Advertisement

ತಾಲೂಕಿನ ರೈತರಿಗೆ ವರದಾನವಾದ ಫ‌ಸಲ್‌ ಬಿಮಾ

09:10 PM Oct 05, 2019 | Lakshmi GovindaRaju |

ಚನ್ನರಾಯಪಟ್ಟಣ: 2017-18 ಸಾಲಿನಲ್ಲಿ ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಲ್ಲಿ ತಾಲೂಕಿಗೆ 1.14 ಕೋಟಿ ರೂ.ಗಳನ್ನು 2,604 ಮಂದಿ ರೈತರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರ ಜಮಾ ಮಾಡಿದೆ. ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಲ್ಲಿ ವಿಮೆ ಹಣ ಪಾವತಿ ಮಾಡಿದ್ದ ತಾಲೂಕಿನ ಬಹುತೇಕ ರೈತರಿಗೆ ಈಗಾಗಲೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಮೆ ಪರಿಹಾರವನ್ನು ಸಕಾಲಕ್ಕೆ ಪ್ರತಿ ವರ್ಷವೂ ನೀಡುತ್ತಿದ್ದು, ಪ್ರಸಕ್ತ ವರ್ಷ ವಿಮೆ ಪರಿಹಾರ ಹಣ ಹೆಚ್ಚು ನೀಡಿದೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ರೈತರು ನೀಡಿರುವ ರಾಷ್ಟ್ರೀಕೃತ ಬ್ಯಾಂಕಿನ ಖಾತೆಗೆ ವಿಮೆ ಪರಿಹಾರ ಹಣ ಜಮಾ ಮಾಡಲಾಗಿದೆ.

Advertisement

ಮುಸುಕಿನ ಜೋಳ, ರಾಗಿ, ಆಲೂಗಡ್ಡೆ, ಹುರಳಿ, ಹೆಸರು, ಅಲಸಂದೆ, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಪ್ರಧಾನ ಮಂತ್ರಿ ಫ‌ಸಲ್‌ ಭಿಮಾ ಯೋಜನೆಯಲ್ಲಿ ಸಾವಿರಾರು ರೈತರು ವಿಮೆ ಮಾಡಿಸಿದ್ದರು. ರೈತರು ಖಾತೆ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬ್ಯಾಲೆನ್ಸ್‌ ಮಾಹಿತಿ ಪಡೆದಾಗ ಹಣ ತಮ್ಮ ಖಾತೆಗೆ ಸಂದಾಯವಾ ಗಿರುವುದು ತಿಳಿದಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಹಣ ಜಮೆ ಆಗಿರವಬಹುದೆಂದು ತಿಳಿದ ರೈತರು ಕೃಷಿ ಇಲಾಖೆ ಸಂಪರ್ಕಿಸಿದಾಗ ಬೆಳೆವಿಮೆ ಪರಿಹಾರ ಹಣ ಬಂದಿರುವುದಾಗಿ ತಿಳಿಸಿದ್ದಾರೆ.

2016-17ರಲ್ಲಿ 67.89 ಲಕ್ಷ ರೂ.: 2016-17 ರಲ್ಲಿ ತಾಲೂಕಿನ ಕಸಬಾ ಹೋಬಳಿಯಲ್ಲಿ 544 ರೈತರಿಗೆ 12.67 ಲಕ್ಷ ರೂ., ದಂಡಿಗನಹಳ್ಳಿ ಹೋಬಳಿ 1383 ರೈತರ ಖಾತೆಗೆ 12.75 ಲಕ್ಷ ರೂ., ನುಗ್ಗೇಹಳ್ಳಿ ಹೋಬಳಿ 625 ರೈತರಿಗೆ 14.58 ಲಕ್ಷ, ಬಾಗೂರು 583 ಮಂದಿಗೆ 11.84 ಲಕ್ಷ ರೂ., ಶ್ರವಣಬೆಳಗೊಳ ಹೋಬಳಿಯ 168 ಕೃಷಿಕರಿಗೆ 12.03 ಲಕ್ಷ ರೂ., ಹಿರೀಸಾವೆ ಹೋಬಳಿ 55 ರೈತರ ಖಾತೆಗೆ 4.02 ಲಕ್ಷ ರೂ. ಬೆಳೆ ವಿಮೆ ಪರಿಹಾರ ದೊರೆಯುವ ಮೂಲಕ ಒಟ್ಟಾರೆಯಾಗಿ 67.89 ರೂ. ಕೇಂದ್ರ ಸರ್ಕಾರ ನೀಡಿದೆ.

2017-18ರಲ್ಲಿ 1.14 ಕೋಟಿ ಪರಿಹಾರ: ತಾಲೂಕಿನ ಕಸಬಾ ಹೋಬಳಿಯಲ್ಲಿ 336 ರೈತರು 250 ಎಕರೆ ಪ್ರದೇಶಕ್ಕೆ 52 ಸಾವಿರ ವಿಮೆ ಪ್ರೀಮಿಯಂ ಕಟ್ಟಿದ್ದು 27.86 ಲಕ್ಷ ರೂ. ಬೆಳೆವಿಮೆ ಪರಿಹಾರ ಹಣ ದೊರೆತಿದೆ. ದಂಡಿಗನಹಳ್ಳಿ ಹೋಬಳಿಯಲ್ಲಿ 880 ರೈತರು 756 ಎಕರೆ ಪ್ರದೇಶಕ್ಕೆ 1.34 ಲಕ್ಷ ರೂ. ಪ್ರೀಮಿಯಂ ಕಟ್ಟಿದ್ದು 4.64 ಲಕ್ಷ ರೂ. ಬೆಳೆವಿಮೆ ಪರಿಹಾರ ದೊರೆತಿದೆ, ಬಾಗೂರು 486 ರೈತರು 425 ಎಕರೆಗೆ 64 ಸಾವಿರ ಪ್ರೀಮಿಯಂ ಕಟ್ಟಿದ್ದು 13.58 ಲಕ್ಷ ರೂ. ಪರಿಹಾರ ದೊರೆತಿದೆ.

ಹಿರೀಸಾವೆ ಹೋಬಳಿ 379 ರೈತರು 295 ಎಕರೆ ಪ್ರದೇಶಕ್ಕೆ 54 ಸಾವಿರ ಪ್ರೀಮಿಯಂ ಕಟ್ಟಿದ್ದು 3.19 ಲಕ್ಷ ಪರಿಹಾರ ದೊರೆತಿದೆ, ನುಗ್ಗೇಹಳ್ಳಿ 415 ರೈತರು 328 ಎಕರೆಗೆ 62 ಸಾವಿರ ವಿಮೆ ಹಣ ಕಟ್ಟಿದ್ದು 9.84 ಲಕ್ಷ ರೂ. ದೊರೆತಿದೆ ಶ್ರವಣಬೆಳಗೊಳ ಹೋಬಳಿಯಲ್ಲಿ 108 ರೈತರು 95 ಎಕರೆ ಪ್ರದೇಶಕ್ಕೆ 20 ಸಾವಿರ ವಿಮೆ ಹಣ ಕಟ್ಟಿದ್ದು 54.89 ಲಕ್ಷ ರೂ. ಬೆಳೆವಿಮೆ ಪರಿಹಾರ ದೊರೆತಿದೆ.

Advertisement

ಪ್ರಸಕ್ತ ವರ್ಷವೂ ವಿಮೆ ಮಾಡಿಸಿದ್ದಾರೆ: ತಾಲೂಕಿನ ಆರು ಹೋಬಳಿಯಿಂದ 1,507 ರೈತರು 3,300 ಎಕರೆ ಪ್ರದೇಶಕ್ಕೆ ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಲ್ಲಿ 4.33 ಲಕ್ಷ ರೂ. ವಿಮೆಯ ಪ್ರೀಮಿಯಂ ಕಟ್ಟಿದ್ದಾರೆ. ತಾಲೂಕಿನಲ್ಲಿ ದಂಡಿಗನಹಳ್ಳಿ ಹೋಬಳಿ ಅತಿ ಹೆಚ್ಚು 1383 ಎಕರೆ ಕೃಷಿ ಭೂಮಿಗೆ ಪ್ರೀಮಿಯಂ ನೀಡಿದ್ದರೆ ಶ್ರವಣಬೆಳಗೊಳ ಅತಿ ಕಡಿಮೆ 168 ಎಕರೆ ಪ್ರದೇಶಕ್ಕೆ ಬೆಳೆವಿಮೆ ಮಾಡಿಸಿದ್ದಾರೆ.

ಸಮೀಕ್ಷೆ ನಡೆಯುತ್ತಿದೆ: ಪ್ರಸಕ್ತ ವರ್ಷ ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯ ಸಮೀಕ್ಷೆ ಈಗಾಗಲೇ ನಡೆಯುತ್ತಿದ್ದು ಎಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿದೆ ಎಂಬ ವರದಿಯನ್ನು ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ತಾಲೂಕಿನ ಕೃಷಿ ಇಲಾಖೆ ಮೂಲಕ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಗೆ ವರದಿ ನೀಡಿದ ಮೇಲೆ ಡಿಸೆಂಬರ್‌ ಅಂತ್ಯಕ್ಕೆ ವಿಮೆಯ ಪರಿಹಾರ ಹಣ ನೇರವಾಗಿ ವಿಮೆ ಮಾಡಿಸಿರುವ ರೈತರು ಖಾತೆಗೆ ಜಮೆಯಾಗಲಿದೆ.

ಎಲ್ಲೆಲ್ಲಿ ಎಷ್ಟು ಮಂದಿ ಬೆಳೆ ವಿಮೆ ಮಾಡಿಸಿದ್ದಾರೆ: ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ತಾಲೂಕಿನಲ್ಲಿ 10,922 ಮಂದಿ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಸಕಲೇಶಪುರ ತಾಲೂಕಿನಲ್ಲಿ 2,860 ಮಂದಿ ರೈತರು ವಿಮೆ ಮಾಡಿಸಿದ್ದಾರೆ. ಚನ್ನರಾಯಪಟ್ಟಣದಿಂದ 1,507 ರೈತರು, ಬೇಲೂರು-990,ಆಲೂರು-199, ಅರಕಲಗೂರು-134, ಹಾಸನ-129, ಹೊಳೆನರಸೀಪುರ-79 ಮಂದಿ ರೈತರು ಬೆಳೆ ವಿಮೆ ಮಾಡಿಸಿದ್ದಾರೆ.

ಪ್ರಸಕ್ತ ವರ್ಷ ಉತ್ತಮ ಮಳೆಯಾಗುತ್ತಿದೆ. ಬೆಳೆವಿಮೆ ಮಾಡಿಸುವು ಅಗತ್ಯವಿಲ್ಲ ಎಂದು ಹಲವು ಮಂದಿ ರೈತರು ಆಲೋಚನೆಯಲ್ಲಿದ್ದರು. ಆದರೆ ಮುಸುಕಿನ ಜೋಳೆ ಹಾಗೂ ರಾಗಿ ಬೆಳೆಗೆ ಸೈನಿಕ ಹುಳು ಹಾವಳಿ ಹೆಚ್ಚಿದ್ದು, ಬೆಳೆ ನಾಶವಾಗುತ್ತಿದೆ. ಹಾಗಾಗಿ ರೈತರು ತಮ್ಮ ಬೆಳೆಗೆ ವಿಮೆ ಮಾಡಿಸುವ ಮೂಲಕ ಕೃಷಿಯಲ್ಲಿ ಮುಂದಾಗುವ ನಷ್ಟಕ್ಕೆ ಪರಿಹಾರ ಪಡೆಯಲು ಆಸಕ್ತಿ ವಹಿಸಿದ್ದಾರೆ.
-ಎಫ್.ಕೆ.ಗುರುಸಿದ್ದಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆ ರೈತರ ಸಂಕಷ್ಟಕ್ಕೆ ವರವಾಗುತ್ತಿದೆ. ಆದರೆ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಅಪಪ್ರಚಾರದಿಂದ ಹೆಚ್ಚು ರೈತರು ವಿಮೆ ಮಾಡಿಸಲು ಮುಂದಾಗುತ್ತಿಲ್ಲ. ಕಳೆದ 3 ವರ್ಷದಿಂದ ಕೇಂದ್ರ ಸರ್ಕಾರ ಸಕಾಲಕ್ಕೆ ವಿಮೆ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದೆ. ರೈತರು ಸ್ವಯಂ ಪ್ರೇರಣೆಯಿಂದ ಬೆಳೆವಿಮೆ ಮಾಡಿಸ ಬೇಕು.
-ನಾಗರಾಜು, ಅಣ್ಣೇನಹಳ್ಳಿ ಗ್ರಾಮದ ಕೃಷಿಕ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next