Advertisement

ಸಂವಿಧಾನ ರಚನಾ ಸಮಿತಿಯ ಸದಸ್ಯ ಫಾದರ್‌ ಜೆರೋಮ್‌ ಡಿ’ಸೋಜಾ

05:23 AM Jan 26, 2017 | |

ನಮ್ಮ ಸಂವಿಧಾನಕ್ಕೆ ಅರುವತ್ತೇಳು ವರ್ಷಗಳು ತುಂಬಿ ಅರುವತ್ತೆಂಟಕ್ಕೆ ಕಾಲಿರಿಸುತ್ತಿರುವ ಈ ಹೊತ್ತಿನಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಕೆಲಸ ಮಾಡಿದ ಕ್ರೈಸ್ತ ಗುರುವೊಬ್ಬರನ್ನು ಸ್ಮರಿಸುವುದು ಉಚಿತವೆನಿಸುತ್ತದೆ. ಮಂಗಳೂರು ಬಳಿ ಆಗಿನ ಕುಗ್ರಾಮದಲ್ಲಿ ಹುಟ್ಟಿದ ಫಾ| ಜೆರೋಮ್‌ ಡಿ’ಸೋಜಾ ಧಾರ್ಮಿಕ ಸೇವೆಯ ಜತೆಗೆ ದೇಶ ಸೇವೆಯನ್ನೂ ಮಾಡಿದವರು. 

Advertisement

ಬಹುಭಾಷಾ ತಜ್ಞರೂ ಇಂಗ್ಲಿಷ್‌ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲವರೂ ಆಗಿದ್ದ ಫಾ| ಜೆರೋಮ್‌ ಡಿ’ಸೋಜಾ ಎಸ್‌.ಜೆ. ಮಂಗಳೂರು ಬಳಿಯ ಮೂಲ್ಕಿಗೆ ಸನಿಹದಲ್ಲಿರುವ ಚಿತ್ರಾಪುವಿನವರು. 1897ರ ಆಗಸ್ಟ್‌ 6ರಂದು ಚಿತ್ರಾಪುವಿನ “ಸಾಗರ್‌ ಭವನ್‌’ದಲ್ಲಿ ಇವರ ಜನನವಾಯಿತು. ನಯನ ಮನೋಹರವಾದ ಆ ಸ್ಥಳ ಆಗಿನಂತೆ ಈಗಲೂ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ. ಹತ್ತಿರದಲ್ಲೇ ಹರಿಯುವ ನದಿಯೂ ಸಮುದ್ರವೂ ಜೆರೋಮರ ವ್ಯಕ್ತಿತ್ವಕ್ಕೆ ಮೆರುಗನ್ನು ಒದಗಿಸಿದವು. ಅವರ ತಂದೆ ಸೆಬಾಸ್ಟಿಯನ್‌ ಡಿ’ಸೋಜಾರು, ತಾಯಿ ಸರಫಿನಾ ಡಿ’ಸೋಜಾ, ಅವರ ಕುಟುಂಬದ ಮೂಲ ಕಸುಬು ಕೃಷಿಯಾಗಿತ್ತು. 

ಎಳವೆಯಲ್ಲಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಜೆರೋಮರು ಬುದ್ಧಿವಂತರಾಗಿ ಸ್ಥಳೀಯ ಭಾಷೆಗಳನ್ನೆಲ್ಲ ಅರಗಿಸಿಕೊಂಡು ಬೆಳೆದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಸ್ಥಳೀಯವಾಗಿ ನಡೆಯಿತು. ಮುಂದೆ ಮಾಧ್ಯಮಿಕ ವಿದ್ಯಾ ಭ್ಯಾಸವು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲೂ ಕಾಲೇಜು ಶಿಕ್ಷಣವು ಸೈಂಟ್‌ ಜೋಸೆಫ್ ಕಾಲೇಜು ತಿರುಚಿನಾಪಳ್ಳಿ (ಆಗಿನ ಮದರಾಸು ಪ್ರಾಂತ್ಯ)ಯಲ್ಲಿಯೂ ನಡೆಯಿತು. ಕ್ಲಾಸಿಗೆ ಮೊದಲಿಗರಾಗಿರುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಅವರಾಗಿದ್ದರು. ಕೇವಲ ಪಾಠಗಳಲ್ಲಷ್ಟೇ ಅಲ್ಲ, ಪಾಠೇತರ ಚಟುವಟಿಕೆಗಳಲ್ಲೂ ಮುಂದಿದ್ದರು. ಆಗ ಬ್ರಿಟಿಷ್‌ ಸರಕಾರ ನಮ್ಮನ್ನು ಆಳುತ್ತಿತ್ತು. ಇಂಗ್ಲಿಷ್‌ ಸಾಹಿತ್ಯದಲ್ಲಿ ಮೊದಲನೇ ದರ್ಜೆಯಲ್ಲಿ ಪದವಿ ಗಳಿಸಿದ ಅವರು ತಿರುಚ್ಚಿಯ ಸೈಂಟ್‌ ಜೋಸೆಫ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ತನ್ನ 24ನೇ ವಯಸ್ಸಿಗೆ ಅವರು ವಿದ್ಯಾರ್ಥಿಗಳಿಗೆ ನೆಚ್ಚಿನ ಬೋಧಕರಾಗಿ ದ್ದರು. ಮದರಾಸು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ ಭಾಷೆಯ ವಿಭಾಗ ಕಟ್ಟುವುದರಲ್ಲಿ ಜೆರೋಮರ ಪಾತ್ರವಿತ್ತು. ಅಷ್ಟೇ ಅಲ್ಲದೆ ಅವರು ಬೆಲ್ಜಿಯಂಗೆ ತೆರಳಿ ಅಲ್ಲಿ ಧರ್ಮಶಾಸ್ತ್ರ (ಥಿಯಾಲಜಿ)ದ ಕುರಿತಾದ ಶಿಕ್ಷಣ ಪಡೆದು ಮಂಗಳೂರಿಗೆ ಮರಳಿ ಧರ್ಮಗುರುವಾಗಿ ಕೆಥೋಲಿಕ್‌ ಪರಿವಾರವನ್ನು ಮುನ್ನಡೆಸಿದರು. ಅವರು 1931ರಲ್ಲಿ ಜೆಸುವೀಟ್‌ ಗುರುವಾಗಿ ಗುರುವಾಗಿ ಸೇವಾದೀಕ್ಷೆ ಪಡೆದರು. ಜೆರೋಮ್‌ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಜೆಸುವೀಟ್‌ ಸಭೆಗೆ ಸೇರಿದವರು, ಈ ಧಾರ್ಮಿಕ ಸಭೆಯ ಸದಸ್ಯ ಗುರುಗಳು ತಮ್ಮ ಹೆಸರಿನೊಂದಿಗೆ “ಸೊಸೈಟಿ ಆಫ್ ಜೀಸಸ್‌’ ಎಂಬುದರ ಸಂಕ್ಷಿಪ್ತ ರೂಪವಾಗಿ “ಎಸ್‌ಜೆ’ ಎಂದು ಸೇರಿಸಿಕೊಳ್ಳುತ್ತಾರೆ. ಮುಂದೆ ಫಾದರ್‌ ಜೆರೋಮ್‌ ಅವರು ಮದರಾಸಿನ ಪ್ರತಿಷ್ಠಿತ ಲೊಯಲಾ ಕಾಲೇಜಿನ ಪ್ರಾಂಶುಪಾಲರಾದರು (1942).

ಸಂವಿಧಾನ ರಚನಾ ಸಭೆಯ ಸದಸ್ಯರಾಗಿ
ಫಾದರ್‌ ಜೆರೋಮ್‌ ಅವರ ವ್ಯಕ್ತಿತ್ವದ ವಿಶೇಷತೆಯನ್ನು ಅರಿತ ರಾಜಾಜಿಯವರು (ಸಿ. ರಾಜಗೋಪಾಲಚಾರಿ) ಅವರಿಂದ ಬಹಳಷ್ಟು ಮಹತ್ವದ ಕೆಲಸಗಳು ಸಾಧ್ಯವೆಂದು ಮದರಾಸಿನ ಲೆಜಿಸ್ಲೇ ಟಿವ್‌ ಕೌನ್ಸಿಲ್‌ ಸದಸ್ಯರಾಗಿ ನಿಯೋಜಿಸಿದರು. ದೇಶದ ಸಂವಿಧಾನ ರಚನಾ ಸಭೆಗೂ ಅವರು ಆಯ್ಕೆಯಾದರು. ಅವರು ಅತ್ಯುತ್ತಮ ವಾಗ್ಮಿಯಾಗಿದ್ದರು. ಮಾತಿನ ವರಸೆಯಿಂದ ಯಾರನ್ನೂ ಸೆರೆ ಹಿಡಿಯಬಲ್ಲ ಶಕ್ತಿವಂತರಾಗಿದ್ದರು. ಸಂವಿಧಾ ನದಲ್ಲಿ ತನ್ನ ಅಲ್ಪಸಂಖ್ಯಾಕ ಸಮುದಾಯಕ್ಕೆ ಸರಿಯಾದ ಹಕ್ಕು ಸ್ಥಾಪಿಸುವುದರಲ್ಲಿ ಶ್ರಮಿಸಿದರು. ಫಾದರ್‌ ಜೆರೋಮ್‌ ಅವರು ಇಂಗ್ಲಿಷ್‌, ಫ್ರೆಂಚ್‌, ಸ್ಪಾನಿಷ್‌, ಇಟಾಲಿಯನ್‌ ಮತ್ತು ಜರ್ಮನ್‌ಹೀಗೆ ಐದು ವಿದೇಶಿ ಭಾಷೆಗಳನ್ನು ಬಲ್ಲವರಾಗಿ ದ್ದರು. ಏಳು ಭಾರತೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಫ್ರೆಂಚ್‌ ಮತ್ತು ಪೋರ್ಚುಗೀಸ್‌ ಸರಕಾರಗಳೊಂದಿಗೆ ಮಾತುಕತೆ ನಡೆಸಿ ಗೋವಾ ಮತ್ತಿತರ ಕಡೆಯ ಫ್ರೆಂಚ್‌ ವಸಾಹತುಗಳನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿಮತ್ತು ಪೋರ್ಚುಗೀಸ್‌ ಸರಕಾರದ ಪ್ರಾಬಲ್ಯ ಕಡಿಮೆ ಮಾಡುವಲ್ಲಿ ಅವರು ನಿರ್ಣಾಯಕ ಕೆಲಸ ಮಾಡಿದ್ದಾರೆ.

ಪಂಡಿತ್‌ ಜವಹರಲಾಲ್‌ ನೆಹರೂ ಅವರ ಇಚ್ಛೆಯಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಫಾದರ್‌ ಜೆರೋಮ್‌ 1949ರಿಂದ ನಾಲ್ಕು ಸಲ ಆಯ್ಕೆಯಾಗಿದ್ದರು. ಶಿಕ್ಷಣ ತಜ್ಞನಾಗಿ ಯುನೆಸ್ಕೋ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಂತಹ ಪ್ರತಿಭಾನ್ವಿತ ವ್ಯಕ್ತಿಯನ್ನು ಗುರುತಿಸಿದವರು ರಾಜಾಜಿಯವರು. ಫಾದರ್‌ ಜೆರೋಮ್‌ ಅವರನ್ನು ಮದರಾಸು ಲೆಜಿಸ್ಲೇಟಿವ್‌ ಎಸೆಂಬ್ಲಿಯ ಸದಸ್ಯರಾಗಿ ಆರಿಸಿದ್ದಲ್ಲದೆ ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಕ್ಷತೆಯ ಸಂವಿಧಾನ ರಚನೆಯಲ್ಲಿ ಕ್ರಿಯಾತ್ಮಕ ಪಾತ್ರ ನಿರ್ವಹಿಸುವಂತೆ ಪ್ರೋತ್ಸಾಹಿಸಿದರು. 

Advertisement

ಸಂವಿಧಾನ ರಚನಾ ಸಮಿತಿಯಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಚ್‌. ವಿ. ಕಾಮತ್‌, ಯು. ಶ್ರೀನಿವಾಸ ಮಲ್ಯ, ಬೆನಗಲ್‌ ಶಿವರಾವ್‌ ಮತ್ತು ಬೆನಗಲ್‌ ನರಸಿಂಹ ರಾಯರು ಇದ್ದರು. ಅವರೊಂದಿಗೆ ದಕ್ಷಿಣಕನ್ನಡದ ಐದನೆಯರವಾಗಿ ಫಾದರ್‌ ಜೆರೋಮ್‌ ಅವರು ಇದ್ದರೂ ಅವರು ಆಗ ಆಯ್ಕೆಯಾದದ್ದು ಮದರಾಸಿನಿಂದ.

ಫಾದರ್‌ ಜೆರೋಮ್‌ ಮದರಾಸಿನ ಪ್ರತಿಷ್ಠಿತ ಲೊಯೆಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾದ ವೇಳೆಯಲ್ಲಿಯೇ 
ತಿರುಚಿಯ ಸೈಂಟ್‌ ಜೋಸೆಫ್ ಕಾಲೇಜಿನಲ್ಲೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಇಂಡಿಯನ್‌ ಸೋಶಿಯಲ್‌ ಇನ್‌ಸ್ಟಿಟ್ಯೂಟ್‌ ಸ್ಥಾಪಕರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದರು. ಮದರಾಸು ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯನಾಗಿಯೂ ಅಪಾರ ಸೇವೆ ಸಲ್ಲಿಸಿದರು.

ಸೇವಾದೀಕ್ಷೆ 
ಹಾಗೆ ನೋಡಿದರೆ ಫಾದರ್‌ ಜೆರೋಮ್‌ ಅವರ ಒಬ್ಬ ಚಿಕ್ಕಪ್ಪ ಡಾ| ಫ್ರಾಂಕ್‌ ಡಿ’ಸೋಜ ಐಸಿಎಸ್‌ ಉನ್ನತ ಅಧಿಕಾರಿ ಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಐಸಿಎಸ್‌ ಅಧಿಕಾರಿ ಅವರು. ಅವರು ಫಾದರ್‌ ಜೆರೋಮ್‌ ಅವರೂ ಐಸಿಎಸ್‌ ಮಾಡಬೇಕು ಎಂಬ ಇರಾದೆ ಹೊಂದಿದ್ದರು. ಅದಕ್ಕಾಗಿಯೇ ಅವರನ್ನು ಮದರಾಸಿಗೆ ಕರೆದುಕೊಂಡು ಹೋಗಿ ಶಿಕ್ಷಣ ಕೊಡಿಸಿದರು. ಆದರೆ ತನ್ನ ಇನ್ನೊಬ್ಬ ಚಿಕ್ಕಪ್ಪ ಫಾದರ್‌ ಆಗುವ ಕನಸು ಕಂಡು, ಅದು ಸಾಧ್ಯವಾಗದೆ ತೀರಿಕೊಂಡಿದ್ದನ್ನು ಆದರ್ಶವಾಗಿಟ್ಟುಕೊಂಡ ಜೆರೋಮ್‌ ಅವರು ಸೇವಾ ದೀಕ್ಷೆಯನ್ನು ಕೈಗೊಂಡರು. 

ಸಂವಿಧಾನ ರಚನೆಯ ಮೂಲಕ ಭಾರತದ ಪ್ರಜಾಸತ್ತೆಗೆ ಅಪಾರ ಕೊಡುಗೆ ನೀಡಿದ ಡಾ| ಬಾಬಾ ಸಾಹೇಬ್‌ ಅಂಬೇ
ಡ್ಕರ್‌ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಭಾರತದ ಸಂವಿಧಾನ ರಚನೆಯಲ್ಲಿ ಸಹಕರಿಸಿದ ಈ ಮಹಾನ್‌ ವ್ಯಕ್ತಿ
ಯನ್ನು ಮುಂದಿನ ಜನಾಂಗ ನೆನಪಿನಲ್ಲಿಟ್ಟುಕೊಳ್ಳಬೇಕು. ಈಗಿನ ತರುಣ ಜನಾಂಗಕ್ಕೆ ಹಿಂದಿನ ಶ್ರೇಷ್ಠ ಸಾಧಕರ ಬಗ್ಗೆ ತಿಳಿಯಬೇಕು. ಫಾದರ್‌ ಜೆರೋಮ್‌ ಡಿ’ಸೋಜರ ಹಿಂದೆ ಹೊಗಳುಭಟರಿರಲಿಲ್ಲ. ಆದ್ದರಿಂದ ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ದಕ್ಷಿಣಕನ್ನಡ, ಕರ್ನಾಟಕದ ಹೆಮ್ಮೆಯ ಸುಪುತ್ರರಲ್ಲಿ ಒಬ್ಬರಾದ ಫಾದರ್‌ ಜೆರೋಮ್‌ ಡಿ’ಸೋಜಾ ಅಪ್ರತಿಮ ವಾಗ್ಮಿ, ಮೇಧಾವಿ ಶಿಕ್ಷಣ ತಜ್ಞ, ಉತ್ತಮ ಆಡಳಿತಗಾರ. ಅದಕ್ಕಿಂತಲೂ ಹೆಚ್ಚಾಗಿ ಭಾರತದ ಸಂವಿಧಾನ ರಚನೆಯಲ್ಲಿ ಡಾ| ಭೀಮರಾವ್‌ ಅಂಬೇಡ್ಕರ್‌ ಅವರೊಂದಿಗೆ ಹೆಗಲು ಕೊಟ್ಟು ದುಡಿದಿದ್ದರು. ನಮ್ಮ ಸಂವಿಧಾನಕ್ಕೆ ಅರುವತ್ತೇಳು ವರ್ಷಗಳು ತುಂಬಿ ಅರುವತ್ತೆಂಟಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಅವರನ್ನು ಹೆಮ್ಮೆಯಿಂದ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಎನ್‌. ಪಿ. ಶೆಟ್ಟಿ, ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next