Advertisement

Delhi: 6 ತಿಂಗಳ ಹೋರಾಟಕ್ಕೆ ಸಜ್ಜಾಗಿ ರಾಜಧಾನಿ ದಿಲ್ಲಿಯತ್ತ ರೈತರು

12:04 AM Feb 14, 2024 | Team Udayavani |

ನವದೆಹಲಿ: “ಸೂಜಿಯಿಂದ ಹಿಡಿದು ಸುತ್ತಿಗೆ ವರೆಗೆ ನಮಗೆ ಬೇಕಿರುವ ಎಲ್ಲವನ್ನೂ ನಾವು ನಮ್ಮೊಂದಿಗೆ ಟ್ರಾಕ್ಟರ್‌ಗಳಲ್ಲಿ ತಂದಿದ್ದೇವೆ. ನಮ್ಮ ಬೇಡಿಕೆ ಈಡೇರಲು 6 ತಿಂಗಳಾದರೂ ಸರಿ ಅದಕ್ಕಾಗಿ ಸಜ್ಜಾಗಲೆಂದೇ 6 ತಿಂಗಳಿಗೆ ಬೇಕಾಗುವಷ್ಟು ಪಡಿತರವನ್ನೂ ತೆಗದುಕೊಂಡೇ ನಾವು ನಮ್ಮ ಹಳ್ಳಿಗಳನ್ನು ತೊರೆದಿದ್ದೇವೆ’ ಹೀಗೆಂದು ರಾಷ್ಟ್ರ ರಾಜಧಾನಿಯತ್ತ ಹೊರಟಿರುವ ರೈತರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಹುದೊಡ್ಡ ರೈತ ಪ್ರತಿಭಟನೆಯ ತೀವ್ರತೆ ಬಗ್ಗೆ ಮುನ್ಸೂಚನೆ ಸಿಕ್ಕಂತಾಗಿದೆ.

Advertisement

ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಬೇಕು ಹಾಗೂ ಇನ್ನೂ ಕೆಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ 25 ಸಾವಿರಕ್ಕೂ ಅಧಿಕ ರೈತರು ರಾಜಧಾನಿ ಪ್ರವೇಶಿಸಲು ಮುಂದಾಗಿದ್ದಾರೆ ಆದರೆ, ಅವರನ್ನೆಲ್ಲಾ ಮಂಗಳವಾರ ಶಂಭು ಗಡಿಯಲ್ಲೇ ತಡೆ ಹಿಡಿಯಲಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಪಂಜಾಬ್‌ಮ ಗುರುದಾಸ್‌­ಪುರದಿಂದ ಬಂದಿರುವ ರೈತ ಹರ್ಬಜನ್‌ ಸಿಂಗ್‌ ಮಾತನಾಡಿ ” ಸೂಜಿಯಿಂದ ಹಿಡಿದು ಸುತ್ತಿಗೆ ವರೆಗೆ, ಕಲ್ಲುಗಳನು ಒಡೆಯುವ ಉಪಕರಣಗಳು ಮತ್ತು 6 ತಿಂಗಳಿಗೆ ಬೇಕಾಗುವಷ್ಟು ಅಕ್ಕಿ, ಬೇಳೆ, ಹಿಟ್ಟು ಸೇರಿದ ಪಡಿತರ, ಡೀಸೆಲ್‌ ಅನ್ನೂ ನಮ್ಮೊಂದಿಗೆ ತಂದಿದ್ದೇವೆ. ನಮಗೆ ಮಾತ್ರವಲ್ಲದೇ, ಹರ್ಯಾಣದ ನಮ್ಮ ಸಹೋದರರಿಗೂ ಆಗುವಷ್ಟು ಸರಕು ನಮ್ಮೊಂದಿಗೆ ಇದೆ’ ಎಂದಿದ್ದಾರೆ.

ರೈತರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವಂತಿಲ್ಲ – ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ
ಹರ್ಯಾಣದಿಂದ ರಾಜಧಾನಿಗೆ ಪ್ರತಿಭಟನೆ­ಗಾಗಿ ತೆರಳುತ್ತಿರುವ ರೈತರನ್ನು ತಡೆಯುವ ನಿಟ್ಟಿನಲ್ಲಿ ಹರ್ಯಾಣ ಸರ್ಕಾರ ರಸ್ತೆಗಳನ್ನು ಮುಚ್ಚಿಸಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿ­‌ುವ ಅರ್ಜಿಯನ್ನು ಪಂಜಾಬ್‌- ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್‌.ಸಂಧವಾಲಿಯಾ ಅವರ ನ್ಯಾಯ­ಪೀಠ ವಿಚಾರಣೆ ನಡೆಸಿದೆ. ಹರ್ಯಾಣ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕಿಲ್ಲವೇ ? ರಸ್ತೆಗಳನ್ನು ಮುಚ್ಚುವ ಮೂಲಕ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕಸಿಯು­ವಂತಿಲ್ಲ. ಸರ್ಕಾರ ತನ್ನ ಪ್ರಜೆಗಳ ಹಿತಕಾಯುವ ನಿಯಮ ಅನುಸರಿಸಿ ಪ್ರತಿ­ಭಟನೆಗೆ ಸಹಕರಿಸ ಬೇಕು. ಎಂದು ಹೇಳಿದೆ. ಈ ಸಂಬಂಧಿಸಿದಂತೆ ಪ್ರತಿಭಟನೆಗೆ ನಿರ್ದಿಷ್ಟ ಪ್ರದೇಶ ಗುರುತು ಪಡಿಸುವಂತೆ ಹರ್ಯಾಣ, ದೆಹಲಿ, ಪಂಜಾಬ್‌ , ಕೇಂದ್ರಕ್ಕೆ ನೋಟಿಸ್‌ ನೀಡಿದೆ.

ರೈತರ ಟ್ರ್ಯಾಕ್ಟರ್‌ಗಳು ಹೊಸದಾಗಿ ಪರಿವರ್ತನೆ

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಲವಾರು ರೈತರು ಗುರುದ್ವಾರ, ಆಶ್ರಮಗಳು ಮತ್ತು ಧರ್ಮಶಾಲಗಳಲ್ಲಿ ಆಶ್ರಯ ಪಡೆಯಲು ಯೋಜಿಸಿದ್ದಾರೆ. ಮತ್ತೆ ಹಲವು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನೇ ವಸತಿಗೆ ಯೋಗ್ಯವಾಗುವಂತೆ ಪರಿವರ್ತಿಸಿಕೊಂಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪಂಜಾಬ್‌ನಿಂದ 1,500 ಟ್ರ್ಯಾಕ್ಟರ್‌, 500 ವಾಹನಗಳು ದಹಲಿ ಚಲೋ ನಲ್ಲಿ ಭಾಗಿಯಾಗಿ ದ್ದು, ಎಲ್ಲ ಟ್ರಾಕ್ಟರ್‌ಗಳಲ್ಲೂ ಅಗತ್ಯವಿರುವ ಸರಕು -ಸರಂಜಾಮುಗಳನ್ನು ತುಂಬಲಾಗಿದೆ. ಕೆಲವು ಗ್ರಾಮಗಳ ಮೂಲಕ ರೈತರು ಒಳಬರಲು ಯೋಜಿಸಿವೆ ಅಂಥ ಗ್ರಾಮಗಳ ಮೇಲೆ ಕಣ್ಗಾವಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕೆಂಪು ಕೋಟೆ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಂಪುಕೋಟೆಗೆ ಪ್ರವಾಸಿಗರು ಭೇಟಿ ನೀಡುವುದನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಕೆಂಪು ಕೋಟೆಯನ್ನು ಸೋಮವಾರ ರಾತ್ರಿಯೇ ಮುಚ್ಚಲಾಗಿದೆ. ಅಲ್ಲದೇ, ಕೆಂಪು ಕೋಟೆಯ ಸುತ್ತಾ ಭಾರೀ ಭದ್ರತೆಯನ್ನೂ ನಿಯೋಜಿಸಲಾಗಿದೆ ಎಂದೂ ಹೇಳಿದ್ದಾರೆ. 2021ರ ಜ.26ರಂದು ಪ್ರತಿಭಟನಾ ನಿರತ ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

ಎಂಎಸ್‌ಪಿ ಜಾರಿಗೆ ಕಾಂಗ್ರೆಸ್‌ ಬದ್ಧ: ರಾಹುಲ್‌
“ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯ್ದೆ ಜಾರಿಗೆ ತರುತ್ತೇವೆ’ ಹೀಗೆಂದು ಕಾಂಗ್ರೆಸ್‌ ಸಂಸದ ರಾಹುಲ್‌ ವಾಗ್ಧಾನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ, ಸ್ವಾಮಿನಾಥನ್‌ ಆಯೋಗ ಶಿಫಾರಸಿನ ಅನ್ವಯ ಈ ಕ್ರಮ ಕೈಗೊಳ್ಳಲಿದ್ದೇವೆ. ಇದರಿಂದಾಗಿ 15 ಕೋಟಿ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆೆ ಎಂದಿದ್ದಾರೆ. ಇದೇ ವೇಳೆ ರೈತರ ವಿರುದ್ಧ ಅಶ್ರುವಾಯು ಬಳಕೆ ಬಗ್ಗೆಯೂ ಆಕ್ಷೇಪಿಸಿದ್ದಾರೆ,

ರೈತರು ಪ್ರಸ್ತಾಪಿಸಿರುವ ಸಮಸ್ಯೆಗಳು ದೇಶದ ಎಲ್ಲರ ಸಮಸ್ಯೆ. ಕೇಂದ್ರ ಸರ್ಕಾರ ಅವರಿಗೆ ತೊಂದರೆ ಮಾಡಿದರೆ ಅವರಿಗೆ ಬೆಂಬಲ ನೀಡಲಿದ್ದೇವೆ. ನಾವು ದೂರದಲ್ಲೇನು ಇಲ್ಲ, ಆ ರೈತರ ಬೆಂಬಲಕ್ಕೆ ಬರುತ್ತೇವೆ.
ರಾಕೇಶ್‌ ಟಿಕಾಯತ್‌, ರೈತ ನಾಯಕ

ಯುಪಿಎ ಸರ್ಕಾರ ಅಧಿಕಾರದಲ್ಲಿ­ದ್ದಾಗ ರೈತರ 72 ಸಾವಿರ ರೂ.ಗಳ ವರೆಗಿನ ಸಾಲವನ್ನು ಮನ್ನ ಮಾಡಿದ್ದೆವು. ಆದರೆ ಮೋದಿ ಅವರಿಗೆ ಬಡವರ ಮೇಲೆ ಕಾಳಜಿ ಇಲ್ಲ, ಅವರೇನಿದ್ದರೂ ಶ್ರೀಮಂತರ ಜತೆಗೆ ಮಾತ್ರ ಇರುತ್ತಾರೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಕೇಂದ್ರ ರೈತರ ಬಹುತೇಕ ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದೆ. ಬೆಂಬಲ ಬೆಲೆ ಕಾನೂನನ್ನು ತರಾತುರಿಯಲ್ಲಿ ಜಾರಿ ಮಾಡಲಾಗು­ವುದಿಲ್ಲ. ಈ ನಿಟ್ಟಿನಲ್ಲಿ ಸಮಗ್ರ ಚರ್ಚೆ ಆಗಬೇಕಾಗಿದೆ.
ಅರ್ಜುನ್‌ ಮುಂಡಾ, ಕೇಂದ್ರ ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next