ಮುಂಬಯಿ: ಮಾಜಿ ಕ್ರಿಕೆಟಿಗ ಫಾರೂಖ್ ಎಂಜಿನಿಯರ್, ಶುಕ್ರವಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರ ಕ್ಷಮೆ ಕೇಳಿದ್ದಾರೆ. ಗುರುವಾರವಷ್ಟೇ ಬಿಸಿಸಿಐ ಆಯ್ಕೆಸಮಿತಿ ಸದಸ್ಯರು, ಏಕದಿನ ವಿಶ್ವಕಪ್ ವೇಳೆ ಅನುಷ್ಕಾ ಶರ್ಮಗೆ ಟೀ ಕೊಡುವುದರಲ್ಲಿ ಮಗ್ನರಾಗಿದ್ದರು ಎಂದು ಫಾರೂಖ್ ಟೀಕಿಸಿದ್ದರು.
ಆಯ್ಕೆಗಾರರಿಗೆ ಯೋಗ್ಯತೆಯಿಲ್ಲ, ಅವರೆಲ್ಲ ಮಿಕ್ಕಿ ಮೌಸ್ ರೀತಿಯಿದ್ದಾರೆ ಎಂದು ಟೀಕಿಸುವ ಭರದಲ್ಲಿ ಫಾರೂಖ್, ಅನುಷ್ಕಾ ಹೆಸರನ್ನೂ ಎಳೆದು ತಂದಿದ್ದರು. ಇದಕ್ಕೆ ಅನುಷ್ಕಾ ಕಟು ಉತ್ತರ ನೀಡಿದ್ದರು.
“ನಾನು ನಿಜಕ್ಕೂ ಅನುಷ್ಕಾ ಹೆಸರನ್ನು ಆಯ್ಕೆಗಾರರನ್ನು ಲೇವಡಿ ಮಾಡಲು ಸೇರಿಸಿದ್ದೆ. ಆದರೆ ಅದೇ ದೊಡ್ಡದಾಯಿತು. ಹುತ್ತವನ್ನು ಪರ್ವತದಂತೆ ಬೆಳೆಸಲಾಯಿತು. ಬಡಪಾಯಿ ಅನುಷ್ಕಾ ನಿಜಕ್ಕೂ ಒಳ್ಳೆಯ ಹುಡುಗಿ. ಕೊಹ್ಲಿ ಅದ್ಭುತ ನಾಯಕ. ತರಬೇತುದಾರ ರವಿಶಾಸ್ತ್ರಿಯೂ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಯಾರೋ ಒಬ್ಬ ಆಯ್ಕೆಗಾರ ಭಾರತ ತಂಡದ ಉಡುಗೆ ಧರಿಸಿದ್ದರಿಂದ ಇದೆಲ್ಲ ಶುರುವಾಯಿತು’ ಎಂದು ಫಾರೂಖ್ ರಿಪಬ್ಲಿಕ್ ಟೀವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಫಾರೂಖ್ ಹಿಂದೆ ಹೇಳಿದ್ದೇನು?
ಗುರುವಾರ ಮಾತನಾಡಿದ್ದ ಫಾರೂಖ್ ಎಂಜಿನಿಯರ್, ಬಿಸಿಸಿಐ ಆಯ್ಕೆಸಮಿತಿಯಲ್ಲಿ ಅನುಭವಿಗಳೇ ಇಲ್ಲ. ಆಯ್ಕೆಯಲ್ಲಿ ಕೊಹ್ಲಿಯದ್ದೇ ಪ್ರಭಾವವಿದೆ. ಈ ಆಯ್ಕೆಸಮಿತಿ ಏಕದಿನ ವಿಶ್ವಕಪ್ ವೇಳೆ ಭಾರತ ತಂಡದ ನಾಯಕ ಕೊಹ್ಲಿ ಪತ್ನಿ ಅನುಷ್ಕಾಗೆ ಟೀ ಕೊಡುವುದರಲ್ಲಿ ಬ್ಯುಸಿಯಾಗಿದ್ದರು ಎಂದಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅನುಷ್ಕಾ, ನಿಮಗೆ ಆಯ್ಕೆಗಾರರ ಮೇಲೆ ಸಿಟ್ಟಿದ್ದರೆ, ನೇರವಾಗಿ ಅವರ ಮೇಲೆಯೇ ಮುಗಿಬೀಳಿ. ಅನವಶ್ಯಕವಾಗಿ ನನ್ನ ಹೆಸರನ್ನು ಎಳೆದುತರಬೇಡಿ. ನಾನು ವಿಶ್ವಕಪ್‌ನಲ್ಲಿ ಭಾಗವಹಿಸಿದ್ದೇ ಒಂದೇಒಂದು ಪಂದ್ಯದಲ್ಲಿ. ಆಗ ನಾನು ಕುಟಂಬ ಸದಸ್ಯರ ಬಾಕ್ಸ್‌ನಲ್ಲಿ ಇದ್ದೆ ಹೊರತು, ಆಯ್ಕೆಗಾರರ ಬಾಕ್ಸ್‌ನಲ್ಲಿ ಅಲ್ಲ. ಅಷ್ಟಕ್ಕೂ ನಾನು ಕುಡಿಯುವುದು ಕಾಫಿ, ಟೀ ಅಲ್ಲ ಎಂದಿದ್ದರು.