Advertisement

ಬೆಳೆ ಪರಿಹಾರದತ್ತ ಅನ್ನದಾತರ ಚಿತ್ತ

12:08 PM Nov 09, 2019 | Suhan S |

ಚಿಕ್ಕೋಡಿ: ಪ್ರವಾಹ ಬಂದು ಮೂರು ತಿಂಗಳು ಕಳೆದಿವೆ. ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಮನೆಗಳಿಗೆ ಪರಿಹಾರ ಹಂಚಿಕೆಯಾಗುತ್ತಿದೆ. ಆದರೆ ವಿವಿಧ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಮಾತ್ರ ಬೆಳೆ ಪರಿಹಾರ ಸಿಕ್ಕಿಲ್ಲ, ಹೀಗಾಗಿ ಸರ್ಕಾರ ನೀಡುವ ಬೆಳೆ ಪರಿಹಾರದತ್ತ ರೈತರು ಎದುರು ನೋಡುತ್ತಿದ್ದಾರೆ.

Advertisement

ಕಳೆದ ಆಗಸ್ಟ್‌ ತಿಂಗಳಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 1.6 ಲಕ್ಷ ಹೆಕ್ಟೇರ್‌ನಷ್ಟು ವಿವಿಧ ಬೆಳೆ ನಾಶವಾಗಿ ಸುಮಾರು 130.48 ಕೋಟಿ ರೂ. ನಷ್ಟವಾಗಿರುವುದು ಕೃಷಿ ಇಲಾಖೆ ನಡೆಸಿರುವ ಸರ್ವೇಯಲ್ಲಿ ವರದಿಯಾಗಿದೆ. ಬೆಳೆ ಹಾನಿ ಕುರಿತು ಸರ್ವೆ ವರದಿ ಸರ್ಕಾರಕ್ಕೆ ಹೋಗಿದೆ. ಆದರೆ ಪ್ರವಾಹದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಮಾತ್ರ ಪರಿಹಾರದ ಹಣ ದೊರಕಿಲ್ಲ.

ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳ ಭೀಕರ ಪ್ರವಾಹದಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ, ಕಾಗವಾಡ, ನಿಪ್ಪಾಣಿ, ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ರೈತರು ಬೆಳೆದ ಕಬ್ಬು, ಮೆಕ್ಕೆಜೋಳ, ಶೇಂಗಾ, ಸೋಯಾ, ಹೆಸರು, ಉದ್ದು ಮುಂತಾದ ಬೆಳೆಗಳು ನೀರಿಗೆ ಆಹುತಿಯಾಗಿವೆ.

ಪ್ರವಾಹ ಇಳಿದ ನಂತರ ಸಹ ಜಮೀನುಗಳಲ್ಲಿ ನೀರು ಇದ್ದುದ್ದರಿಂದ ಜಮೀನುಗಳಲ್ಲಿ ಬೆಳೆಗಳು ಕೊಳೆತು ಹೋಗಿವೆ. ದೊಡ್ಡ ಪ್ರಮಾಣದಲ್ಲಿ ಇರುವ ಕಬ್ಬಿನ ಮೇಲೆ 15 ರಿಂದ 20 ಅಡಿ ನೀರು ಇದ್ದರಿಂದ ಕಬ್ಬಿನ ಸುಳಿಯಲ್ಲಿ ನೀರು ಹೋಗಿ ಕಬ್ಬು ಬೆಳೆ ಸಂಪೂರ್ಣ ಹಾನಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶನುಸಾರ ಕೃಷಿ ಇಲಾಖೆ ಸರ್ವೇ ನಡೆಸಿ ಡಾಟಾ ಎಂಟ್ರಿ ಕಾರ್ಯ ಭರದಿಂದ ನಡೆಸಿದೆ.

ಪ್ರವಾಹದಲ್ಲಿ ನೀರಾವರಿ ಕ್ಷೇತ್ರದಲ್ಲಿ ಹೆಚ್ಚಾಗಿ ಕಬ್ಬಿನ ಬೆಳೆಗೆ ಹಾನಿಯಾಗಿದೆ. ಉಳಿದಂತೆ ಗೋವಿನಜೋಳ, ಬಿಳಿಜೋಳ, ಶೇಂಗಾ, ಸೋಯಾ, ಹೆಸರು, ಒಣ ಬೇಸಾಯದಲ್ಲಿ ಸಜ್ಜಿ, ಗೋವಿನಜೋಳ, ಶೇಂಗಾ, ಸೋಯಾ, ಹೆಸರು, ತೊಗರಿ ಮುಂತಾದ ಬೆಳೆಗಳು ನೀರಿಗೆ ಹಾನಿಯಾಗಿವೆ. ತೋಟಗಾರಿಕೆ ಬೆಳೆಗಳಲ್ಲಿ ದ್ರಾಕ್ಷಿ, ದಾಳಿಂಬೆ, ಬಾಳೆ, ಅರಿಶಿನ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ.

Advertisement

ರೈತರ ಖಾತೆಗೆ ಬೆಳೆ ಪರಿಹಾರ: ನೆರೆ ಹಾವಳಿಯಲ್ಲಿ ಹಾನಿಯಾದ ರೈತರ ಬೆಳೆಗಳ ಸರ್ವೆ ಕಾರ್ಯ ಮುಕ್ತಾಯವಾಗಿ ಸರ್ಕಾರಕ್ಕೆ ಕೃಷಿ ಇಲಾಖೆ ವರದಿ ನೀಡಿದ್ದು, ಸರ್ಕಾರ ನಿಗದಿ ಮಾಡಿದ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಿದೆ. ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ರೈತರ ಆಧಾರ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಗಳನ್ನು ಡಾಟಾದಲ್ಲಿ ನಮೂದು ಮಾಡುತ್ತಿದೆ. ಒಣ ಬೇಸಾಯಕ್ಕೆ ಸರ್ಕಾರ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ 6800 ರೂ. ನೀರಾವರಿಗೆ 13,500 ರೂ, ತೋಟಗಾರಿಕೆಗೆ 18 ಸಾವಿರ ರೂ. ಪರಿಹಾರ ನೀಡಲಿದೆ. ಆದರೆ ಎನ್‌ ಡಿಆರ್‌ಎಫ್‌ ಜೊತೆಗೆ ರಾಜ್ಯ ಸರಕಾರದಿಂದ ಕೂಡಾ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ. ನೀಡಲಾಗುತ್ತದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಆದರೆ ಎನ್‌ಡಿಆರ್‌ಎಫ್‌ ಪರಿಹಾರ ಬರುತ್ತದೆಯೋ ಅಥವಾ ರಾಜ್ಯ ಸರಕಾರದ 10 ಸಾವಿರ ರೂ ಸೇರಿಸಿ ಬರುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

ಚಿಕ್ಕೋಡಿ ಕೃಷಿ ಉಪವಿಭಾಗ ವ್ಯಾಪ್ತಿಯ ವಿವಿಧ ತಾಲೂಕುಗಳಲ್ಲಿ ಹಾನಿಯಾದ ವಿವರ, ಚಿಕ್ಕೋಡಿ ಉಪವಿಭಾಗದ ಎಂಟು ತಾಲೂಕಿನಲ್ಲಿ ಕೃಷಿ ಇಲಾಖೆ ಬೆಳೆ ಹಾನಿ ಸರ್ವೆ ಕಾರ್ಯ ಮುಕ್ತಾಯ ಮಾಡಿ ಕಂದಾಯ ಇಲಾಖೆಗೆ ಒಪ್ಪಿಸಲಾಗಿದೆ. ಕಂದಾಯ ಇಲಾಖೆಯು ಶೇ 50ರಷ್ಟು ಡಾಟಾ ಎಂಟ್ರಿ ಮಾಡಿದೆ. ಶೀಘ್ರ ರೈತರ ಖಾತೆಗೆ ಬೆಳೆ ಪರಿಹಾರ ಜಮೆ ಮಾಡಲಾಗುತ್ತಿದೆ. –ಎಲ್‌.ಐ.ರೂಡಗಿ, ಉಪ ಕೃಷಿ ನಿರ್ದೇಶಕರು ಚಿಕ್ಕೋಡಿ.

 

 -ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next