Advertisement

ಗೋ ಕಳವಿಗೆ ಕಡಿವಾಣ ಹಾಕಲು ಆಗ್ರಹ

06:00 AM Apr 05, 2018 | Team Udayavani |

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಗೋ ಕಳ್ಳತನಕ್ಕೆ ತಡೆಯೊಡ್ಡಬೇಕು ಮತ್ತು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು, ಅಮೃತಾಧಾರಾ ಗೋಶಾಲೆ ಯಿಂದ ಹಸು ಕದ್ದವರಿಗೆ ಕಠಿನ ಶಿಕ್ಷೆಯಾಗಬೇಕು, ಡ್ರಗ್ಸ್‌ ಮಾಫಿಯಾಕ್ಕೆ ದೇಶಾದ್ಯಂತ ಕಡಿವಾಣ ಹಾಕಬೇಕು, ಮಠಾಧೀಶರು, ಮಠ ಮಂದಿರಗಳು ಶೈಕ್ಷಣಿಕ ಸಂಸ್ಥೆಗಳು ಆಮರಣಾಂತ ಉಪವಾಸ ಮತ್ತು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕು ಎಂದು ಕೈರಂಗಳದ ಪುಣ್ಯಕೋಟಿ ನಗರದ ಅಮೃತಾಧಾರಾ ಗೋಶಾಲೆಯಲ್ಲಿ ಬುಧವಾರ ನಡೆದ ಸಂತರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಕೈರಂಗಳದ ಪುಣ್ಯಕೋಟಿ ನಗರದ ಅಮೃತಾಧಾರಾ ಗೋಶಾಲೆಯಲ್ಲಿ ಗೋ ಕಳ್ಳತನ ಮಾಡಿದ ಗೋ ಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗೋಶಾಲಾ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್‌ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ನಾಲ್ಕನೇ ದಿನವಾದ ಬುಧವಾರ ನಡೆದ ಸಂತರ ಸಮಾವೇಶದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಖಂಡನಾ ನಿರ್ಣಯವನ್ನು ಮಂಡಿಸಿದರು.

ಸಚಿವರ ಭೇಟಿಗೆ ಆಗ್ರಹ
ಉಪವಾಸ ನಿರತ ರಾಜಾರಾಮ ಭಟ್‌ ಅವರ ಆರೋಗ್ಯಕ್ಕೆ ಸಮಸ್ಯೆ ಯಾದರೆ ಜಿಲ್ಲಾಡಳಿತ ಮತ್ತು ಸರಕಾರ ಹೊಣೆ ಯಾಗಲಿದ್ದು, ಈ ಹೋರಾಟಕ್ಕೆ ಸ್ಪಂದನೆ ಸಿಗದಿದ್ದರೆ, ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಕರಣದ  ಕುರಿತು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದಿರುವ ಸಚಿವ ಯು.ಟಿ. ಖಾದರ್‌ ಮುಂದಿನ ಎರಡು ದಿನಗಳಲ್ಲಿ ರಾಜಾರಾಂ ಭಟ್‌ ಅವರ ಬಳಿ ಬಂದು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಶ್ರೀಧಾಮ ಮಾಣಿಲದ ಮೋಹನ ದಾಸ ಸ್ವಾಮೀಜಿ ಮತ್ತು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತ ನಾಡಿ, ಗೋ ರಕ್ಷಣೆಗಾಗಿ ನಡೆಯು ತ್ತಿರುವ ಈ ಹೋರಾಟದ ಸಂದೇಶದ ಎಲ್ಲ ದೇವಾಲಯ, ಮಠ-ಮಂದಿರ ಹಾಗೂ ಪ್ರತೀ ಮನೆಮನೆಗೂ ತಲುಪಲಿ. ಗೋಹತ್ಯೆಯ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟಬೇಕಿದೆ ಎಂದರು.

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್‌ ಮಾತನಾಡಿ, ನಮ್ಮ ದೇಶದ ಅಂತಃಸತ್ವವನ್ನು ಉಳಿ ಸುವ ನಿಟ್ಟಿನಲ್ಲಿ ಉಪವಾಸ ಸತ್ಯಾ ಗ್ರಹ ಆರಂಭ ವಾಗಿದ್ದು, ಇದರಲ್ಲಿ ರಾಜಾರಾಮ ಭಟ್‌ ಒಂದು ನೆಪ ಮಾತ್ರ. ನಮಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು. 

Advertisement

ಸ್ಥಳೀಯ ಗೋಪ್ರೇಮಿಗಳಲ್ಲದೆ ಮಂಗಳೂರು, ಉಪ್ಪಿನಂಗಡಿ, ಕಾಸರ ಗೋಡು ಜಿಲ್ಲೆಯ ಮುಳ್ಳೇ ರಿಯ, ಪೆರ್ಲ, ಬಾಯಾರು ಭಾಗಗಳಿಂದಲೂ ಜನ ಆಗಮಿಸಿ ಆಮರಣಾಂತ ಉಪವಾಸ ನಿರತ ಟಿ.ಜಿ. ರಾಜಾರಾಮ ಭಟ್‌ ಅವರಿಗೆ ಬೆಂಬಲ ಸೂಚಿಸಿದರು.

ಧರಣಿ ಪರಿಸರದಲ್ಲಿ ರಾಮಾಯಣ, ಭಾಗವತ ಪಾರಾಯಣ ನಡೆಯು ತ್ತಿದ್ದರೆ, ಮಹಿಳೆಯರು ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ಮತ್ತಿತರ ದೇವತಾ ಕಾರ್ಯಗಳಲ್ಲೂ ನಿರತರಾಗಿದ್ದಾರೆ. ಮೂರು ದಿನ ಗಳಿಂದ ಸಂಜೆ ವೇಳೆ, ಪೊಲೀಸರಿಗೆ ಗೋಕಳ್ಳರ ಬಂಧನಕ್ಕೆ ಶಕ್ತಿ ತುಂಬುವಂತೆ ಪ್ರಾರ್ಥಿಸಿ ರಾಮತಾರಕ ಮಂತ್ರ ಪಠಿಸಿ ಗೋ ಶಾಲೆಯ ದನಗಳಿಗೆ ಮಹಾ ಆರತಿ ಬೆಳಗಲಾಗುತ್ತಿದೆ.

ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ, ಬಾಳೆಕೋಡಿ ಮಠದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ, ಎಂ.ಬಿ. ಪುರಾಣಿಕ್‌, ಶರಣ್‌ ಪಂಪ್‌ವೆಲ್‌, ಕ್ಯಾ| ಗಣೇಶ್‌ ಕಾರ್ಣಿಕ್‌, ಕೋಟ ಶ್ರೀನಿವಾಸ ಪೂಜಾರಿ ಮೊದ ಲಾದವರು ಭಾಗವಹಿಸಿದ್ದರು.

ಗೋ ಕಳವು: ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಿಂದ ಗೋವು ಕಳವಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ಗ್ರಾಮದ ಮೋನಚ್ಚ ಯಾನೆ ಅಹಮ್ಮದ್‌ ಕುಂಞಿ ಮತ್ತು ಮೊಂಟೆಪದವು ಮರಿಕಳ ಬಶೀರ್‌ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 ಮಾ. 29ರಂದು ಅಮೃತಧಾರಾ ಗೋಶಾಲೆಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳು ಗೇಟಿಗೆ ಹಾಕಿದ್ದ ಬೀಗ ಮುರಿದು ಒಂದು ಹಸುವನ್ನು ಕಾರಿನಲ್ಲಿ ಹಾಕಿ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ರಾಜಾರಾಂ ಭಟ್‌ ಅವರು ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಕೊಣಾಜೆ ಪೊಲೀಸ್‌ ಇನ್ಸ್‌ಸ್ಪೆಕ್ಟರ್‌ ಪ್ರಕಾಶ್‌ ಬಿ.ಎಸ್‌., ಪಿಎಸ್‌ಐ ಪೀರು ಪವಾರ್‌, ಪಿಎಸ್‌ಐ ಶಂಕರ್‌ ನಾಯರಿ ಮತ್ತು ಸಿಬಂದಿ, ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬಂದಿ ಹಾಗೂ ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಂ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next