ಒಂದು ಸಾರಿ ಅಪ್ಪ, ಮಗ ಬೇರೆ ಊರಿಗೆ ಪಾದಯಾತ್ರೆ ಮಾಡುವಾಗ ದಾರಿ ಮಧ್ಯೆ ನದಿಯೊಂದು ದಾಟುವ ಪ್ರಸಂಗ ಎದುರಾಗುತ್ತದೆ.
ಅದು ಮಳೆಗಾಲ. ಮಳೆಯಿಂದಾಗಿ ನದಿ ಮೈತುಂಬಿ ಜೋರಾಗಿ ಹರಿಯುತ್ತಿತ್ತು. ಆಗ ಆ ಇಬ್ಬರು ನದಿ ದಾಟಲು ಮುಂದಾಗುತ್ತಾರೆ.
ದಾಟುವಾಗ ಮಗ, ತಂದೆಯ ಕೈ ಹಿಡಿದುಕೊಂಡಿರುತ್ತಾನೆ. ನದಿಯ ಮಧ್ಯದ ಭಾಗಕ್ಕೆ ಬಂದಾಗ ನೀರಿನ ರಭಸ ಹೆಚ್ಚಾಗುತ್ತಿರುವುದನ್ನುಗಮನಿಸಿ ಭಯಭೀತನಾಗುತ್ತಾನೆ. ತಕ್ಷಣ ಮಗ ಅಪ್ಪನಿಗೆ ಹೇಳುತ್ತಾನೆ, ಅಪ್ಪ ನೀನು ನನ್ನ ಕೈ ಹಿಡಿದುಕೋ ಎಂದು.
ಆಗ ಅಪ್ಪ ಯಾಕಪ್ಪ ನೀನು ನನ್ನ ಕೈ ಹಿಡಿದಿದ್ದಿಯಲ್ಲ ಎಂದು ಕೇಳಿದಾಗ, ನೀರಿನ ರಭಸಕ್ಕೆ ನಾನು ನಿನ್ನ ಕೈ ಬಿಡಬಹುದು ಎಂದು ಉತ್ತರಿಸಿದ. ಆದರೆ ನೀನು ಕೈ ಹಿಡಿದುಕೊಂಡರೇ ನೀರಿನ ರಭಸ ಅಲ್ಲ ಸ್ವತಃ ಯಮನೇ ಬಂದರು ನೀನು ನನ್ನ ಕೈ ಬಿಡಲ್ಲ ಅನ್ನೋ ನಂಬಿಕೆ ನನಗಿದೆ ಎಂದು ಮಗ ಹೇಳುತ್ತಾನೆ.
ಮಗನ ಈ ಮಾತು ತಂದೆ ಮಗನ ಸಂಬಂಧ, ತಂದೆಯ ಮೇಲಿನ ಭರವಸೆಯನ್ನು ತಿಳಿಸುತ್ತದೆ. ಕೈ ತುತ್ತು ಕೊಟ್ಟು, ಕಣ್ಣೀರು ಒರೆಸಿ, ಕೈ ಹಿಡಿದು ನಡೆಸುವವಳು ತಾಯಿ. ಆದರೆ ಜಗತ್ತಿನಲ್ಲಿ ಎಲ್ಲಿ ತಲೆ ಎತ್ತಿ ನಡೆಯಬೇಕು ಎಲ್ಲಿ ತಲೆ ತಗ್ಗಿಸಿ ನಡೆಯಬೇಕು ಎಂದು ಹೇಳಿಕೊಡುವವರು ತಂದೆ. ನಮಗೆ ಏನಾದರು ಆದರೆ ಕಣ್ಣೀರಿಡುವ ಜೀವಿ ತಾಯಿಯೇ ಆದರೂ ಅದೇ ಕಣ್ಣೀರು ಹಾಕುವ ಸಮಯದಲ್ಲಿ ಬೆನ್ನಿಗೆ ನಿಂತು ನಿನ್ನ ಬೆನ್ನಿಗೆ ನಾನಿದ್ದೇನೆ. ಅನ್ನೋ ಧೈರ್ಯ ತುಂಬೋ ಜೀವ ಅಪ್ಪ.
ಅಪ್ಪ ಅನ್ನೋನು ಸದಾಕಾಲ ತನ್ನವರಿಗಾಗಿ ಬದುಕುವ ಏಕೈಕ ಜೀವ. ತನ್ನ ಬಟ್ಟೆ ಚಪ್ಪಲಿ ಹರಿದು ತುಂಡಾದರು, ಮಕ್ಕಳು ಚೆನ್ನಾಗಿರಲಿ ಅವರು ಎಲ್ಲರ ಹಾಗೆ ಇರಬೇಕು ಅಂತ ಬಯಸೋದು ಅಪ್ಪ ಮಾತ್ರ. ಇಷ್ಟೆಲ್ಲ ಕಾಳಜಿ ಮಾಡುವ ಜೀವಕ್ಕೆ ಮನ್ನಣೆ ಯಾಕೆ ಸಿಗುತ್ತಿಲ್ಲ. ಎಲ್ಲೋ ಒಂದು ಕಡೆ ಈ ಜೀವ ಕಡೆಗಣನೆಗೆ ಒಳಗಾಗುತ್ತಿದೆ. ಜೀವನದಲ್ಲಿ ತಾಯಿ ಪರಿಶ್ರಮ ಎಷ್ಟು ಇದೆಯೋ ತಂದೆ ಪರಿಶ್ರಮ ಕೂಡ ಅಷ್ಟೇ ಪ್ರಧಾನವಾದದ್ದು.
ಕಿರಣಕುಮಾರ ಹೂಗಾರ, ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ