Advertisement

ಕಾಶ್ಮೀರ ಇತ್ಯರ್ಥಕ್ಕೆ ಅಮೆರಿಕ, ಚೀನ ಮಧ್ಯಸ್ಥಿಕೆ : ಫಾರೂಕ್‌ ಒಲವು

04:43 PM Jul 21, 2017 | Team Udayavani |

ಹೊಸದಿಲ್ಲಿ : ”ಸುದೀರ್ಘ‌ ಕಾಲದಿಂದ ಇತ್ಯರ್ಥವಾಗದೆ ನನೆಗುದಿಗೆ ಬಿದ್ದಿರುವ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಅಮೆರಿಕ ಮತ್ತು ಚೀನದಂತಹ ಮೂರನೇ ದೇಶವನ್ನು ಭಾರತ ಮಧ್ಯಸ್ಥಿಕೆಗಾಗಿ ಬಳಸಿಕೊಳ್ಳಬೇಕು” ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

Advertisement

“ಸಿಕ್ಕಿಂ ನ ಡೋಕ್‌ಲಾಂ ಗಡಿಯಲ್ಲಿ  ಭಾರತ – ಚೀನ ಇದೀಗ ಎರಡು ತಿಂಗಳಿಂದ ಮುಖಾಮುಖೀಯಾಗಿದ್ದು ಗಂಭೀರ ಉದ್ವಿಗ್ನತೆಗೆ ಹಾಗೂ ಸಂಭಾವ್ಯ ಸಮರಕ್ಕೆ ಕಾರಣವಾಗಿರುವ ಈ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಚೀನದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ; ಹಾಗಿರುವಾಗ ಬಹು ದೀರ್ಘ‌ಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಭಾರತ ಪಾಕ್‌ ಜತೆಗೆ ಯಾಕೆ ಮಾತುಕತೆಗೆ ಮುಂದಾಗಬಾರದು; ಅಥವಾ ಮೂರನೇ ದೇಶದ ಮಧ್ಯಸ್ಥಿಕೆಗಾಗಿ ಭಾರತ ಯಾಕೆ ಚೀನ ಅಥವಾ ಅಮೆರಿಕವನ್ನು ಬಳಸಿಕೊಳ್ಳಬಾರದು” ಎಂದು ಫಾರೂಕ್‌ ಅಬ್ದುಲ್ಲ ಪ್ರಶ್ನಿಸಿದ್ದಾರೆ. 

“ನೀವಿನ್ನು ಎಷ್ಟು ಕಾಲ ಕಾಯಲು ಸಾಧ್ಯ ? ಒಂದಲ್ಲ ಒಂದು ದಿನ ನೀವು ಗೂಳಿಯನ್ನು ಅದರ ಕೊಂಬು ಹಿಡಿದುಕೊಂಡೇ ಎದುರಿಸಬೇಕಾಗುವುದು. ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಭಾರತ – ಪಾಕಿಸ್ಥಾನ ಮಾತುಕತೆ ನಡೆಸುವುದೊಂದೇ ಪರಿಹಾರ ಮಾರ್ಗ. ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ತಾನು ಮಧ್ಯಸ್ಥಿಕೆಗೆ ಸಿದ್ಧನೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಹಿಂದೆಯೇ ಹೇಳಿದ್ದಾರೆ; ಈಚೆಗೆ ಚೀನ ಕೂಡ ಇಂತಹ ಕೊಡುಗೆಯನ್ನು ನೀಡಿದೆ. ಇವುಗಳನ್ನು ಭಾರತ ಯಾಕೆ ಬಳಸಿಕೊಳ್ಳಬಾರದು” ಎಂದು ಫಾರೂಕ್‌ ಪ್ರಶ್ನಿಸಿದ್ದಾರೆ. 

ಮುಂದುವರಿದು ಅಬ್ದುಲ್ಲ ಹೀಗೆ ಹೇಳುತ್ತಾರೆ : “ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಹೇಳುತ್ತಿದ್ದರು “ನೀವು ಸ್ನೇಹಿತರನ್ನು ಬದಲಾಯಿಸಬಹುದು; ಆದರೆ ನೆರೆಕರೆಯವರನ್ನು ಅಲ್ಲ’ ಎಂದು. ಆದುದರಿಂದ ನೆರೆಹೊರೆಯವರೊಂದಿಗೆ ಮುಂದೆ ಸಾಗಲು ಸ್ನೇಹವೊಂದೇ ಮಾರ್ಗ; ಇಲ್ಲದಿದ್ದರೆ ನಾವು ಹಿನ್ನಡೆಯನ್ನು ಕಾಣುತ್ತೇವೆ; ನೆರೆಹೊರೆಯವರೇ ನಮಗೆ ಶತ್ರುಗಳಾಗುತ್ತಾರೆ.”

ಅಂದ ಹಾಗೆ ಫಾರೂಕ್‌ ಅವರ ಈ ಮಾತುಗಳು (3ನೇ ದೇಶದ ಮಧ್ಯಸ್ಥಿಕೆ) ರಾಜಕೀಯ ವಲಯದಲ್ಲಿ  ಭಾರೀ ಬಿರುಗಾಳಿಯನ್ನು ಎಬ್ಬಿಸಿದೆ. 

Advertisement

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು “ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕೇಂದ್ರ ಸರಕಾರದ ನೀತಿಯಿಂದಾಗಿ ಜಮ್ಮು ಕಾಶ್ಮೀರ ನಾಶವಾಗಿ ಹೋಗಿದೆ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಹಾಗಿದ್ದರೂ ಕಾಶ್ಮೀರ ಸಮಸ್ಯೆ ಬಗೆಹರಿಸಲು 3ನೇ ದೇಶದ ಮಧ್ಯಸ್ಥಿಕೆಯ ಉಪಾಯ ಸರ್ವಥಾ ಸರಿಯಲ್ಲ. ಭಾರತವೆಂದರೆ ಕಾಶ್ಮೀರ, ಕಾಶ್ಮೀರವೆಂದರೆ ಭಾರತ’ ಎಂದು ಹೇಳಿದ್ದಾರೆ. 

ಫಾರೂಕ್‌ ಅವರ 3ನೇ ದೇಶದ ಮಧ್ಯಸ್ಥಿಕೆಯ ಉಪಾಯವನ್ನು ಅವರ ಪುತ್ರ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲ ಬೆಂಬಲಿಸಿದ್ದಾರೆ. 

“ನನ್ನ ತಂದೆಯ ಮಾತುಗಳನ್ನು ತಿರುಚಿ ಸಂಪೂರ್ಣವಾಗಿ ವಿಕೃತಗೊಳಿಸಲಾಗಿದೆ. ನನ್ನ ತಂದೆ ಕಾಂಗ್ರೆಸ್‌ ಸದಸ್ಯರಲ್ಲ; ಹಾಗಾಗಿ ಅವರಿಗೆ ಏನು ಹೇಳುವುದಿದೆಯೋ ಅದನ್ನು ಹೇಳುವ ಸ್ವಾತಂತ್ರ್ಯವಿದೆ; ಮತ್ತು ಅವರದನ್ನು ನಿರ್ಭಯರಾಗಿ ಹೇಳಿದ್ದಾರೆ’ ಎಂದು ಉಮರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next