Advertisement

ಕಿಮ್ಮತ್ತಿಲ್ಲದ ಟೊಮ್ಯಾಟೊ ಬೀದಿಗೆಸೆದ ರೈತರು!

06:23 PM Aug 28, 2021 | Team Udayavani |

ರಾಯಚೂರು: ಹತ್ತಿ, ತೊಗರಿ ಬಿತ್ತನೆ ಮಾಡಿದ ಬಯಲುಸೀಮೆ ರೈತರು ಮಳೆಗಾಗಿ ಕಾದು ಕುಳಿತಿದ್ದರೆ, ಲಭ್ಯವಿರುವ ಜಲಸಂಪನ್ಮೂಲ ಬಳಸಿ ಟೊಮ್ಯಾಟೊ ಬೆಳೆದ ರೈತರು ಮಾತ್ರ ಬೆಲೆ ಇಲ್ಲದೇ ಉತ್ಪನ್ನ ರಸ್ತೆಗೆ ಎಸೆಯುತ್ತಿದ್ದಾರೆ. ಪ್ರತಿ ವರ್ಷ ಟೊಮ್ಯಾಟೊ ಬೆಳೆಗಾರರಿಗೆ ಇದೊಂದು ತಪ್ಪದ ಬಾಧೆಯಂತಾಗಿದೆ.

Advertisement

ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸುವಾಗ ಸಿಗುವ ಬೆಲೆಯ ಅರ್ಧದಷ್ಟು ಕೂಡ ರೈತರಿಗೆ ಸಿಗದಂತಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಸೂಕ್ತ ಬೆಲೆ ಸಿಗದ ಕಾರಣ ಬೆಳೆಗಾರರು ತಮ್ಮ ಉತ್ಪನ್ನ ರಸ್ತೆಗೆಸೆದು ಆಕ್ರೋಶ ಹೊರ ಹಾಕುತ್ತಿದ್ದಾರೆ. ತಾಲೂಕಿನ ಮರ್ಚೆಟಾಳ ಸಮೀಪದ ಜಮೀನುಗಳ ರಸ್ತೆ ಪಕ್ಕದಲ್ಲೇ ಟೊಮ್ಯಾಟೊ ಎಸೆಯಲಾಗಿದೆ.

ಟೊಮ್ಯಾಟೊ ದರ ಪ್ರತಿ ಕ್ಯಾನ್‌ಗೆ ಒಮ್ಮೊಮ್ಮೆ 100, 150 ರೂ. ಇದ್ದರೆ, ಮಾರುಕಟ್ಟೆಗೆ ಇಳುವರಿ ಹೆಚ್ಚು ಬಂದಾಗ ಮಾತ್ರ ಪ್ರತಿ ಕ್ಯಾನ್‌ಗೆ 10, 20 ರೂ. ಇರುತ್ತದೆ. ಇದರಿಂದ ಬೆಳೆದ ಖರ್ಚು ತೆಗೆಯುವುದಿರಲಿ ಮಾರುಕಟ್ಟೆಗೆ ಉತ್ಪನ್ನ ತಂದ ಖರ್ಚು ಕೂಡ ಗಿಟ್ಟದಷ್ಟು ನಷ್ಟವಾಗುತ್ತಿದೆ ಎಂಬುದು ರೈತರ ಅಳಲು.

ಲಕ್ಷಾಂತರ ರೂ. ಖರ್ಚು: ಟೊಮ್ಯಾಟೊ ತೋಟಗಾರಿಕೆ ಬೆಳೆಯಾಗಿದ್ದು, ಕಡ್ಡಾಯವಾಗಿ ನೀರು ಹಾಯಿಸಲೇಬೇಕು. ಅಲ್ಲದೇ, ಖರ್ಚಿನ ಬೆಳೆಯೂ ಹೌದು. ಒಂದು ಕೆಜಿ ಗುಣಮಟ್ಟದ ಟೊಮ್ಯಾಟೊ ಬೀಜಕ್ಕೆ 60 ಸಾವಿರ ರೂ. ದರವಿದೆ. ಇಷ್ಟು ಖರ್ಚು ಮಾಡಿ ಬಿತ್ತನೆ ಮಾಡಿದ ಮೇಲೆ ಅದಕ್ಕೆ ಗೊಬ್ಬರ, ಕ್ರಿಮಿನಾಶಕ ಎಂದು ಸಾವಿರಾರು ಖರ್ಚು ಮಾಡಬೇಕಿದೆ. ಎಕರೆಗೆ ಏನಿಲ್ಲವೆಂದರೂ 12ರಿಂದ 14 ಟನ್‌ ಬೆಳೆ ಬೆಳೆಯಬಹುದು. ಆದರೆ, ಉತ್ತಮ ಬೆಲೆ ಸಿಕ್ಕರೆ ಮಾತ್ರ ರೈತರು ಲಾಭದ ಮುಖ ನೋಡುತ್ತಾರೆ. ಇಲ್ಲವಾದರೆ ನಷ್ಟವೇ ಗತಿ. ಈಗಲೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

ಸರ್ಕಾರ ಸ್ಥಿರ ಬೆಲೆ ನಿಗದಿಪಡಿಸಲಿ
ತೋಟಗಾರಿಕೆ ಬೆಳೆಗಳು ಕೈ ಹಿಡಿದರೆ ರೈತರಿಗೆ ಉತ್ತಮ ಲಾಭ ಸಿಗುತ್ತದೆ. ಇಲ್ಲವಾದರೆ ಸಂಪೂರ್ಣ ಸಾಲ ಮೈ ಮೇಲೆ ಎಳೆದುಕೊಳ್ಳುವಂತಾಗುತ್ತದೆ. ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಸಾಕಷ್ಟು ಬೆಳೆ ಖರೀದಿಸುವ ಸರ್ಕಾರ, ತೋಟಗಾರಿಕೆ ಬೆಳೆಗಳಿಗೂ ಸ್ಥಿರ ಬೆಲೆ ನಿಗದಿ ಮಾಡಬೇಕು. ಕನಿಷ್ಟ ದರಕ್ಕಿಂತ ಖರೀದಿಸದಂತೆ ಸೂಕ್ತ ನಿರ್ದೇಶನ ನೀಡಲಿ. ಇದರಿಂದ ರೈತರು ನಷ್ಟದಿಂದ ತಪ್ಪಿಸಿಕೊಳ್ಳುವಂತಾಗಲಿದೆ ಎನ್ನುತ್ತಾರೆ ರೈತ ಮುಖಂಡರು.

Advertisement

ಟೊಮ್ಯಾಟೊ ಬೆಳೆಗೆ ಸ್ಥಿರ ಬೆಲೆಯೇ ಇಲ್ಲ. ಈಗಲೂ ಅದೇ ಸಮಸ್ಯೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಬೆಲೆಕೇಳಿದಾಗಕಣ್ಣೀರು ಬಂದಂತಾಯಿತು. ಎಕರೆಗೆ ಲಕ್ಷಾಂತರಖರ್ಚು ಮಾಡಿದ್ದೇವೆ. ಈಗ ಕೂಲಿ ಹಣಕೂಡ ಬರದಷ್ಟು ದರಕ್ಕೆ ಮಾರುವಂತಾಗಿದೆ. ಇದರಿಂದಕೆಲವೆಡೆ ರೈತರು ಬೆಳೆಗಳನ್ನು ಮಾರುಕಟ್ಟೆಗೂ ತರಲಾರದೇ ರಸ್ತೆ ಪಕ್ಕದಲ್ಲೇ ಎಸೆದುಹೋಗುತ್ತಿದ್ದಾರೆ.
ಲಕ್ಷ್ಮಣ, ಟೊಮ್ಯಾಟೊ ಬೆಳೆಗಾರ

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next