ಬೆಂಗಳೂರು: ಸೋಲದೇವನಹಳ್ಳಿಯ ನೀಲಗಿರಿ ತೋಪಿನಲ್ಲಿ ನಿಷೇಧಿತ ಕ್ಯಾಟ್ಫಿಶ್‌ಗಳನ್ನು ಅಕ್ರಮ ಸಾಕುತ್ತಿದ್ದ ಜಾಲ ಪೊಲೀಸರ ಬಲೆಗೆ ಬಿದ್ದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಗುತ್ತಿಗೆ ಪಡೆದ ಜಮೀನಿನಲ್ಲಿ ಅರ್ಧ ಎಕರೆಗೆ ಒಂದರಂತೆ ಆರು ಹೊಂಡ ನಿರ್ಮಿಸಿ ಪಶ್ಚಿಮ ಬಂಗಾಳದಿಂದ ತಂದಿರುವ ಸಾವಿರಾರು ಮೀನುಗಳನ್ನು ಸಾಕುತ್ತಿದ್ದರು. ಸೋಲದೇವನಹಳ್ಳಿ ಸುತ್ತಲ ಕೋಳಿ ಮತ್ತು ಮಾಂಸದಂಗಡಿಗಳ ತ್ಯಾಜ್ಯವನ್ನು ಮೀನುಗಳಿಗೆ ಹಾಕುತ್ತಿದ್ದರು. ನಂತರ ಬೆಳೆದ ಮೀನುಗಳನ್ನು ಮುಂಬೈ, ಕೇರಳ, ತಮಿಳುನಾಡಿನ ಕೆಲ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಉತ್ತರ ವಲಯದ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ರೀನಾ, ಕ್ಯಾಟ್ಫಿಶ್‌ಗಳಿಗೆ ಕೋಳಿ ಅಥವಾ ಇತರೆ ಮಾಂಸದ ತ್ಯಾಜ್ಯವನ್ನು ಆಹಾರವಾಗಿ ಹಾಕಿ ಸಾಕಲಾಗುತ್ತದೆ. ಇದರಿಂದ ನೀರು ಕಲುಷಿತಗೊಂಡು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಆಫ್ರಿಕಾ ಮೂಲದ ಈ ಮೀನುಗಳನ್ನು ಭಾರತದಲ್ಲಿ ಸಾಕಣೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ಎನ್‌ಜಿಟಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರು ಹೊಂಡಗಳನ್ನು ನಾಶ ಪಡಿಸಿ, ಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
Advertisement
ಕೊಂಡಶೆಟ್ಟಿಹಳ್ಳಿಯ ನಾರಾಯಣ ಮೂರ್ತಿ (47) ಹಾಗೂ ಮಧುಗಿರಿಯ ಚಂದ್ರು (45) ಬಂಧಿತರು. ಆರೋಪಿಗಳು ಸೋಲದೇವನಹಳ್ಳಿಯ ಕಾಳತಮ್ಮನಹಳ್ಳಿಯ ನೀಲಗಿರಿ ತೋಪಿನ ಮಧ್ಯದಲ್ಲಿರುವ ಮೂರು ಎಕರೆ ಜಾಗದಲ್ಲಿನ ತೆರೆದ ಹೊಂಡಗಳಲ್ಲಿ ಕ್ಯಾಟ್ಫಿಶ್ ಸಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ, 20 ಟನ್‌ಗೂ ಅಧಿಕ ಮೀನುಗಳನ್ನು ವಶಪಡಿಸಿಕೊಂಡಿದ್ದಾರೆ.