Advertisement

ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

02:50 PM Oct 15, 2022 | Team Udayavani |

ಯಳಂದೂರು: ಜಿಲ್ಲಾ ಉಸ್ತುವಾರಿ ಸಚಿವರೇ ನಾವು ಟನ್‌ ಕಬ್ಬಿಗೆ 100 ರೂ. ಲಂಚ ಕೊಡುತ್ತೇವೆ. ನಮ್ಮ ಕಬ್ಬು ಕಟಾವು ಮಾಡಿಸಿ, ವೈಜ್ಞಾನಿಕ ಬೆಲೆ ಕೊಡಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವರು ರೈತರ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫ‌ಲರಾಗಿದ್ದಾರೆ. ಸಕ್ಕರೆ ಕಾರ್ಖಾನೆ ವಿರುದ್ಧ ಇವರು ಮಾತನಾಡುವುದೇ ಇಲ್ಲ. ಇವರಿಂದ ಲಂಚವನ್ನು ಸ್ವೀಕರಿಸುತ್ತಾರೆ ಎಂಬ ಆರೋಪವೂ ಇದೆ. ಹಾಗಾದರೆ ರೈತರು ಲಂಚವನ್ನು ನೀಡುತ್ತಾರೆ ನಮ್ಮ ಕಬ್ಬನ್ನು ಕಟಾವು ಮಾಡಲು ಕ್ರಮವಹಿಸಿ ಎಂದು ಸವಾಲು ಹಾಕಿದರು.

ಕೂಲಿಯಲ್ಲೂ ತಾರತಮ್ಯ: ಕುಂತೂರು ಗ್ರಾಮದ ಬಣ್ಣಾರಿ ಅಮ್ಮನ್‌ ಷುಗರ್ಸ್‌ ಕಾರ್ಖಾನೆಯವರು ಅವಧಿ ಮೀರಿದ್ದರೂ ಕಬ್ಬು ಕಟಾವು ಮಾಡುತ್ತಿಲ್ಲ. ಕಟಾವಿನ ಕೂಲಿಯಲ್ಲೂ ತಾರತಮ್ಯವಿದೆ. ಅಲ್ಲದೆ ಕಾರ್ಖಾನೆಯ ನೌಕರರು ರೈತರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಗುರುವಾರ ತಾಲೂಕಿನ ಮದ್ದೂರು ಗ್ರಾಮದ ಸಕ್ಕರೆ ಕಾರ್ಖಾನೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಇಬ್ಬರು ರೈತರು ಮೊಬೈಲ್‌ ಟವರ್‌ ಹತ್ತಿಕೊಂಡು ಆತ್ಮಹತ್ಯಗೆ ಯತ್ನಿಸಿದ್ದರು. ನಂತರ ಇವರ ಮನವೊಲಿಸಿ ಕೆಳಕ್ಕಿಳಿಸಲಾಯಿತು. ಆದರೆ ಇಲ್ಲಿ ಸಂಬಂಧಪಟ್ಟ ಕಾರ್ಖಾನೆಯ ಅಧಿಕಾರಿಗಳು ಭೇಟಿ ನೀಡಿರಲಿಲ್ಲ.

ರೈತರಿಂದ ಪಾದಯಾತ್ರೆ: ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ರೈತ ಸಂಘದ ಸದಸ್ಯರು ಮದ್ದೂರು ಗ್ರಾಮದಿಂದ ಯಳಂದೂರಿಗೆ ಪಾದಯಾತ್ರೆಯ ಮೂಲಕ ಶುಕ್ರವಾರ ಬಂದರು.

ಮಿನಿವಿಧಾನಸೌಧದ ಮುಂಭಾಗದಲ್ಲಿ ಒಗ್ಗೂಡಿದ ಸದಸ್ಯರು ಕಾರ್ಖಾನೆಯ ವ್ಯವಸ್ಥಾಪಕ ಶರವಣ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು. ಪಿಎಸ್‌ಐ ಕರಿಬಸಪ್ಪ ಗುರುವಾರದ ಪ್ರತಿಭಟನೆ ವೇಳೆ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಪ್ರತಿಭಟನೆ ವೇಳೆಯಲ್ಲಿ ರೈತರಾದ ಸಂತೋಷ, ಉಮೇಶ, ರೇವಣ್ಣ, ಮಿನಿವಿಧಾನಸೌಧದ ಕಟ್ಟಡದ ಮೇಲೇರಿ ಕೆಳಕ್ಕೆ ಹಾರುವ ಬೆದರಿಕೆ ಹಾಕಿದರು.

Advertisement

ರೈತರ ಮನವೊಲಿಸಲು ಅಧಿಕಾರಿಗಳು ಯಶಸ್ವಿಯಾದರು. ಎಆರ್‌ಕೆ ಭಾಗಿ: ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಕೂಡ ರೈತರೊಂದಿಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ದೂರವಾಣಿಯ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಜೊತೆ ಮಾತನಾಡಿ, ವಿಷಯ ತಿಳಿಸಿ ಈ ಬಗ್ಗೆ ಜಿಲ್ಲಾಧಿಕಾರಿ, ಕಾರ್ಖಾನೆಯ ಆಡಳಿತ ಮಂಡಳಿ, ರೈತರೊಂದಿಗೆ ಸಭೆ ನಡೆಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಉಸ್ತುವಾಗಿ ಸಚಿವರು ವಾರದೊಳಗೆ ಸಭೆ ಕರೆಯುವ ಭರವಸೆ ನೀಡಿದರು ಎಂದು ಎಆರ್‌ಕೆ ಮಾಹಿತಿ ನೀಡಿದರು. ಬಣ್ಣಾರಿ ಅಮ್ಮನ್‌ ಷುಗರ್ಸ್‌ನ ವ್ಯವಸ್ಥಾಪಕ ಶರವಣ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ, ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಬ್ಬಂದೊ ವಿರುದ್ಧ ಕ್ರಮ ವಹಿಸಿ, ಆದಷ್ಟು ಬೇಗ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next