Advertisement

ಅಪ್ಪಯ್ಯನ ನೆನಪು 2020: ನನ್ನ ಸೂಪರ್ ಹೀರೊ ಆಗಿದ್ದವರು ನೀವೆ ತಾನೆ!

09:29 AM Jun 21, 2020 | Nagendra Trasi |

ಯಿಂದ,
ಮುದ್ದು ಮಗಳು

Advertisement

ರಿಗೆ,
ಪ್ರಿತಿಯ ಅಪ್ಪಯ್ಯನಿಗೆ

ವಿಷಯ: ಆಟದ ಸಾಮಾನು ಹಾಳಾದ ಕುರಿತು

ಅಂದು ನಾನು ಮತ್ತು ನೀವು ಇಬ್ಬರೆ ಕುಂದೇಶ್ವರದ ಹಬ್ಬದಲ್ಲಿ ಅಂದ ಚೆಂದದ ಬಣ್ಣವುಳ್ಳ ಒಂದು ವಿಮಾನ ಖರೀದಿಸಿದ್ದೇವು ನೆನಪಿದೆಯಾ. ಆ ವಿಮಾನದಲ್ಲಿ ಕೂತುಕೊಳ್ಳಲು ಸಾಧ್ಯವಾಗದಿದ್ದರು ಹಗಲು ರಾತ್ರಿ ಅದರೊಂದಿಗಿನ ನನ್ನ ಆಟ ಸಾಗುತ್ತಲೇ ಇತ್ತು. ಅದರ ತಿರುಗುವ ಚಕ್ರ ಕೇಳಲೆಂದು ಕಿವಿ ಹತ್ತಿರವಿಟ್ಟು ಖುಷಿ ಪಟ್ಟೆ.

ಆದರೆ ಆ ಖುಷಿ ಬಹುಕಾಲವಿರದೇ ಅದೇ ಚಕ್ರಕ್ಕೆ ಕಿವಿ ಮತ್ತು ನೆತ್ತಿಯ ಕೂದಲು ಸಿಕ್ಕಿಕೊಂಡು ಅದನ್ನು ಸರಿಪಡಿಸಲು ನೀ ಪಟ್ಟ ಪರದಾಟ ಇಂದಿಗೂ ನೆನಪಾಗುತ್ತದೆ.‌ ಆ ಘಟನೆ ಬಳಿಕ ವಿಮಾನ ಆಟಿಕೆ ಎಂದರೆ ಈಗಲೂ ಭಯವಾಗುತ್ತದೆ. ಆ ದಿನ ನೀವು‌ ನಾನು ಒಟ್ಟಾಗಿ ಸೇರಿ ಖರೀದಿಸಿದ ಆ ಪುಟ್ಟ ವಿಮಾನಕ್ಕೀಗ 22 ರ ಸಂವತ್ಸರ. ಅಂಬಾರಿಯ ಮೇಲೆ ಕೂತು ಮೆರವಣಿಗೆ ಹೊರಡುವ ರಾಣಿಯಂತೆ ಹೆಗಲ ಮೇಲೆ ನನ್ನ ಹೊತ್ತು ತಿರುಗುತ್ತಿದ್ದ
ಅಪ್ಪಯ್ಯನಿಗಿಂದು ತುಸು ವಯಸ್ಸಾದಂತಿದೆ. ಅಂದು ನಾ ಮಾಡಿದ ಚೇಷ್ಟೆಗಳಿಗೆಲ್ಲ ಅಮ್ಮ ಬೈಯಲು ಬಂದಾಗ ನನ್ನ ಸೂಪರ್ ಹೀರೊ ಆಗಿದ್ದವರು ನೀವೆ ತಾನೆ.

Advertisement

ಇಂದು ಅದೇ ತರಹದ ಆಟದ ಸಾಮಾನು ಹಿಡಿದು ನನ್ನ ಪುಟ್ಟ ಮಗಳು ತನ್ನ ಅಪ್ಪನೊಂದಿಗೆ ಆಟವಾಡುತ್ತಿದ್ದರೆ ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳದ್ದೇ ನೆನಪಾಗುತ್ತದೆ. ಹೀಗೆ ಮೊನ್ನೆ ಆಟವಾಡುತ್ತಿದ್ದಾಗ ಮಗಳ ಚೇಷ್ಟೆಗೆ ನೀ ಉಡುಗೊರೆಯಾಗಿತ್ತ ಪುಟ್ಟ ವಿಮಾನದ ರೆಕ್ಕೆಯೊಂದು ತುಂಡಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಆ ಕೂಡಲೇ ಸಿಟ್ಟುಗೊಂಡು ಮಗಳಿಗೆರಡು ಏಟು ನೀಡಬೇಕೆಂದಾಗ ‘ನಿರ್ಜಿವ ವಸ್ತುವಿಗಾಗಿ ಜೀವ ಇರುವ ಮನಸ್ಸುಗಳಿಗೆ ತೊಂದರೆ ನೀಡಬಾರದು’ ಎಂಬ ನಿಮ್ಮ ಮಾತು ನೆನಪಾಗಿ ಸುಮ್ಮನಾದೇ. ಆದರೂ ಅದು ನಿರ್ಜೀವವಲ್ಲ ನನ್ನ ಪ್ರೀತಿಯ ಅಪ್ಪಯ್ಯ ನನಗಾಗಿ ನೀಡಿದ ಬೆಲೆಕಟ್ಟಲಾಗದ ಉಡುಗೊರೆ. ಹಾಳಾದರು ಎಸೆಯಲು ಮನಸ್ಸು ಬಾರದ ಬೆಸುಗೆ ಅದರೊಂದಿಗಿದೆ ಅದಕ್ಕಾಗಿ ನಾನೇ ಹೊಸ ರೆಕ್ಕೆ ಜೋಡಿಸಿ ಅದನ್ನು ಎತ್ತಿಟ್ಟಿದ್ದೇನೆ. ಜತೆಗೆ ನಿಮ್ಮ ಪ್ರೀತಿಯನ್ನು ಸಹ.

ಧನ್ಯವಾದಗಳೊಂದಿಗೆ
ಇತಿ ತಮ್ಮ ಪ್ರೀತಿಯ ಮಗಳು
ಅನು -ಅನುರಾಧಾ ಪ್ರಭಾಕರ, ಕುಂದಾಪುರ.

Advertisement

Udayavani is now on Telegram. Click here to join our channel and stay updated with the latest news.

Next