ಭಾರತೀಯ ನಾರಿಯರ ಆಭರಣಗಳ ಮೇಲಿನ ವ್ಯಾಮೋಹ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ಈಗ ತಾವು ಉಡುವ ಸೀರೆ, ತೊಟ್ಟುಕೊಳ್ಳುವ ಬ್ಲೌಸ್‌ಗಳ ಮೇಲೆ ಕೂಡ ಆಭರಣಗಳ ಡಿಸೈನ್ ಮಾಡಿಸಿಕೊಳ್ಳುತ್ತಿದ್ದಾರೆ. ತಾವು ಹಾಕಿಕೊಳ್ಳುವ ಬ್ಲೌಸಗಳ ಮೇಲೆ ಬುಗುಡಿಗಳು, ಚಾಂದ್‌ಲಿ, ವಂಕಿಗಳು, ಹಿಂಭಾಗದಲ್ಲಿ ಹಾರಗಳು, ಇಳಿಬಿಟ್ಟ ಲೋಲಾಕುಗಳು ಮುಂತಾದ ಆನೇಕ ಡಿಸೈನ್‌ಗಳನ್ನು ಮಾಡಿಸಿಕೊಂಡು ತೊಡುತ್ತಿದ್ದಾಳೆ.
ಈ ಡಿಸೈನ್‌ಗಳಲ್ಲಿ ಬಂಗಾರದ ಬಣ್ಣದ, ಬೇರೆ ಬೇರೆ ಬಣ್ಣಗಳ ದಾರದ ಎಂಬ್ರಾಯಿಡರಿ, ಫಳಫಳ ಹೊಳೆಯುವ ಹಳ್ಳುಗಳು, ಕುಂದನ್ ಅಲಂಕಾರಗಳು, ರೆಡಿಮೇಡ್ ದಾರಗಳಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ. ಬ್ಲೌಸ್‌ನ ಹಿಂಭಾಗದಲ್ಲಂತೂ ಕಿವಿಯ ಝುಮಕಿ- ಲೋಲಾಕುಗಳಂತೆ ಉದ್ದನೆಯ ಲೋಲಾಕುಗಳು ತೂಗು ಬಿದ್ದಿರುತ್ತವೆ.
ಹಾರಗಳನ್ನು ಕುತ್ತಿಗೆಗಷ್ಟೇ ಅಲ್ಲ ಬ್ಲೌಸಿನ ಹಿಂಭಾಗ- ಮುಂಭಾಗಕ್ಕೂ ಹಾಕಿಕೊಳ್ಳುತ್ತಿದ್ದಾರೆ. ಕೈಗೆ ವಂಕಿಗಳನ್ನೇ ಹಾಕಿಕೊಂಡಿದ್ದಾರೇನೋ ಎಂಬಂತೆ ಆಭರಣಗಳಲ್ಲಿ ವಂಕಿಗಳನ್ನು ಮಾಡಿ ಅವುಗಳನ್ನು ಬ್ಲೌಸಿಗೆ ಹೊಲಿಸುತ್ತಿದ್ದಾರೆ. ಪ್ರತಿಯೊಂದು ಜಾಕೆಟ್‌ಗೂ ಒಂದು ಹೊಸ ವಂಕಿ, ಹೊಸ ಹಾರ, ಹಿಂಭಾಗದಲ್ಲಿ ನೇತಾಡುವ ಹೊಸ ಲೋಲಾಕುಗಳು, ಬುಗುಡಿಗಳು, ಜಾಕೆಟ್‌ನ್ ಕತ್ತಿನ ಭಾಗಕ್ಕೆ ನೆಕ್‌ಲೆಸ್ ಹಾಕಿಕೊಂಡಂತಹ ಡಿಸೈನ್‌ಗಳು.
ಇನ್ನು ಸೀರೆಯ ಸೆರಗು ಅಂಚುಗಳಿಗೆ ಮಾಡುವ ಅಲಂಕಾರಕ್ಕಂತೂ ಮಿತಿಯೇ ಇಲ್ಲ. ಫಳಫಳನೆ ಹೊಳೆಯುವ ಹಳ್ಳುಗಳು , ಮಣಿ – ಮುತ್ತುಗಳು, ಕುಂದನ್ ಅಲಂಕಾರ, ಎಂಬ್ರಾಯಿಡರಿ ಹೀಗೆ ನಾನಾ ರೀತಿಯ ಡಿಸೈನ್‌ಗಳು ಹೊಲಿದಿರುತ್ತಾರೆ. ಸೆರಗಿನ ಕೊನೆಗೆ ಜೋತಾಡುವ ಮುತ್ತುಗಳು, ಮಣಿಗಳ ಅಲಂಕಾರ ಒಂದೇ ಎರಡೇ.
ಹೀಗೆ ಸೀರೆಗೆ ತಕ್ಕಂತೆ ಬ್ಲೌಸ್, ತಲೆ, ಕತ್ತು, ಸೊಂಟ, ಕೈ ಬಳೆಗಳಿಗೆ ಒಂದೇ ರೀತಿಯ ಡಿಸೈನ್‌ಗಳ ಆಭರಣಗಳನ್ನು ಧರಿಸುವುದು ಫ್ಯಾಷನ್ ಆಗಿದೆ. ಈ ಫ್ಯಾಷನ್‌ಗಳಲ್ಲಿ ಒಂದನ್ನು ನೋಡಿದಂತೆ ಇನ್ನೊಂದಿಲ್ಲ. ರಾತ್ರಿಯ ವೇಳೆಯಂತೂ ಇವು ದೀಪದ ಬೆಳಕಿನ ಕಾಂತಿಗೆ ಹೊಳೆಯುತ್ತಾ ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ಕೊಡುತ್ತವೆ. ನಿಜಕ್ಕೂ ಈ ಆಭರಣಗಳು ಕಣ್ಣಿಗೆ ಒಂದು ರೀತಿಯ ಹಬ್ಬವೆಂದೇ ಹೇಳಬಹುದು.
-ಸೌಮ್ಯಾ ಕಾಗಲ್
ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ