ಅಫಜಲಪುರ: ಈ ವರ್ಷದ ಮುಂಗಾರು ಮಳೆ ಆರಂಭದಲ್ಲಿ ಅಬ್ಬರಿಸಲಿಲ್ಲ. ಮಧ್ಯದಲ್ಲಿ ಅಬ್ಬರಿಸಿದರೂ ಸಮರ್ಪಕವಾಗಿ ಮಳೆಯಾಗಲಿಲ್ಲ. ಹಿಂಗಾರು ಮಳೆಯೂ ಕೈಕೊಟ್ಟಿದ್ದು, ರೈತರು ಆತಂಕದಲ್ಲಿರುವಂತಾಗಿದೆ. ಹೀಗಾಗಿ ನೀರಾವರಿ
ಇರುವ ರೈತರು ಸ್ಪಿಂಕ್ಲರ್‌ಗಳ ಮೋರೆ ಹೋಗಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಿಂಗಾರು ಮಳೆ ಸರಿಯಾಗಿ ಬಂದಿಲ್ಲ. ಆದರೂ ಮುಂಗಾರು ಮಧ್ಯದಲ್ಲಿ ಬಂದಿದ್ದರಿಂದ ಬೇಸಾಯ ಭೂಮಿ ಹದಗೊಂಡಿತ್ತು. ಅಲ್ಲದೆ ಕೆರೆ ಕುಂಟೆಗಳು, ಬಾವಿ, ಕೊಳವೆ ಬಾವಿಗಳಿಗೆ ನೀರಾಗಿತ್ತು. ಹೀಗಾಗಿ ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ಬೆಳೆಗಳಿಗೆ ತೇವಾಂಶದ ಕೊರತೆ ಕಾಡುತ್ತಿದೆ. ಹೀಗಾಗಿ ಒಣ ಬೇಸಾಯಲ್ಲಿ ಬಿತ್ತನೆ ಮಾಡಿದ ರೈತರು ಮುಗಿಲ ಕಡೆ ಮುಖ ಮಾಡಿ ನೋಡುವಂತಾಗಿದೆ. ಇನ್ನೂ ನೀರಾವರಿ ಮತ್ತು ನದಿ ದಡದಲ್ಲಿರುವ ರೈತರು ಸ್ಪಿಂಕ್ಲರ್‌ಗಳನ್ನು ಬಳಸಿಕೊಂಡು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೆಳೆಗಳನ್ನು ಉಳಿಸಿಕೊಳ್ಳಲು ಸಾಹಸ ಮಾಡುತ್ತಿದ್ದಾರೆ.
ತಾಲೂಕಿನ ಮಣೂರು, ಹೊಸೂರ ಸೇರಿದಂತೆ ಕೆಲವೊಂದು ಗ್ರಾಮಗಳಲ್ಲಿ ಹಿಂಗಾರು ಬೆಳೆಗಳು ಒಣಗಿವೆ. ಕೆಲವೊಂದು ಗ್ರಾಮಗಳಲ್ಲಿ ರೈತರು ಹಿಂಗಾರು ಬೆಳೆ ಒಣಗಿದ್ದರಿಂದ ರೈತರು ಬಿತ್ತಿದ ಬೆಳೆಯನ್ನು ಹರಗುತ್ತಿದ್ದಾರೆ. ಒಟ್ಟಿನಲ್ಲಿ ತಾಲೂಕಿನಾದ್ಯಂತ ಹಿಂಗಾರು ಮಳೆ ಕೊರತೆ ಇದ್ದು, ಹಿಂಗಾರು ಬೆಳೆಗಳು ರೈತರ ಕೈ ಹಿಡಿಯುತ್ತಿಲ್ಲ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಾದ್ಯಂತ ಹಿಂಗಾರು ಬೆಳೆ ಕ್ಷೇತ್ರ 66960 ಹೆಕ್ಟೇರ್ ಬಿತ್ತನೆ ಗುರಿ ಇದೆ. ಈ ಪೈಕಿ 63320 ಹೆಕ್ಟೇರ್ ಬಿತ್ತನೆಯಾಗಿದೆ.
ಇದರಲ್ಲಿ ಏಕದಳ ಧಾನ್ಯಗಳು 32735 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಇದರಲ್ಲಿ 31660 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬೆಳೆಕಾಳುಗಳಲ್ಲಿ 32710 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ 31011 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಎಣ್ಣೆ ಕಾಳುಗಳಲ್ಲಿ 1515 ಹೆಕ್ಟೇರ್ ಪ್ರದೇಶ ಬಿತ್ತನೆ ಕ್ಷೇತ್ರವಿದ್ದು, ಈ ಪೈಕಿ 649 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಮುಖ್ಯವಾಗಿ ಬಹುತೇಕ ರೈತರು ಜೋಳ ಬಿತ್ತನೆ ಮಾಡಿದ್ದಾರೆ. ಉಳಿದಂತೆ ಕಡಲೆ, ಶೇಂಗಾ ಕುಸುಬಿ, ಗೋಧಿ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬೆಳೆಗಳಿಗೆ ತೆಂವಾಂಶದ ಕೊರತೆ ಬಹುವಾಗಿ ಕಾಡುತ್ತಿದೆ.
ತಾಲೂಕಿನಲ್ಲಿ ಹಿಂಗಾರು ಬಿತ್ತನೆ ಉತ್ತಮ ರೀತಿಯಲ್ಲೇ ಆಗಿದೆ. ಎಲ್ಲಿಯೂ ಬೆಳೆಗಳಿಗೆ ಹಾನಿಯಾಗಿಲ್ಲ. ಜೋಳ,
ಕಡಲೆ ಬೆಳವಣಿಗೆ ಹಂತದಲ್ಲಿವೆ. ಯಾವುದೇ ಕೀಟ ಬಾಧೆ, ರೋಗ ಬಾಧೆ ಬೆಳೆಗಳಿಗೆ ಇಲ್ಲ. ತಾಲೂಕಿನಲ್ಲಿ ತೇವಾಂಶದ ಕೊರತೆಯಿಂದ ಬೆಳೆ ಹಾನಿಯಾಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಹಿರೇಮಠ