ಭರಮಸಾಗರ: ಇಲ್ಲಿನ ಖಾಸಗಿ ರಸಗೊಬ್ಬರ ಮಾರಾಟ ಅಂಗಡಿಯೊಂದರ ಬಳಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ಆಧಾರ್ ಕಾರ್ಡ್ ಹಿಡಿದು ಗೊಬ್ಬರಕ್ಕಾಗಿ ಮುಗಿ ಬಿದ್ದ ದೃಶ್ಯ ಸೋಮವಾರ ಕಂಡು ಬಂತು.
ಕಳೆದ ಕೆಲವು ದಿನಗಳಿಂದ ಒಂದೆರಡು ಖಾಸಗಿ ಅಂಗಡಿಗಳು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸೀಮಿತ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ಆಧಾರ್ ಕಾರ್ಡ್ ಹಿಡಿದು ಎರಡೆರಡು ಪ್ಯಾಕೆಟ್ ಗೊಬ್ಬರ ಖರೀದಿಸುತ್ತಿದ್ದಾರೆ. ಸಣ್ಣ ಮತ್ತು ದೊಡ್ಡ ಹಿಡುವಳಿ ಹೊಂದಿರುವ ರೈತರು ಇದೀಗ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಕೃಷಿ ಇಲಾಖೆ ಯೂರಿಯಾ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬಾರದು ಎಂದು ರೈತರಿಗೆ ಸಲಹೆ ನೀಡುತ್ತಾ ಬರುತ್ತಿದೆ. ಆದರೆ ರೈತರು ಇದ್ಯಾವುದನ್ನೂ ಗಮನಿಸದೆ ಈ ಹಿಂದಿನಂತೆ ಯೂರಿಯಾ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಸಕಾಲಕ್ಕೆ ಮಳೆ ಆಗುತ್ತಿರುವುದರಿಂದ ಈ ವರ್ಷ ಬೆಳೆಗಳು ಸ್ವಲ್ಪವೂ ಕುಂದದೆ ಸಮೃದ್ಧವಾಗಿ ಬೆಳವಣಿಗೆ ಹೊಂದುತ್ತಿವೆ ಎಂಬುದು ರೈತರ ಅಭಿಪ್ರಾಯ.
ಕೆಲ ರೈತರು ತಾಲೂಕು ಗಡಿಗಳನ್ನು ಮೀರಿ ಬೇರಡೆ ಹೆಚ್ಚಿನ ಬೆಲೆಗೆ ಗೊಬ್ಬರ ಖರೀದಿಸಿ ಬಳಕೆ ಮಾಡಿದ್ದಾರೆ. ಇನ್ನೂ ಗೊಬ್ಬರ ಸಿಗದೆ ಇರುವ ರೈತರು ಗೊಬ್ಬರಕ್ಕಾಗಿ ಆಧಾರ್ ಕಾರ್ಡ್ ಹಿಡಿದು ಕ್ಯೂ ನಿಲ್ಲಬೇಕಾಗಿದೆ. ಮಳೆ ಇಲ್ಲದಿದ್ದಾಗ ಗೊಬ್ಬರ ಕೇಳುವವರಿಲ್ಲ. ಇದೀಗ ಬೆಳೆ ಉತ್ತಮವಾಗಿ ಬರುತ್ತಿದೆ. ಗೊಬ್ಬರ ಸಿಗುತ್ತಿಲ್ಲ ಎಂದು ಕೃಷಿಕರು ಹೇಳುತ್ತಾರೆ. ಇದೀಗ ಯೂರಿಯಾಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಅಂಗಲಾಚುತ್ತಿರುವುದನ್ನು ಗಮನಿಸಿದರೆ ಅನ್ನದಾತನನ್ನು ನಮ್ಮ ವ್ಯವಸ್ಥೆ ನಡೆಸಿಕೊಳ್ಳುತ್ತಿರುವ ಪರಿ ಎಂಥದ್ದು ಎಂಬುದು ಅರ್ಥವಾಗುತ್ತದೆ.