ಬೆಂಗಳೂರು: ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಸತಿ ಸಚಿವ ಎಂ.ಕೃಷ್ಣಪ್ಪ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ಗೋವಿಂದರಾಜನಗರ ಕ್ಷೇತ್ರದ ಶಾಸಕರೂ ಆಗಿರುವ ಪುತ್ರ ಪ್ರಿಯಕೃಷ್ಣ, ಕಾಂಗ್ರೆಸ್ ಪಾಲಿಕೆ ಸದಸ್ಯರು ಹಾಗೂ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಬೃಹತ್ ಪಾದಯಾತ್ರೆ ನಡೆಸಿದ ಕೃಷ್ಣಪ್ಪ ನಂತರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ನಂತರ ವಿಜಯನಗರ ಹಾಗೂ ಗೋವಿಂದರಾಜನಗರದ ವಿವಿದ ಬಡಾವಣೆಗಳಲ್ಲಿ ಮತಯಾಚನೆ ಮಾಡಿದರು. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಎಂ.ಕೃಷ್ಣಪ್ಪ, ವಿಜಯನಗರ ಕ್ಷೇತ್ರ ಇಡೀ ಬೆಂಗಳೂರಿನಲ್ಲೇ ಮಾದರಿ ಮಾಡಲಾಗಿದೆ. ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ ಸೇರಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು ಕೊಳಗೇರಿಗಳಲ್ಲಿ ಮೂಲಸೌಕರ್ಯಕ್ಕೂ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.
ಗೋವಿಂದರಾಜ ನಗರ ಹಾಗೂ ವಿಜಯನಗರದ ಮತದಾರರು ಕಾಂಗ್ರೆಸ್‌ಗೆ ಆಶೀರ್ವದಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಳೆದ ಐದು ವರ್ಷ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ನಮಗೆ ಶ್ರೀ ರಕ್ಷೆಯಾಗಲಿದೆ ಎಂದು ಹೇಳಿದರು.