Advertisement

ಸಿರುಗುಪ್ಪದಲ್ಲಿ ಭತ್ತ ಉಳಿಸಿಕೊಳ್ಳಲು ಅನ್ನದಾತರ ಹರಸಾಹಸ!

11:04 AM Mar 23, 2018 | Team Udayavani |

ಸಿರುಗುಪ್ಪ: ಅಸರ್ಮಕ ವಿದ್ಯುತ್‌ ಪೂರೈಕೆಯಿಂದ ಬೇಸತ್ತ ರೈತರು ನಾಟಿ ಮಾಡಿದ ಭತ್ತ ಉಳಿಸಿಕೊಳ್ಳಲು ಡೀಸೆಲ್‌  ಮೋಟಾರ್‌ ಗಳಿಂದ ನೀರೆತ್ತಲು ಮೊರೆ ಹೋಗಿದ್ದು, ಈಗ ಡೀಸೆಲ್‌ ಮೋಟಾರ್‌ಗಳಿಗೆ ಭಾರಿ ಬೇಡಿಕೆ ಬಂದಿದೆ.

Advertisement

ತಾಲೂಕಿನ ಎಚ್‌.ಹೊಸಳ್ಳಿ, ಹಾಗಲೂರು, ದರೂರು, ಕರೂರು, ಗೋಸಬಾಳು, ಕೂರಿಗನೂರು, ಬೂದುಗುಪ್ಪ ಮತ್ತು ಮೈಲಾಪುರ ಕ್ಯಾಂಪ್‌ ಭಾಗದ ದೊಡ್ಡ ಹಳ್ಳದ ದಂಡೆಯಲ್ಲಿರುವ ಏತ ನೀರಾವರಿ ಯೋಜನೆಯಿಂದ ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ನೀರುಣಿಸಲು ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲದೆ ರೈತರು ಪರ್ಯಾಯವಾಗಿ ಹಳ್ಳದಲ್ಲಿನ ನೀರೆತ್ತಲು ಡೀಸೆಲ್‌ ಮೋಟಾರ್‌ಗಳ ಮೂಲಕ ನೀರೆತ್ತುತ್ತಿದ್ದಾರೆ. ಈ ಭಾಗದ ರೈತರು ಬೆಳೆದ ಭತ್ತದ ಗದ್ದೆಗಳಿಗೆ ಸಮರ್ಪಕ ನೀರುಣಿಸಲು ಕಳೆದ 15 ದಿನಗಳಿಂದ ವಿದ್ಯುತ್‌ ಸಮಸ್ಯೆಯಾಗಿದ್ದು, ಭತ್ತದ ಗದ್ದೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ
ನಾಡಿ ಮಾಡಿದ ಭತ್ತವು ಒಣಗುತ್ತಿದ್ದು, ಹೇಗಾದರೂ ಮಾಡಿ ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಬೇಕೆಂದು ರೈತರು ಡೀಸೆಲ್‌ ಮೋಟಾರುಗಳಿಂದ ನೀರೆತ್ತಿ ಬೆಳೆಗೆ ಬಿಡಲು ಮುಂದಾಗಿದ್ದಾರೆ. ಹಳ್ಳವನ್ನು ನಂಬಿ ನಾಟಿ ಮಾಡಿದ್ದ ರೈತರಿಗೆ ಹಳ್ಳದಲ್ಲಿ ನೀರಿದ್ದರೂ ವಿದ್ಯುತ್‌ ಸಮಸ್ಯೆ ಕಾಡುತ್ತಿದ್ದರಿಂದ ಬೆಳೆದ ಭತ್ತದ ಗದ್ದೆಗಳಿಗೆ ನೀರಿಲ್ಲದೆ ಬೆಳೆ ಒಣಗುತ್ತಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಭತ್ತದ ಗದ್ದೆಗಳು ತೆನೆ ಬಿಡುವ ಹಂತದಲ್ಲಿದ್ದರೆ, ಇನ್ನೂ ಕೆಲವು ತೆನೆ ಬಿಟ್ಟಿದ್ದು, ನೀರಿಲ್ಲದೆ ಕಾಳು ತುಂಬುತ್ತಿಲ್ಲ. ಆದ್ದರಿಂದ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. 

ಮೋಟಾರ್‌ಗಳಿಗೆ ಭಾರಿ ಬೇಡಿಕೆ: ರೈತರು ಬೆಳೆ ಉಳಿಸಲು ಡೀಸೆಲ್‌ ಮೋಟಾರ್‌ಗಳಿಗೆ ಮೊರೆ ಹೋಗಿರುವುದರಿಂದ ಡೀಸೆಲ್‌ ಮೋಟಾರ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಡೀಸೆಲ್‌ ಮೋಟಾರ್‌ಗಳಿಗೆ ಒಂದು ದಿನಕ್ಕೆ ಬಾಡಿಗೆ 1 ಸಾವಿರದಿಂದ 2 ಸಾವಿರಕ್ಕೆ ತಲುಪಿದೆ. ಮೋಟಾರ್‌ ಗಳ ಕೊರತೆಯಿಂದ ಕೆಲವರು ಹೊಸ ಮೋಟಾರ್‌ನ್ನೆ ಖರೀದಿಸಿದರೆ, ಇನ್ನೂ ಕೆಲವರು ಟ್ರಾÂಕ್ಟರ್‌ಗಳ ಇಂಜಿನ್‌
ಸಹಾಯದಿಂದ ನೀರೆತ್ತಲು ಮುಂದಾಗಿದ್ದಾರೆ. ಈಗಾಗಲೆ ರೈತರು ತಮ್ಮ ಬೆಳೆಗೆ ಸುಮಾರು 15ರಿಂದ 20 ಸಾವಿರ ರೂ.
ವೆಚ್ಚ ಮಾಡಿದ್ದು, ಭತ್ತದ ಗದ್ದೆಗಳಿಗೆ ಒಂದೆರಡು ಬಾರಿ ನೀರುಣಿಸಿದರೆ ಬೆಳೆಯು ಕೈ ಸೇರುತ್ತದೆ ಹೀಗಾಗಿ ಹಳ್ಳದ ದಂಡೆಯಲ್ಲಿರುವ ರೈತರು ಎಕರೆ ಭೂಮಿಗೆ ನೀರುಣಿಸಲು 500 ರೂ. ಖರ್ಚಾದರೆ, ಹಳ್ಳದಿಂದ ದೂರದ ಗದ್ದೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಸಲು ಎಕರೆಗೆ 1400 ರೂ.ವರೆಗೆ ವೆಚ್ಚ ಮಾಡಬೇಕಾಗಿದೆ.

ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ನಮ್ಮ ಬೆಳೆ ಉಳಿಸಿಕೊಳ್ಳಲು ಡೀಸೆಲ್‌ ಮೋಟಾರ್‌ಗಳ ಮೊರೆ ಹೋಗಬೇಕಾಗಿದೆ. ಖರ್ಚು ಹೆಚ್ಚಾದರೂ ಅನಿವಾರ್ಯವಾಗಿ ಡೀಸೆಲ್‌ ಮೋಟಾರಿನಿಂದ ನೀರು ಹರಿಸಿ ಬೆಳೆ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಮಲ್ಲಿಕಾರ್ಜುನ, ಎಚ್‌.ಹೊಸಳ್ಳಿ ಗ್ರಾಮದ ರೈತ.

ಜೆಸ್ಕಾಂ ಇಲಾಖೆಯಿಂದ ನಿಯಮದ ಪ್ರಕಾರ ದಿನಕ್ಕೆ ಏಳು ತಾಸು ವಿದ್ಯುತ್‌ ಪೂರೈಕೆ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಯಾವುದೇ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ.
ವಿಜಯ್‌ಕುಮಾರ್‌,ಜೆಸ್ಕಾಂ ಎಇಇ.

Advertisement
Advertisement

Udayavani is now on Telegram. Click here to join our channel and stay updated with the latest news.

Next