Advertisement

ಬಟ್ಟೆ ವ್ಯಾಪಾರದಿಂದಲೇ ಮಗಳನ್ನು ಕುಸ್ತಿಪಟು ಮಾಡಿದ !

03:41 PM Mar 27, 2017 | Team Udayavani |

ಅಂಬಾಲ (ಹರಿಯಾಣ): ಬಟ್ಟೆ ಮಾರಿಯೇ ಮಗಳನ್ನು ಕುಸ್ತಿಪಟು ಮಾಡಿದ ಅಪ್ಪನೊಬ್ಬನ ಸಾಹಸಮಯ ಕತೆ ಇದು. ಹರ್ಯಾಣದ ಅಂಬಾಲದಿಂದ ಇಂಥದೊಂದು ಸುದ್ದಿ ಬೆಳಕಿಗೆ ಬಂದಿದೆ. ಮಗಳ ಹೆಸರು ದಿವ್ಯಾ. ಪ್ರಸ್ತುತ ಭಾರತ್‌ ಕೇಸರಿ ದಂಗಲ್‌ ರಾಷ್ಟ್ರೀಯ ಕುಸ್ತಿ ಚಿನ್ನದ ಪದಕ ವಿಜೇತೆ. ಈ ಪ್ರಶಸ್ತಿಯೊಂದಿಗೆ ದಿವ್ಯಾ 10 ಲಕ್ಷ ರೂ. ಗೆದ್ದಿದ್ದಾರೆ.

Advertisement

ಬಟ್ಟೆ ಮಾರಿ ನೆರವು
ದಿವ್ಯಾಳ ತಂದೆ ಹೆಸರು ಸೂರಜ್‌ ಕಾಕರನ್‌. ಮಗಳ ದೊಡ್ಡ ಮಟ್ಟದ ಸಾಧನೆ ಹಿಂದೆ ತಂದೆಯ ಭಾರೀ ಶ್ರಮವಿದೆ ಎನ್ನುವುದು ಇಲ್ಲಿ ಗಮನಿಸ ಬೇಕಾದ ಅಂಶ. ಸೂರಜ್‌ ಕೂಡ ಒಂದು ಕಾಲದಲ್ಲಿ ಕುಸ್ತಿಪಟುವಾಗುವ ಕನಸು ಕಂಡಿದ್ದರಂತೆ. ಆದರೆ ಅದು ನನಸಾಗಿರಲಿಲ್ಲ. ಹೀಗಂತೆ ಸೂರಜ್‌ ಕೊರಗುತ್ತ ಕೂರಲಿಲ್ಲ. ಮತ್ತೆ ತಮ್ಮ ಹಳ್ಳಿಗೆ ಬಂದರು. ಹಾಲಿನ ವ್ಯಾಪಾರ ಶುರು ಮಾಡಿದರು. ಬಹಳ ಸಮಯ ಇದು ಕೂಡ ಕ್ಲಿಕ್‌ ಆಗಲಿಲ್ಲ. ಅನಂತರ ಹೊಸದಿಲ್ಲಿಗೆ ತೆರಳಿದ ಸೂರಜ್‌ ಕುಟುಂಬ ಕೆಲಸಕ್ಕಾಗಿ ಹುಡುಕಾಟ ನಡೆಸಿತು. 

ಈ ವೇಳೆ ಹೆಣ್ಣು ಮಗು ಜನಿಸಿತು. ಅದಕ್ಕೆ ದಿವ್ಯಾ ಎಂದು ಹೆಸರಿಟ್ಟರು. ಕುಟುಂಬ ನಿರ್ವಹಣೆಗಾಗಿ ತಂದೆ ಬಟ್ಟೆ ಮಾರುವ ಕೆಲಸಕ್ಕೆ ಕೈ ಹಾಕಿದರು. ಎಲ್ಲಿ ಕುಸ್ತಿ ನಡೆಯುತ್ತದೋ ಅಲ್ಲಲ್ಲಿ ತಂದೆ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಒಂದು ದಿನ ಸೂರಜ್‌ ಗೀತಾ ಪೋಗಟ್‌ ಜೀವನನ ಚರಿತ್ರೆಯ ಬಗ್ಗೆ ಪತ್ರಿಕೆಯಲ್ಲಿ ಓದಿದರು. ತನ್ನ ಮಗಳೇಕೆ ಅಂತಹ ಸಾಧನೆ ಮಾಡಬಾರದು ಎಂದು ನಿರ್ಧರಿಸಿ ಮಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಬೆಳೆಸಿದರು.

ಹುಡುಗರ ಜತೆ ಹೋರಾಡಿ ಗೆದ್ದಳು!
ಗೀತಾ ಪೋಗಟ್‌ ಕುಸ್ತಿ ಕಲಿಕೆಯ ಆರಂಭದ ದಿನಗಳಲ್ಲಿ ಹುಡುಗರೊಂದಿಗೆ ಸ್ಪರ್ಧಿಸಿ ಅಭ್ಯಾಸ ನಡೆಸಿ ಗೆದ್ದಿದ್ದರು. ಮೇರಿ ಕೋಮ್‌ ಕೂಡ ಇಂಥದೇ ಸಾಧನೆ ಮಾಡಿದ್ದರು. ಅಂತೆಯೇ ದಿವ್ಯಾ ಕೂಡ ಹುಡುಗರೊಂದಿಗೆ ಸೆಣಸಾಟ ನಡೆಸಿ ಅನೇಕ ಪಂದ್ಯಗಳಲ್ಲಿ ಗೆದ್ದಿದ್ದಾರೆ. ಹುಡುಗರ ಜತೆಗೆ ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲಿ ವಿಜೇತರಾಗಿದ್ದಾರೆ. 30 ಲಕ್ಷ ರೂ. ಪಡೆದಿದ್ದಾರೆ. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು.

‘ಭವಿಷ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲಬೇಕು ಎನ್ನುವ ಬಹು ದೊಡ್ಡ ಕನಸಿದೆ. ಸಾಕ್ಷಿ ಮಲಿಕ್‌ ಸಾಧನೆಯನ್ನು ಮೀರಿಸಿದ ಸಾಧನೆ ಮಾಡಲು ಪ್ರಯತ್ನಿಸುವೆ’
– ದಿವ್ಯಾ, ಭಾರತ್‌ ಕೇಸರಿ ವಿಜೇತ ಕುಸ್ತಿಪಟು.

Advertisement
Advertisement

Udayavani is now on Telegram. Click here to join our channel and stay updated with the latest news.

Next