Advertisement

ರೈತರೇ ಸರ್ಕಾರಿ ಯೋಜನೆ ಬಳಕೆ ಮಾಡಿಕೊಳ್ಳಿ

09:29 PM Mar 11, 2020 | Lakshmi GovindaRaj |

ಕೊಳ್ಳೇಗಾಲ: ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಅರಣ್ಯ ಇಲಾಖೆಯಿಂದ ಜಾರಿ ಮಾಡಿದೆ. ಇದನ್ನು ರೈತರು ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಎಂದು ನಿವೃತ್ತ ಡಿಸಿಎಫ್ ಚಂದ್ರಶೇಖರ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅರಣ್ಯ ಇಲಾಖೆಯಿಂದ ಬುಧವಾರ ನಡೆದ ಎಸ್‌ಎಂಎಎಫ್ ಯೋಜನೆ ತರಬೇತಿ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಅನುದಾನವನ್ನು ಅರಣ್ಯ ಇಲಾಖೆಯಿಂದ ಮರಗಿಡಗಳನ್ನು ಬೆಳೆಸಲು ನೀಡುತ್ತಿದೆ. ರೈತ ಮುಖಂಡರು ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಅನುದಾನಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಶ್ರೀಗಂಧ, ರಕ್ತ ಚಂದನ ಮರ ಬೆಳೆಯಿರಿ: ಕೇಂದ್ರ ಸರ್ಕಾರ ಕಳೆದ 2011ರಲ್ಲಿ ಶ್ರೀಗಂಧ ಮತ್ತು ರಕ್ತ ಚಂದನ ಮರಗಳನ್ನು ಬೆಳೆಸಲು ಅನುಮತಿ ನೀಡಿದೆ. ಇದನ್ನು ಹೆಚ್ಚು ಬಳಸುವ ಮೂಲಕ ರೈತರು ಶ್ರೀಮಂತರಾಗಲು ಅವಕಾಶವಿದೆ. ರೈತರು ಮುಂದೆ ಬಂದು ಇಂತಹ ಬೆಲೆ ಬಾಳುವ ಮರಗಳನ್ನು ಬೆಳೆಯಲು ಮುಂದಾಗಬೇಕು. ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ವಿವಿಧ ಬಗೆಯ ಗಿಡಗಳನ್ನು ನೀಡುತ್ತಿದೆ.

ಅದನ್ನು ಉತ್ತಮ ರೀತಿಯಲ್ಲಿ ಪೋಷಣೆ ಮಾಡಿದರೆ ಅದಕ್ಕೆ ಸೂಕ್ತ ಅನುದಾನವನ್ನು ನೀಡಲಾಗುತ್ತಿದೆ. ಗಿಡಗಳನ್ನು 18ರಿಂದ 20 ವರ್ಷದ ತನಕ ಉತ್ತಮ ರೀತಿಯಲ್ಲಿ ಬೆಳೆಸಿದರೆ ಅದರಿಂದಲೂ ಹಣ ಲಭ್ಯವಾಗಲಿದೆ. ಇಂತಹ ಉತ್ತಮ ಜಾತಿಯ ಮರಗಳನ್ನು ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

ಗಿಡ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಿ: ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸ್ತ್ರೀಶಕ್ತಿ ಸಂಘದವರು ಅರಣ್ಯ ಇಲಾಖೆ ನೀಡುವ ಕಾರ್ಯಾಗಾರದಲ್ಲಿ ಹೆಚ್ಚು ತೊಡಗಿಸಿಕೊಂಡು, ಉತ್ತಮ ಮಾಹಿತಿ ಪಡೆದು ಗಿಡ ಮರಗಳನ್ನು ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.

Advertisement

ಇತ್ತೀಚಿನ ದಿನಗಳಲ್ಲಿ ಗಿಡ ಮರಗಳ ನಾಶ ಮತ್ತು ಅರಣ್ಯ ನಾಶದಿಂದ ಮನುಷ್ಯನ ಉಸಿರಾಟಕ್ಕೂ ಅಪಾರ ತೊಂದರೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಅನಾವುತಗಳು ಸಂಭವಿಸದಂತೆ ಪ್ರತಿಯೊಂದು ಜಾತಿಯ ಮರಗಿಡಗಳನ್ನು ಬೆಳೆಸಲು ಮುಂದಾಗ ಮೂಲಕ ಪರಿಸರ ಉಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮಗಳಿಂದ ಮಕ್ಕಳ ಕಲಿಕೆಗೆ ಹಿನ್ನಡೆ: ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್‌ ಮಾತನಾಡಿ, ಮಕ್ಕಳಿಗೆ ಪಾಠ ಪ್ರವಚನಗಳನ್ನು ನೀಡಬೇಕಾಗಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಈ ರೀತಿ ಸಭೆ, ಸಮಾರಂಭಗಳಿಗೆ ಬಳಕೆ ಮಾಡಿಕೊಳ್ಳುವುದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಲಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಪ್ರಚಾರದ ಕೊರತೆ: ತಾಪಂ ಸದಸ್ಯ ಜಾವೀದ್‌ ಅಹಮ್ಮದ್‌ ಮಾತನಾಡಿ, ಪ್ರಚಾರದ ಕೊರತೆಯಿಂದ ಕಾರ್ಯಕ್ರಮಕ್ಕೆ ರೈತರು ಗೈರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಲಾಖೆ ಕಾರ್ಯಕ್ರಮಗಳ ಕಾರ್ಯಾಗಾರದ ವಿಷಯವನ್ನು ಹೆಚ್ಚು ಪ್ರಚಾರ ಮಾಡಿ, ರೈತರಿಗೆ ಮುಟ್ಟುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಕೆಂಪನಪಾಳ್ಯ ಗ್ರಾಮದ ಚೆನ್ನಬಸವ ಆರಾಧ್ಯ ಅವರನ್ನು ಗೌರವಿಸಲಾಯಿತು. ಎಸಿಎಫ್ ವನಿತಾ, ತಾಪಂ ಸದಸ್ಯರಾದ ಪುಷ್ಪ, ಕೃಷ್ಣಪ್ಪ, ಮರಿಸ್ವಾಮಿ, ಸುರೇಶ್‌, ಸಿದ್ದಯ್ಯನಪುರ ಗ್ರಾಪಂ ಸದಸ್ಯ ಗುಣಶೇಖರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next