ಅಮ್ಮ ನವಮಾಸ ಹೊತ್ತು, ಹೆರುತ್ತಾಳೆ. ಅಪ್ಪ ಬೆವರು ಸುರಿಸಿ ದುಡಿದು ಕಾಳಜಿಯಲಿ ಸಾಕುತ್ತಾನೆ.”ಅಮ್ಮನ ಎದೆಹಾಲಿನಷ್ಟೇ ಮುಖ್ಯ ಅಪ್ಪನ ಬೆವರ ಹನಿ” ಅಪ್ಪಾ ಐ ಲವ್ಯೂ ಪಾ… ಬಾಲ್ಯದಿಂದ ಇಂದಿನವರೆಗೆ ಮೆಲ್ಲನೆ ದೃಷ್ಟಿ ಹಾಯಿಸಿದಾಗ ಥಟ್ಟನೆ ನೀನೇ ನೆನಪಾಗುವೆ ಅಪ್ಪಾ..ತನ್ನ ಕೂಸು ಜಗವನೆಲ್ಲ ನೋಡಬೇಕು, ಆಕೆ ಹಲವರಿಗೆ ಆದರ್ಶಳಾಗಿ ಬಾಳು ಕಟ್ಟಿಕೊಳ್ಳಬೇಕು ಹೀಗೆ ಹತ್ತು ಹಲವು ಕನಸನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತಿ ಎಂದು ನಿನ್ನ ಕಂಗಳ ಇಣುಕಿದಾಗಲೇ ತಿಳಿಯುವುದು.
Advertisement
ಪುಟ್ಟ ಪಾದಗಳು ಎದ್ದು ಬಿದ್ದು ನಡೆಯುವಲ್ಲಿ ನಿನ್ನ ಕೈಗಳು ಧೈರ್ಯ ತುಂಬುತ್ತಿದ್ದವು. ಇಂದು ಜೀವನದಲ್ಲಿ ಕ್ಲಿಷ್ಟಕರ ಸನ್ನಿವೇಶವನ್ನು ಮೆಟ್ಟಿ ನಿಂತು ಮೇಲೇರಲು ತೊಡಗಿದ್ದೇನೆ ಎಂದಾದಲ್ಲಿ ನಿನ್ನ ಪ್ರೋತ್ಸಾಹ ಮತ್ತು ಧೈರ್ಯದ ನುಡಿಗಳೇ ಕಾರಣ. ಸೋಲೆಂಬ ಮಡುವಿನಲ್ಲಿ ಬಿದ್ದಾಗ ಆತ್ಮವಿಶ್ವಾಸ ತುಂಬುವ ಸನ್ನಾಹದಲಿ ನಿಜಕ್ಕೂ ಅನುಭವ ಅದ್ವಿತೀಯ. ಅಪಮಾನವೆಂಬ ವಾರಿಧಿಯಲಿ ಚೈತನ್ಯದ ಕಾಲುವೆ ಕಟ್ಟಿ ಚಿಕಿತ್ಸೆ ನೀಡುವ ನಂಬಿಕೆಯ ನಾವಿಕ ನೀನೆ ಎಂದರೆ ತಪ್ಪಾಗಲಾರದು. ನಡೆ- ನುಡಿ ,ರೀತಿ-ನೀತಿಗಳ ಬಗ್ಗೆ ತಿಳಿಸಿ ನನ್ನ ಜೀವನಕ್ಕೆ ಹಾಸುಗಲ್ಲ ಹಾಸಿದವನೇ ನೀನು. ನಾನು ಇಟ್ಟ, ಇಡುವ ಪ್ರತಿ ಹೆಜ್ಜೆಯಲ್ಲೂ ನೀನು ಇರುವೆ.
ನಿನ್ನ ಆಶೀರ್ವಾದ, ಪ್ರೀತಿ, ಮಮತೆ, ಹಿತನುಡಿ ಎಲ್ಲವನ್ನು ಸದಾ ಬಯಸುವ ನಿನ್ನ ಪ್ರೀತಿಯ ಮಗಳು …
-ಪಂಚಮಿ ಭಟ್ ಬಾಕಿಲಪದವು