ಯಳಂದೂರು: ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಪಡೆಯಬಹುದು, ವ್ಯವಸ್ಥಿತ ಯೋಜನೆ ರೂಪಿಸಿಕೊಂಡರೆ ಲಭ್ಯವಿರುವ ಜಾಗದಲ್ಲಿ ಕೃಷಿ ಜತೆಗೆ ಕುರಿ ಸಾಕಣಿಕೆ ಮೂಲಕ ಯಶಸ್ಸು ಕಂಡುಕೊಳ್ಳಬಹುದು ಎಂಬುದನ್ನು ತಾಲೂಕಿನ ಗೌಡಹಳ್ಳಿ ಗ್ರಾಮದ ರೈತ ರವಿ ಸಾಬೀತುಪಡಿಸಿದ್ದಾರೆ.
ತಂದೆ-ತಾಯಿ ಗ್ರಾಮದ ಬಹುತೇಕ ಜನ ಕೃಷಿಯಲ್ಲಿ ತೊಡ ಗಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಬಾಳೆ, ಕಬ್ಬು, ಜೋಳ, ವಿವಿಧ ತರಕಾರಿ ಬೆಳೆ, ಹೂವಿನ ಬೆಳೆ ಸೇರಿ ವಿವಿಧ ಬೆಳೆ ಬೆಳೆದು, ಉತ್ತಮ ಫಸಲು ಪಡೆಯುವ ಮೂಲಕ ನಿರಂತರ ಕೃಷಿ ಚಟುವಟಿಕೆ ಪರಿಶ್ರಮದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಇವರಿಗೆ ಇರುವ 5 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಜೋಳ, ಭತ್ತ , ಈರುಳ್ಳಿ, ಹೂವಿನ ಬೆಳೆಗಳಾದ ಸುಗಂಧರಾಜ, ಚೆಂಡು ಮಲ್ಲಿಗೆ ಸೇರಿ ಇತರೆ ವಿವಿಧ ಜಾತಿ ಬೆಳೆ ಬೆಳೆಯುವ ಮೂಲಕ ಹೆಚ್ಚು ಪ್ರಮಾಣದಲ್ಲಿ ಲಾಭಗಳಿಸುತ್ತಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂ.ಗಳ ಲಾಭ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಹಕಾರ ಕ್ಷೇತ್ರದಲ್ಲೂ ಸೈ: ಗೌಡಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಜಿಲ್ಲಾ ಸಹಕಾರ ಸಂಘದ ಯೂನಿಯನ್ ನಿರ್ದೇ ಶಕರಾಗಿ 2 ಬಾರಿ ಆಯ್ಕೆಯಾಗುವ ಮೂಲ ಕ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೈತರಿಗೆ ಸಹಕಾರ ಕ್ಷೇತ್ರದಿಂದ ದೊರೆಯುವ ಸಾಲ ಸೌಲಭ್ಯ, ಗೊಬ್ಬರ, ಸೇರಿ ಇತರೆ ಬಗ್ಗೆ ರೈತ ರಿಗೆ ಮಾಹಿತಿ ನೀಡಿ ಸಹಕಾರ ರಂಗ ದಲ್ಲೂ ಹೆಚ್ಚು ಪ್ರಗತಿ ಪಡೆಯಲು ಅನುಕೂಲವಾಗಿದೆ ಎನ್ನುತ್ತಾರೆ ರವಿ ಅವರು.
ಕಾಡು ಪ್ರಾಣಿಗಳ ಕಾಟ: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಸಮೀಪದಲ್ಲೇ ಇವರ ಜಮೀನಿದೆ. ಆಹಾರ, ನೀರಿಗಾಗಿ ಹಳ್ಳಿಗಳತ್ತ ಬಂದು ಹೋಗುತ್ತಿರುವ ಜಿಂಕೆ, ಆನೆ, ಕರಡಿ, ಬೆಳೆ ತಿಂದು ಹಾಕುತ್ತಿವೆ. ಇದರ ಜತೆಗೆ ಮೊಲ, ಕಾಡುಹಂದಿ, ನವಿಲು ಪ್ರತಿ ನಿತ್ಯ ಬೆಳೆ ನಾಶ ಮಾಡುತ್ತವೆ. ಸಂಬಂಧಪಟ್ಟ ಅರಣ್ಯ ಇಲಾಖೆ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಕುರಿ ಸಾಕಾಣಿಕೆ: ಕೃಷಿ ಜತೆಗೆ ಕುರಿ ಸಾಕಾಣಿಕೆ ಬಗ್ಗೆ ಪತ್ರಿಕೆ, ಮೊಬೈಲ್, ಯೂಟ್ಯೂಬ್ ಗಳಲ್ಲಿ ಮಾಹಿತಿ ತಿಳಿದು ಕುರಿ ಸಾಕುವ ಆಸೆ ಚಿಗುರೊಡೆಯಿತು. ಮನೆ ಬಳಿ 1.50 ಲಕ್ಷ ರೂ., ವೆಚ್ಚದಲ್ಲಿ ಕುರಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಿದರು. ಸ್ಥಳೀಯ ನಾಟಿ ಕುರಿ ಸಾಕಾಣಿಕೆ ಮಾಡಲಾರಂಭಿಸಿದರು. ಜತೆಗೆ ಗ್ರಾಪಂ ನರೇಗಾ ಯೋಜನೆಯಲ್ಲಿ ಕುರಿ ಘಟಕ ನಿರ್ಮಾಣಕ್ಕೆ ಸಹಾಯ ಧನ ಪಡೆದುಕೊಂಡಿದ್ದು ಇನ್ನಷ್ಟು ವೃದ್ಧಿಸುವ ಯೋಜನೆಯನ್ನು ರೈತರಾದ ರವಿ ಹಾಕಿಕೊಂಡಿದ್ದಾರೆ.
ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬೆಳೆ ಬೆಳೆದರೆ ಯಾವ ರೈತ ಕೂಡ ಸಂಕಷ್ಟಕ್ಕೆ ಸಿಲುಕುವುದಿಲ್ಲ. ನಮ್ಮ ರೈತರು ಒಂದೇ ಬೆಳೆಗೆ ಒಗ್ಗಿಕೊಳ್ಳದೆ ಮಿಶ್ರ ಬೇಸಾಯಕ್ಕೆ ಹೆಚ್ಚು ಒತ್ತು ಕೊಡಬೇಕು. ಆಗ ಒಂದು ಬೆಳೆ ಕೈ ಕೊಟ್ಟರೆ ಮತ್ತೂಂದು ಬೆಳೆ ಕೈ ಹಿಡಿಯುತ್ತದೆ. ಜತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ ಮಾಡಿದರೆ ಹೆಚ್ಚು ಲಾಭವಿದೆ.
– ಎಂ.ರವಿ, ರೈತ ಗೌಡಹಳ್ಳಿ ಗ್ರಾಮ
-ಫೈರೋಜ್ ಖಾನ್