ಬೆಂಗಳೂರು: ಕೇಂದ್ರ ಸರ್ಕಾರ ದೇಶದ ರೈತರ ಪರವಾಗಿ ರೈತರಿಗೆ ಅನುಕೂಲವಾಗುವ ಮಸೂದೆ ಅಂಗೀಕರಿಸಿದೆ. ಇದು ಸ್ವಾಗತಾರ್ಹ, ಇದು ರೈತರಿಗೆ ಸ್ವಾತಂತ್ರ್ಯ ಸಿಕ್ಕ ಹಾಗಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿದೆ. ರೈತನಿಗೆ ಅನೇಕ ರೀತಿಯ ಚಾರ್ಜ್ ಹಾಕಲಾಗುತ್ತಿತ್ತು. ಅಲ್ಲದೇ ರೈತರು ಶೋಷಣೆಗೊಳಗಾಗುತ್ತಿದ್ದರು. ಆದರೆ ಎಪಿಎಂಸಿ ಮುಚ್ಚುವುದಿಲ್ಲ. ವ್ಯಾಪಾರಿಗಳು ಶಾಮೀಲಾಗಿ ರೈತರಿಂದ ಹೆಚ್ಚು ದಳ್ಳಾಳಿ ಶುಲ್ಕ ವಸೂಲಿ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿದೆ. ರಾಜ್ಯದಲ್ಲಿಯೂ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದರು.
ಇದನ್ನೂ ಓದಿ: Unlock 4.0: ಕೋವಿಡ್ 19 ಸೋಂಕು ಹೆಚ್ಚಳ-ಈ ನಗರ, ರಾಜ್ಯಗಳಲ್ಲಿ ಮತ್ತೆ ಹೊಸ ನಿರ್ಬಂಧ ಜಾರಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್ ಈ ಕಾಯ್ದೆ ತಿದ್ದುಪಡಿ ಬಗ್ಗೆ ಯಾವುದೇ ರೈತರು ವಿರೋಧ ಮಾಡಿಲ್ಲ. ಈಗ ರೈತ ತನ್ನ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಪಿಎಂಸಿ ಹೊರಗೆ ಮಾರಾಟ ಮಾಡಿದರೆ ಅವನಿಗೆ ದಂಡ ವಿಧಿಸಲಾಗುತ್ತಿತ್ತು. ಈಗ ರೈತ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದರು.
ರೈತ ಯಾವುದೇ ಕಂಪನಿಗೆ ಮಾರಾಟ ಮಾಡಬಹುದು. ರೈತನಿಗೆ ಒಳ್ಳೆಯ ಬೆಲೆ ದೊರೆತರೆ ಎಲ್ಲಿಯಾದರೂ ಮಾರಲಿ. 50 ಮಲ್ಟಿ ನ್ಯಾಷನಲ್ ಕಂಪನಿಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ167 ಎಪಿಎಂಸಿ ಇವೆ. ಯಾವುದೇ ಎಪಿಎಂಸಿಯಲ್ಲಿ ಯಾವ ಬೆಲೆಗೆ ಮಾರಾಟ ಆಗುತ್ತದೆ ಎನ್ನುವ ಮಾಹಿತಿ ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದರು.