ಬಿಸಿ ರಕ್ತದ ತರುಣನಾಗಿದ್ದಾಗ ಆತ ಅದೊ0ದು ಗು0ಪಿಗೆ ನಾಯಕನಾಗಿರುತ್ತಿದ್ದ. ಅದೆಷ್ಟು ಶತ್ರುಗಳು ಆತನನ್ನು ಆವರಿಸಿಕೊ0ಡಿದ್ದರೂ ಅವರನ್ನೆಲ್ಲಾ ಒ0ದೇ ಏಟಿಗೆ ಬೀಳಿಸುವ0ತಹ ಶಕ್ತಿ ಆತನದಾಗಿತ್ತು. ತನ್ನದೇ ಏಕಾ0ಗಿ ಲೋಕದಲ್ಲಿ ತನ್ನಿಷ್ಟದ0ತೆ ಬದುಕುತ್ತಿದ್ದವನು ಕೇವಲ ಎರಡಕ್ಷರದಿ0ದ ಜವಾಬ್ದಾರಿಗಳ ಮೂಟೆಯನ್ನು ಹೊತ್ತು ಮುಪ್ಪಿನವರೆಗೆ ಸಾಗುತ್ತಾನೆ. ಎಲ್ಲಾ ದ್ವೇಷದ ಕೊಂಡಿಯನ್ನು ಕಳಚಿಬಿಡುತ್ತಾನೆ.
ಅದೇನೆನೋ ವ್ಯಸನಗಳಿಗೆ ದಾಸನಾಗಿದ್ದವನು ಅವುಗಳನ್ನು ತ್ಯಜಿಸಲು ಕಷ್ಟವಾದರು ಆದಷ್ಟು ಬಿಡಲೇಬೇಕೆಂಬ ಹಠಕ್ಕೆ ಇಳಿಯುತ್ತಾನೆ. ಕಾರಣ ಅವನಿಗದಾಗಲೇ ದೇವರು “ಅಪ್ಪ” ಎಂಬ ಸಂಬಳವಿಲ್ಲದ ಕೆಲಸ ನೀಡಿದ್ದರು. ಪ್ರೀತಿ, ಕೋಪ, ತ್ಯಾಗ, ಶಿಸ್ತು ಇವೆಲ್ಲವೂ ಅಪ್ಪನ ಆಸ್ತಿಗಳು. ಮಕ್ಕಳ ಭವಿಷ್ಯಕ್ಕೆ ಆತ ಅಮ್ಮನೂ ಆಗುತ್ತಾನೆ, ಧೈರ್ಯದ ಪ್ರತೀಕ ಕೂಡ ಅಪ್ಪನೇ ಆಗಿರುತ್ತಾನೆ. ಪ್ರತಿಯೊಂದು ಮಗುವು ತನ್ನ ತಂದೆಯನ್ನೇ ಮಾದರಿಯನ್ನಾಗಿಟ್ಟುಕೊಂಡು ಬೆಳೆಯುತ್ತದೆ, ಕಲಿಯುತ್ತದೆ.
ಅದೆಷ್ಟೋ ತಂದೆಯಂದಿರೂ ಮಕ್ಕಳಿಗಾಗಿ ಸಕಲವನ್ನೂ ತ್ಯಾಗ ಮಾಡಿದ್ದಾರೆ, ಮಾಡುತ್ತಿದ್ದಾರೆ, ಬಹುಶಃ ಮುಂದೆಯೂ ಮಾಡುತ್ತಾರೆ. ಸಂಸಾರಕ್ಕಾಗಿ ಹಗಲು ರಾತ್ರಿಯೆನ್ನದೆ ಸದಾ ದುಡಿಯುವ ಗಟ್ಟಿಗ ಅಪ್ಪ. ಅಪ್ಪ ಎಂದರೆ ಕೇವಲ ಪೆಟ್ಟು ಕೊಡುವವನು ಅಲ್ಲ.ಆತನೆಂದರೆ ನಂಬಿಕೆ,ವಿಶ್ವಾಸ. ಮಕ್ಕಳಿಗಾಗಿ ತನ್ನನ್ನು ತಾನೇ ಮಾಡಿಕೊಂಬ ದಾಸ. ಬಾಳು ಕಲಿಸಿಕೊಟ್ಟ ಗುರು ಅಪ್ಪನೇ ಆಗಿರುತ್ತಾನೆ. ಅಮ್ಮ ಹೊಡೆದಾಗ ಮಕ್ಕಳ ಸುಳ್ಳು ಚಾಡಿ ಕೇಳಿ, ಅದರಲ್ಲಿ ಸತ್ಯವಿಲ್ಲ ಎಂದು ತಿಳಿದರೂ ತಾಯಿಗೆ ಗದರುತ್ತಾನೆ.ಪ್ರತಿಯೊಂದು ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ.ಅಪ್ಪ ಕೇವಲ ಅಪ್ಪನಾಗದೇ ಮನೆ ಹೊರಗೆ ಮೈ ಮುರಿದು ದುಡಿಯುವ ಮಾನವ ಯಂತ್ರದಂತಾಗುತ್ತಾನೆ.ಆದರೂ ಮುಪ್ಪಿನಲ್ಲಿ ಮಕ್ಕಳಿಂದ ಚುಚ್ಚು ಮಾತು ಕೇಳುವ ಜೀವವೂ ಅವನೇ ಆಗುತ್ತಾನೆ. ಅಪ್ಪ ಎಂದರೆ ಪದವಲ್ಲ ಅದೊಂದು ಸುಂದರ ಜಗತ್ತು. ಮಕ್ಕಳ ಪಾಲಿನ ಜನ್ಮದಾತನಾದ ಎಲ್ಲಾ ಅಪ್ಪಂದಿರಿಗೆ ಅಪ್ಪಂದಿರ ದಿನದ ಶುಭಾಶಯಗಳು.
ಅಪ್ಪ ಎಂದೂ ಮಾಡಲಾರ ನಾಶ
ಮಕ್ಕಳ ಪಾಲಿಗೆ ಅವನೇ ವಿಶ್ವಕೋಶ
ಆತ ಜೊತೆಗಿದ್ದರೆ ಇಲ್ಲ ದ್ವೇಷ
ಅದಕ್ಕೆ ಅಪ್ಪ ಎಂದರೆ ಆಕಾಶ.
*ರಂಜಿನಿ ಬ್ರಹ್ಮಾವರ