ಲಖನ್‌ಪುರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಆದಿ ಶಂಕರಾಚಾರ್ಯರಿಗೆ ಹೋಲಿಸಿದ್ದಾರೆ.
ಪಾದಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಉನ್ನತ ಪೀಠದಲ್ಲಿರುವ ವ್ಯಕ್ತಿಗೆ ಹೋಲಿಸಿರುವುದು ಇದು ಎರಡನೇ ಬಾರಿಯಾಗಿದ್ದು ಮೊದಲು ಭಗವಾನ್ ರಾಮ ಮತ್ತು ಈಗ ಶಂಕರಾಚಾರ್ಯರೊಂದಿಗೆ ಹೋಲಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಲಖನ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅಬ್ದುಲ್ಲಾ, ಶಂಕರಾಚಾರ್ಯರ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಂಡ ಮೊದಲ ವ್ಯಕ್ತಿ ರಾಹುಲ್ ಗಾಂಧಿ ಎಂದು ಹೇಳಿದರು.
“ಶತಮಾನಗಳ ಹಿಂದೆ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದರು. ರಸ್ತೆಗಳಿಲ್ಲದಿದ್ದರೂ ಅವರು ಕಾಡು ಮೇಡುಗಳಲ್ಲಿ ನಡೆದಿದ್ದರು. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದುಕೊಂಡಿದ್ದರು. ಅದೇ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಯಾತ್ರೆ ಕೈಗೊಂಡು ಕಾಶ್ಮೀರ ತಲುಪುತ್ತಿರುವ ಎರಡನೇ ವ್ಯಕ್ತಿ ರಾಹುಲ್ ಗಾಂಧಿ” ಎಂದು ಅಬ್ದುಲ್ಲಾ ಹೇಳಿದರು.
”ಭಾರತವನ್ನು ಒಗ್ಗೂಡಿಸುವುದು ಈ ಯಾತ್ರೆಯ ಗುರಿಯಾಗಿದೆ. ಭಾರತದಲ್ಲಿ ದ್ವೇಷವನ್ನು ಸೃಷ್ಟಿಸಲಾಗುತ್ತಿದೆ ಮತ್ತು ಧರ್ಮಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲಾಗುತ್ತಿದೆ. ಗಾಂಧಿ ಮತ್ತು ರಾಮನ ಭಾರತವು ಒಂದಾಗಿತ್ತು. ಎಲ್ಲಾ ಒಂದು, ಈ ಯಾತ್ರೆಯು ಭಾರತವನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದೆ. ಇದರ ಶತ್ರುಗಳು ಭಾರತ, ಮಾನವೀಯತೆ ಮತ್ತು ಜನರ ಶತ್ರುಗಳು” ಎಂದರು.