ಗಜೇಂದ್ರಗಡ: ತಾಲೂಕಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿ (ಪಿಎಂ ಕಿಸಾನ್) ಯೋಜನೆಗೆ ಅರ್ಜಿ ಸಲ್ಲಿಸಲು ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಗುರುವಾರ ರೈತರು ಮುಗಿ ಬಿದ್ದಿದ್ದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿ ಭೂ ಒಡೆತನ ಹೊಂದಿರುವ ಎಲ್ಲ ವರ್ಗದ ಅರ್ಹ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ 2 ಸಾವಿರ ರೂ.ಗಳಂತೆ ಒಟ್ಟು ವಾರ್ಷಿಕ 6 ಸಾವಿರ ಹಣ ನೀಡಲಾಗುವುದು.
ಯೋಜನೆಯ ಸದುಪಯೋಗ ಪಡೆಯಲು ಗೌಡಗೇರಿ, ಉಣಚಗೇರಿ, ದಿಂಡೂರ, ರಾಜೂರ, ಪುರ್ತಗೇರಿ, ಚಿಲಝರಿ, ಭೈರಾಪುರ, ಕಾಲಕಾಲೇಶ್ವರ ಸೇರಿ ಹಲವಾರು ಗ್ರಾಮಗಳ ರೈತರು ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಹಠಾತ್ ಬಂದ ಪರಿಣಾಮ ಕಚೇರಿ ಜನ ಜಂಗುಳಿಯಿಂದ ತುಂಬಿತು.
ಇದೇ ವೇಳೆ ಸ್ಥಳಕ್ಕೆ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ಗಜೇಂದ್ರಗಡ ತಾಲೂಕಿನಲ್ಲಿ ಒಟ್ಟು 19,616 ಖಾತೆದಾರರಿದ್ದು, ಈಗಾಗಲೇ 6 ಸಾವಿರ ರೈತರಿಂದ ಅರ್ಜಿಗಳು ಬಂದಿವೆ. ಇದರಲ್ಲಿ 2,577 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾಗಿದೆ. ಜೂ. 25ಕ್ಕೆ ರೈತರ ನೊಂದಣಿ ಕಾರ್ಯ ಪೋರ್ಣಗೊಳಿಸಬೇಕೆಂದು ಮೇಲಧಿಕಾರಿಗಳಿಂದೆ ನಿರ್ದೆಶನ ಬಂದಿದೆ ಎಂದು ತಿಳಿಸಿದರು.
ಗ್ರಾಪಂ, ಪಪಂ ವ್ಯಾಪ್ತಿಯ ಸಿಬ್ಬಂದಿಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಡಂಗೂರ, ದೇವಸ್ಥಾನದಲ್ಲಿ ಧ್ವನಿ ವರ್ಧಕದ ಮೂಲಕವು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.
ನೋಂದಣಿ ಮಾಡಲು 9 ಜನ ಡಾಟಾ ಎಂಟ್ರಿ ಆಪರೇಟಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಅರ್ಜಿ ಸಲ್ಲಿಸಬೇಕಾದ ರೈತರು ತಕ್ಷಣದಿಂದಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಬಳಿ ನೀಡಲು ಮುಂದಾಗುವ ಮೂಲಕ ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು. ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗ್ರಾಮ ಲೆಕ್ಕಾಧಿಕಾರಿ ಶಬ್ಬೀರ ನಿಶಾನದಾರ ಇದ್ದರು.