ಕಾಸರಗೋಡು: ಪರವನಡ್ಕ ಯುವಜನ ಒಕ್ಕೂಟದ ಆಶ್ರಯದಲ್ಲಿ ಕೊಟ್ಟರುವಂ ಶ್ರೀ ವಿಷ್ಣು ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಚೆಮ್ನಾಡ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಗದ್ದೆಗಿಳಿದು ಭತ್ತ ನಾಟಿ ಮಾಡಿ ಭತ್ತ ಬೆಳೆಯುವ ಬಗ್ಗೆ ಮನನ ಮಾಡಿಕೊಂಡರು.
ಭತ್ತ ನಾಟಿ ಮಾಡುವ ಮತ್ತು ಕೃಷಿ ಸಂಸ್ಕೃತಿಯನ್ನು ಅರ್ಥೈಸುವ ಉದ್ದೇಶದೊಂದಿಗೆ ಚೆಮ್ನಾಡ್‌ನ ಗದ್ದೆಯಲ್ಲಿ ನಾಟಿ ಉತ್ಸವ ಆಯೋಜಿಸಲಾಗಿತ್ತು. ಚೆಮ್ನಾಡ್ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಬಾಲಕೃಷ್ಣನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಾದ ಮಾಧವನ್ ನಾಯರ್, ಸಜಿತ, ಚೆಮ್ನಾಡ್ ಸರ್ವೀಸ್ ಸಹಕಾರಿ ಬ್ಯಾಂಕ್ ನಿರ್ದೇಶಕ ಸದಾಶಿವ, ಕೃಷಿ ಅಧಿಕಾರಿ ರಾಜ್‌ಗೋಪಾಲನ್, ಪುರುಷೋತ್ತಮನ್ ಮೊದಲಾದವರು ಮಾತನಾಡಿದರು.
ಹಲವು ವರ್ಷಗಳಿಂದ ಹಡಿಲು ಬಿಟ್ಟು ಬಂಜರು ಭೂಮಿಯಾಗಿದ್ದ ಈ ಗದ್ದೆಯಲ್ಲಿ ಯುವಜನ ಒಕ್ಕೂಟದ ಕಾರ್ಯಕರ್ತರಾದ ವಿಶ್ವನಾಥನ್, ರಾಜನ್, ಉಣ್ಣಿಕೃಷ್ಣನ್, ಮುರಳೀಧರನ್ ಭತ್ತ ಕೃಷಿ ಬೆಳೆಯಲು ಆರಂಭಿಸಿ ಮಕ್ಕಳಿಗೂ ಕೃಷಿಯ ಅನುಭವವನ್ನು ಹಂಚಿಕೊಂಡರು.
ವಿದ್ಯಾರ್ಥಿಗಳ ಸಹಿತ ಸಾಮೂಹಿಕ ಭತ್ತ ಕೃಷಿ ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.