ಅರಸೀಕೆರೆ: ಕೇಂದ್ರದ ಅವೈಜ್ಞಾನಿಕ ಕೃಷಿ ನೀತಿಯಿಂದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ಆದರೆ, ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರಕದೆ ಬಂಡವಾಳ ಶಾಹಿಗಳು, ಮಧ್ಯವರ್ತಿಗಳು ಶ್ರೀಮಂತರಾಗುತ್ತಿದ್ದಾರೆ. ಆದರೂ, ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಫೆಡ್ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮಧ್ಯ ಕರ್ನಾಟಕದ 40ಕ್ಕೂ ಹೆಚ್ಚು ತಾಲೂಕುಗಳ ಪ್ರಮುಖ ವಾಣಿಜ್ಯ ಬೆಳೆ ತೆಂಗು, ಕೊಬ್ಬರಿಗೆ ಕೇಂದ್ರದ ಅವೈಜ್ಞಾನಿಕ ಕೃಷಿ ನೀತಿಯಿಂದ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗದೆ ತೆಂಗು ಬೆಳೆಗಾರರು ಅನೇಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ತಾವು ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಗಳಾದ ಸಂದರ್ಭದಲ್ಲಿ ಕ್ವಿಂಟಲ್ ಕೊಬ್ಬರಿಗೆ 1000 ಪ್ರೋತ್ಸಾಹಧನ ರೂ. ನೀಡಿದ್ದರು. ಅದರಂತೆ ನಿಮ್ಮ ಸರ್ಕಾರ ಕೂಡ ನೀಡಬೇಕೆಂದು ಮನವಿ ಮಾಡಿದ್ದೇನೆ. ಆದರೆ, ಕೇಂದ್ರ ಸರ್ಕಾರದ ಸಹಾಯ ನಿಧಿ ಮೂಲಕ 11.750 ರೂ.ಗೆ ಕ್ವಿಂಟಲ್ ಕೊಬ್ಬರಿ ಖರೀದಿಗೆ ಸರ್ಕಾರ ಮುಂದಾಗಿರುವುದು ತೆಂಗು ಬೆಳೆಗಾರರಿಗೆ ಹೆಚ್ಚಿನ ಲಾಭದಾಯಕವಲ್ಲ. ಆದ ಕಾರಣ, ಕನಿಷ್ಠ 15000 ರೂ. ಬೆಂಬಲ ಬೆಲೆ ನೀಡಿ, ನಾಫೆಡ್ ಕೇಂದ್ರದ ಮೂಲಕ ಕೊಬ್ಬರಿ ಖರೀದಿಸಿದರೇ ಮಾತ್ರ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಸೂಚನೆ: ನಾಫೆಡ್ ಖರೀದಿ ಕೇಂದ್ರಕ್ಕೆ ಕೊಬ್ಬರಿ ತರುವ ರೈತರಿಗೆ ಯಾರು ತೊಂದರೆ ನೀಡಬಾರದು, ಚೂರು ಮತ್ತು ಕೌಟ್ ಕೊಬ್ಬರಿ ಬಿಟ್ಟು ಉಂಡೆ ಕೊಬ್ಬರಿಯನ್ನು ಕಡ್ಡಾಯವಾಗಿ ಖರೀದಿ ಮಾಡಬೇಕು. ತೂಕದಲ್ಲಿ ವಂಚನೆ, ಹಮಾಲಿ ಕೂಲಿ ಹಾಗೂ ಇನ್ನಿತರ ವೆಚ್ಚ ಎಂದು ರೈತರಿಗೆ ಸುಳ್ಳು ಹೇಳಿ ಅವರಿಂದ ಹೆಚ್ಚಿನ ಹಣ ಕೆಲವರು ಕೇಳುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಅಧಿಕಾರಿಗಳು ಸೂಕ್ತ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸೂಚನೆ ನೀಡಿದ ಅವರು, ದೂರುಗಳು ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿದ್ದರಂಗಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಕೊಬ್ಬರಿಗೆ 11,750 ರೂ. ಬೆಂಬಲ ಬೆಲೆಯಲ್ಲಿ ಪ್ರತಿ ಎಕರೆಗೆ 6 ಕ್ವಿಂಟಲ್‌ನಂತೆ ಗರಿಷ್ಠ ಪ್ರಮಾಣದಲ್ಲಿ ಪ್ರತಿ ರೈತರಿಂದ 20 ಕ್ವಿಂಟಲ್ ಉಂಡೆ ಕೊಬ್ಬರಿ ಖರೀದಿಸಲು ಆದೇಶಿಸಿದ್ದು, ಮಾ.11 ರವರೆಗೆ 3,461 ರೈತರು ಒಟ್ಟು 54.150 ಕ್ವಿಂಟಲ್ ಕೊಬ್ಬರಿ ಖರೀದಿಗೆ ತಮ್ಮ ಹೆಸರನ್ನು ಆನ್ ಲೈನ್ ಮೂಲಕ ನೋಂದಾಯಿಸಿದ್ದಾರೆ. ಇವರಿಂದ ಯಾವುದೇ ರೀತಿ ತೊಂದರೆ ಆಗದಂತೆ ಕೊಬ್ಬರಿ ಖರೀದಿ ಮಾಡಲಾಗುವುದು ಎಂದು ಹೇಳಿದರು.
ರೈತ ಸಂಘದ ಮುಖಂಡ ಶಿವಲಿಂಗಪ್ಪ, ಯಾಳವಾರೆ ಕೇಶವಮೂರ್ತಿ, ಪುರಸಭೆ ಮಾಜಿ ಸದಸ್ಯ ಲೋಕೇಶ್, ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಸೋಮಶೇಖರ್, ನಾಫೆಡ್ ಕೇಂದ್ರದ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.