Advertisement

ಮೃತ ತಂದೆಯ ಆಧಾರ್‌ ದತ್ತಾಂಶಕ್ಕೆ ಅರ್ಜಿ

06:45 AM Mar 17, 2018 | Team Udayavani |

ಬೆಂಗಳೂರು: ತಮ್ಮ ತಂದೆಯವರು ಮೃತಪಟ್ಟಿರುವುದರಿಂದ ಅವರ ಬಯೋಮೆಟ್ರಿಕ್‌ ದತ್ತಾಂಶಗಳು ಸರ್ಕಾರಕ್ಕೆ ಅಗತ್ಯವಿಲ್ಲ. ದತ್ತಾಂಶ ದುರ್ಬಳಕೆಯಾಗುವ ಸಾಧ್ಯತೆಯಿರುವುದರಿಂದ ತಮ್ಮ ತಂದೆಯ ಬಯೋಮೆಟ್ರಿಕ್‌ ದತ್ತಾಂಶಗಳನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ ವಾಪಸ್‌ ಕೊಡಿಸಿ ಎಂದು ಬೆಂಗಳೂರಿನ ಸಂತೋಷ್‌ ಮಿನ್‌ ಬಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಬಯೋ ಮೆಟ್ರಿಕ್‌ ಪದ್ಧತಿ ವ್ಯವಸ್ಥೆಯಿಂದ ತಂದೆಯವರು ತೀವ್ರ ತೊಂದರೆ ಅನುಭವಿಸಿದ್ದರು. ಬೆಂಗಳೂರಿನ ಭವಿಷ್ಯ ನಿಧಿ ಕಚೇರಿಯೊಂದರಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸುವಾಗ ಬೆರಳಚ್ಚು ಹಾಗೂ ಕಣ್ಣಿನ ಪೊರೆ ನಿವಾರಣೆ ಶಸ್ತ್ರಚಿಕಿತ್ಸೆಯಿಂದ ಬಯೋಮೆಟ್ರಿಕ್‌ ದೃಢೀಕರಣ ವಿಫ‌ಲವಾಗಿತ್ತು. ಇದರಿಂದ ತೀವ್ರ ಅಪಮಾನಕ್ಕೆ ಒಳಗಾಗಿದ್ದ ಅವರು ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿರುವ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದರು.

ಭವಿಷ್ಯ ನಿಧಿ ಕಚೇರಿಗಳಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ಪಡೆಯಲು ಡಯಾಲಿಸಿಸ್‌, ಪ್ಯಾರಾಲಿಸಿಸ್‌, ಕೀಮೋ ಥೆರಪಿ ಆಗಿರುವ ಹಿರಿಯ ನಾಗರಿಕರು ಬಂದು ತೊಂದರೆ ಅನುಭವಿಸುತ್ತಿದ್ದದ್ದನ್ನು ಗಮನಿಸಿದ್ದ ಅವರು ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದರು. ವಯಸ್ಸಾಗಿ ಬೆರಳುಗಳು ಮೃದುವಾದ ಕಾರಣ ಬಯೋಮೆಟ್ರಿಕ್‌ ನೀಡಲಾಗದೆ ಹಿರಿಯ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಪತ್ರ ಬರೆದಿದ್ದು, ಅದು ಪೂರ್ಣಗೊಳಿಸಿ ಪ್ರಧಾನಿಗಳಿಗೆ ಕಳುಹಿಸುವ ಮೊದಲೇ ತೀರಿಕೊಂಡರು ಎಂದು ಸಂತೋಷ್‌ ತಿಳಿಸಿದ್ದಾರೆ.

ಬಯೋಮೆಟ್ರಿಕ್‌ ವ್ಯವಸ್ಥೆಯಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಆಧಾರ್‌ ಯೋಜನೆ ರದ್ದುಪಡಿಸಬೇಕು. ಜತೆಗೆ ತಂದೆಯ ಬಯೋಮೆಟ್ರಿಕ್‌ ದತ್ತಾಂಶ ಸರ್ಕಾರಕ್ಕೆ ಉಪಯೋಗವಿಲ್ಲದ ಕಾರಣ ಮುದ್ರಿತ ದತ್ತಾಂಶವನ್ನು ವಾಪಸ್‌ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠವನ್ನು ಕೋರಿದ್ದು, ನ್ಯಾಯಪೀಠ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿದೆ.

ಫ್ರೇಮ್ ಕಟ್ಟಿಸಿಕೊಳ್ಳುತ್ತೇನೆ
ತಂದೆಯ ಬಯೋಮೆಟ್ರಿಕ್‌ ದತ್ತಾಂಶಗಳನ್ನು ಪ್ರಾಧಿಕಾರ ಮುದ್ರಿತ ರೂಪದಲ್ಲಿ ಹಿಂದಿರುಗಿಸಿದರೆ, ಅದಕ್ಕೆ ಫ್ರೇಮ್  ಕಟ್ಟಿಸಿ ಜೋಪಾನವಾಗಿ ಇರಿಸಿಕೊಳ್ಳುತ್ತೇನೆ. ಅದನ್ನು ನೋಡಿದಾಗಲೆಲ್ಲ ಅವರು ನಮ್ಮೊಂದಿಗೆ ಇರುವಂತೆ ಹಾಗೂ ಅವರ ಆಶೀರ್ವಾದ ನಮ್ಮ ಮೇಲಿದೆ ಎಂಬ ಭಾವನೆ ಮೂಡಲಿದೆ ಎಂದು ಸಂತೋಷ್‌ “ಉದಯವಾಣಿ’ಗೆ  ತಿಳಿಸಿದರು. ಪರಿಸ್ಥಿತಿ ಬದಲಿಸಬೇಕಿದೆ

Advertisement

ಪರಿಸ್ಥಿತಿ ಬದಲಿಸಬೇಕಿದೆ
ಹಲವಾರು ಹಿರಿಯ ನಾಗರಿಕರು ಇಂದಿಗೂ ಪಿಂಚಣಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ತಾವು ಎಂತಹ ಪರಿಸ್ಥಿತಿಯಲ್ಲಿದ್ದರೂ, ಪಿಂಚಣಿ ಪಡೆಯಲು ಬಯೋಮೆಟ್ರಿಕ್‌ ನೀಡುವುದನ್ನು ಕಡ್ಡಾಯಗೊಳಿಸಿರುವುದು ಅಮಾನುಷವಾಗಿದೆ. ಎಷ್ಟೋ ಹಿರಿಯ ನಾಗರಿಕರು ಡಯಾಲಿಸಿಸ್‌, ಪ್ಯಾರಾಲಿಸಿಸ್‌, ಕಿಮೋ ಥೆರಪಿ ಪಡೆಯುತ್ತಿರುವವರು ಸಹ ಕಚೇರಿಗೆ ಬಂದು ಜೀವಿತ ಪ್ರಮಾಣ ಪತ್ರ ನೀಡಿ ಪಿಂಚಣಿ ಪಡೆಯಬೇಕಿದ್ದು, ಈ ಪರಿಸ್ಥಿತಿ ಬದಲಾಗಬೇಕಿದೆ ಎಂದು ಸಂತೋಷ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next