Advertisement

Ivan D’Souza ಮನೆಗೆ ಕಲ್ಲೆಸೆತ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

08:10 PM Aug 28, 2024 | Team Udayavani |

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಮನೆಯ ಮೇಲೆ ಕಲ್ಲೆಸೆತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಂಟ್ವಾಳ ತಾಲೂಕಿನ ಕೊಲಾ°ಡು ಗ್ರಾಮದ ದಿನೇಶ್‌ ಕುಡ್ತಮೊಗರು (20) ಮತ್ತು ಬೋಳಂತೂರಿನ ಭರತ್‌ ಅಲಿಯಾಸ್‌ ಯಕ್ಷಿತ್‌ (24) ಬಂಧಿತ ಆರೋಪಿಗಳು.

ಭರತ್‌ ಚಾಲಕನಾಗಿದ್ದು, ಈತನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದೆ. ದಿನೇಶ್‌ ಕನ್ಯಾನದ ಫೈನಾನ್ಸ್‌ ಒಂದರಲ್ಲಿ ಕಲೆಕ್ಷನ್‌ ಕೆಲಸ ಮಾಡುತ್ತಿದ್ದ. ಈತನ ಮೇಲೆ ಈಗಾಗಲೇ ಒಂದು ಪ್ರಕರಣ ದಾಖಲಾಗಿದೆ.

ಐವನ್‌ ಡಿ’ಸೋಜಾ ಅವರ ಮನೆಯ ಪರಿಸರದ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದ್ದ ದೃಶ್ಯಗಳು ಮತ್ತು ಮೊಬೈಲ್‌ ದಾಖಲೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರೂ ಆರೋಪಿಗಳು ಆ ದಿನ ರಾತ್ರಿ ಮಂಗಳೂರಿನ ಹೊಟೇಲ್‌ ಒಂದರಲ್ಲಿ ಊಟ ಮಾಡಿ, ಐವನ್‌ ವಿರುದ್ಧದ ಸಿಟ್ಟಿನಲ್ಲಿ ರಾತ್ರಿ 9.30ರ ವೇಳೆಗೆ ವೆಲೆನ್ಸಿಯಾಕ್ಕೆ ಆಗಮಿಸಿ ಮನೆಗೆ ಕಲ್ಲು ಎಸೆದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಆರೋಪಿಗಳು ಹಿಂದೂ ಸಂಘನೆಯೊಂದರ ಸದಸ್ಯರೆಂದು ತಿಳಿದು ಬಂದಿದೆ. ಆದರೆ ಆಯುಕ್ತರು ಪ್ರತಿಕ್ರಿಯೆ ನೀಡಿ, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು, ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅವರ ಬಂಧನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆಯೂ ನಡೆದಿತ್ತು.

ಇದಾದ ಬಳಿಕ ಆ. 21ರಂದು ರಾತ್ರಿ ವೆಲೆನ್ಸಿಯಾದಲ್ಲಿರುವ ಐವನ್‌ ಡಿ’ಸೋಜಾ ಅವರ ಮನೆಗೆ ಕಲ್ಲು ತೂರಾಟ ನಡೆದಿತ್ತು. ಬೈಕ್‌ನಲ್ಲಿ ಬಂದಿದ್ದ ಇಬ್ಬರು ಯುವಕರು ಮನೆಯ ಮೇಲೆ ಕಲ್ಲು ತೂರಿ ಪರಾರಿಯಾಗಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಘಟನೆ ವೇಳೆ ಐವನ್‌ ಅವರು ಮನೆಯಲ್ಲಿ ಇರಲಿಲ್ಲ. ಪತ್ನಿ, ಮಕ್ಕಳು ಮಾತ್ರ ಇದ್ದರು. ಘಟನೆಗೆ ಸಂಬಂಧಿಸಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಸೆಂಟ್ರಲ್‌ ಎಸಿಪಿ ಪ್ರತಾಪ್‌ ಸಿಂಗ್‌ ಥೋರಟ್‌ ಮತ್ತು ಪಾಂಡೇಶ್ವರ ಇನ್‌ಸ್ಪೆಕ್ಟರ್‌ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next