ಬಾಗಲಕೋಟೆ: ಕಂದಾಯ ಇಲಾಖೆಯ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಸರಕಾರ ಮಹತ್ವದ ಯೋಜನೆ ರೈತರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಹೊನ್ನಾಕಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದ ಅರಳಿಕಟ್ಟಿಯಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾಂಕೇತಿಕವಾಗಿ ದಾಖಲೆಗಳನ್ನು ರೈತರಿಗೆ ವಿತರಿಸಿ ಮಾತನಾಡಿದ ಅವರು, ರೈತರ ಅಲೆದಾಟ, ಸಮಯ ಹಾಗೂ ಹಣ ವ್ಯರ್ಥವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಉಪಯುಕ್ತ ಕಂದಾಯ ದಾಖಲೆಗಳನ್ನು ತಲುಪಿಸುವ ಮಹತ್ವದ ಕಾರ್ಯವನ್ನು ಸರಕಾರ ಕೈಗೊಂಡಿದೆ ಎಂದರು.
ಈ ಹಿಂದೆ ರೈತರು ಇನಾಮದಾರಿಕೆಯಿಂದ ಜಮೀನು ಖರೀದಿಸಿಕೊಂಡು ಉಳಿಮೆ ಮಾಡುತ್ತಿರುವಾಗ ಅಂತಹ ಜಮೀನು ಮಾರಾಟ ಮಾಡಲು, ಉಪಬೋಗಿಸಲು ಬರುತ್ತಿರಲಿಲ್ಲ. ಮೂಲ ಮಾಲೀಕನ ಹೆಸರು ಕಡಿಮೆಯಾಗದೇ ರೈತರು ಇಂತಹ ಜಮೀನು ಮಾರಲು ಹಾಗೂ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದರಿಂದ ದಾಖಲೆಯಲ್ಲಿನ ತಿದ್ದುಪಡಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಂತಯ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪಿಸಿ ನೇರವಾಗಿ ಕಂದಾಯ ದಾಖಲೆಗಳನ್ನು ರೈತರ ಮನೆ ತಲುಪಿಸುವ ಉದ್ದೇಶದಿಂದ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾನೂನುಗಳನ್ನು ತಿದ್ದುಪಡಿಗೊಳಿಸಿ ಸರಳೀಕರಣಗೊಳಿಸಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುವುದರ ಜತೆಗೆ ನೇರವಾಗಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವಂತೆ ಯೋಜನೆ ಜಾರಿಗೊಳಿಸಿರುವುದಾಗಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, 1962ರಲ್ಲಿ ಭೂಮಿ ಪರಿವರ್ತನ ಕಾನೂನು ಇದ್ದರೂ ಕೂಡಾ ದಾಖಲೆಗಳು ಅಂದೇ ಸೃಷ್ಟಿಯಾಗಿದ್ದವು. ಆದರೆ ರೈತರಿಗೆ ಒದಗಿಸಬೇಕಾದ ಈ ದಾಖಲೆಗಳನ್ನು ಅಧಿ ಕಾರಿಗಳು, ಗ್ರಾಮ ಲೆಕ್ಕಾ ಧಿಕಾರಿಗಳು ಸರಿಯಾಗಿ ದೊರಕಿಸಿ ಕೊಡದೇ ಇರುವುದರಿಂದ ಈ ಯೋಜನೆ ರೈತರಿಗೆ ಉಪಯುಕ್ತವಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿ, ಸರಕಾರ ನೀಡಿದ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ದಾಖಲೆಗಳಲ್ಲಿ ಏನಾದರೂ ಬದಲಾವಣೆ ಕಂಡುಬಂದಲ್ಲಿ ಇದೇ ಮಾ. 21ರಿಂದ 6 ದಿನಗಳ ಕಾಲ ದಾಖಲೆಗಳ ತಿದ್ದುಪಡಿ ಕಾರ್ಯವನ್ನು ನಾಡಕಚೇರಿಗಳಲ್ಲಿ ಮಾಡಿಕೊಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಸುತಗುಂಡಾರ ಗ್ರಾ.ಪಂ ಅಧ್ಯಕ್ಷ ಮಳೆಯಪ್ಪ ಮೇಟಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕಾರ, ಜಿಪಂ ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.