್ಲಿ ಎಲ್ಲರಿಂದಲೂ “ಛಿ”  ಧೂಮ(ನಿಜವಾದ ಹೆಸರು ಗೋಪಾಲ) ಕುಡಿದು ಎಲ್ಲಾದಾರೂ ಬಿದ್ದು ಸಾಯುತಿಯಾ ?ಎನ್ನುತ್ತಿದ್ದವರು. ಇಂದು ಬದುಕಿದರೆ ಸ್ವಾಬಿಮಾನಿಯಾಗಿ ಧೂಮ (ಗೋಪಾಲ)ನ ತರಹ ಬದುಕಬೇಕು ಎಂಬ ಮಾತು ಕೇಳಿ ಬರಬೇಕಾದರೆ ನಿಮ್ಮ ಮಕ್ಕಳಾದ(ರಮೇಶ, ಉಮೇಶ, ಮಹೇಶ, ಸುರೇಶ. ಪ್ರವೀಣ) ನಮಗೆ ನಿಜವಾಗಲೂ ಹೆಮ್ಮ ಆನ್ನಿಸುತ್ತಿದೆ ಅಪ್ಪ.

ಥ್ಯಾಂಕ್ಸ್‌ “ಅಪ್ಪ”

I Love You “ಅಪ್ಪ”

*ಮಹೇಶ್ ನಾಯ್ಕ್ 

Advertisement

Udayavani is now on Telegram. Click here to join our channel and stay updated with the latest news.

Next