ಫತೇಪುರ್: ಮಕ್ಕಳ ಅಪಹರಣ ತಂಡದ ಐವರು ಸದಸ್ಯರು ಮಸೀದಿಯೊಳಗೆ ಅಡಗಿಕೊಂಡಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳೊಂದಿಗೆ ಜನರ ಗುಂಪು ಮಸೀದಿಯನ್ನು ಸುತ್ತುವರೆದಿರುವ ಘಟನೆ ಉತ್ತರಪ್ರದೇಶದ ಖಗಾ ಪೊಲೀಸ್ ಠಾಣಾ ವ್ಯಾಪ್ತಿಯ ಸಂವತ್ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಕೆಲಸ ಕಳೆದುಕೊಳ್ತೀರಿ… ಏನಿದು ಮೂನ್ ಲೈಟಿಂಗ್?ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮಸೀದಿಗೆ ಆಗಮಿಸಿ ಐವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದ್ದು, ಅವರು ‘ಜಮಾತ್’ (ಮುಸ್ಲಿಂ ಧಾರ್ಮಿಕ ಗುಂಪು) ಸದಸ್ಯರು ಮತ್ತು ಇಸ್ಲಾಂ ಧರ್ಮದ ಕುರಿತು ಪ್ರಚಾರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.
ಶಾಂತಿ ಭಂಗದ ಆರೋಪದ ಮೇಲೆ ಐವರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಳಿಕ ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಒಂದು ವಾರದಲ್ಲಿ, ಮಥುರಾ, ಕನ್ನೌಜ್, ಲಕ್ನೋ, ಉನ್ನಾವ್ ಮತ್ತು ಅಮ್ರೋಹಾದಂತಹ ವಿವಿಧ ಜಿಲ್ಲೆಗಳಲ್ಲಿ ವದಂತಿಯ ಹಿನ್ನಲೆ ಸುಮಾರು 15 ಗುಂಪುಗಳ ಮೇಲೆ ದಾಳಿ ಮಾಡಿದ ಘಟನೆಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾತನಾಡಿ, ಮಕ್ಕಳ ಅಪಹರಣದ ವದಂತಿಗಳಿಂದ ಅಮಾಯಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಸುಮಾರು 15 ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.