Advertisement

ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

12:49 PM Aug 21, 2018 | |

ರಾಯಚೂರು: ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳೆಲ್ಲ ತೇವಾಂಶವಿಲ್ಲದೇ ಒಣಗುತ್ತಿದ್ದು, ಇದನ್ನು ನೋಡಲಾಗದೆ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಮತ್ತೂಂದೆಡೆ ಕೃಷಿಕರೇ ಕೈಯ್ನಾರೆ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ.

Advertisement

ಉತ್ತಮ ಮಳೆ ಬಂದರೆ ಸಾಕು ಬೆಳೆ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವ ಇನ್ನೂ ಇದೆ. ಮುಂಗಾರು ಶುರುವಿನಲ್ಲಿ
ಬಂದ ಅಲ್ಪ ಸ್ವಲ್ಪ ಮಳೆಗೆ ರೈತರು ತೊಗರಿ, ಹತ್ತಿ, ಉಳ್ಳಾಗಡ್ಡಿ ಬಿತ್ತನೆ ಮಾಡಿದರು. ಆದರೆ, ಕ್ರಮೇಣ ವರುಣನ ಅವಕೃಪೆಯಿಂದ ಮೊಳಕೆ ಬಾರದೆ ಹೋಯಿತು. ಕೆಲವೆಡೆ ಮೊಳಕೆ ಬಂದರೂ ಭೂಮಿಯಲ್ಲಿ ಅಗತ್ಯ ತೇವಾಂಶವಿಲ್ಲದೇ ಮೊಳಕೆಗಳೆಲ್ಲ ಒಣಗಿ ಹೋಯಿತು.

ತಾಲೂಕಿನ ಗೋನಾಲ ಗ್ರಾಮದಲ್ಲಿ ರೈತರು ಬಿತ್ತನೆ ಮಾಡಿದ್ದ ತೊಗರಿಯನ್ನೆಲ್ಲ ಕೆಡಿಸುವ ಮೂಲಕ ಮುಂದಾಗುವ ನಷ್ಟ ತಪ್ಪಿಸಿಕೊಂಡರು. ಆದರೂ ಈಗಾಗಲೇ ಎಕರೆಗೆ ಏನಿಲ್ಲವೆಂದರೂ ಮೂರರಿಂದ ನಾಲ್ಕು ಸಾವಿರ ರೂ. ಖರ್ಚಾಗಿದ್ದು, ಅದು ನಮಗೇ ನಷ್ಟವೇ ಎನ್ನುತ್ತಾರೆ ರೈತರು. ಇನ್ನು ಉಡುಮಗಲ್‌ ಖಾನಾಪುರ, ಯರಗೇರಾ, ಕಡಗಂದಿನ್ನಿ, ವೆಂಕಟಾಪುರ, ಮರ್ಚೆಡ್‌, ಹೊಸಪೇಟೆ ಭಾಗಗಳಲ್ಲೂ ಹತ್ತಿ ಮತ್ತು ತೊಗರಿ ಬೆಳೆದ ರೈತರು ನಷ್ಟಕ್ಕೆ ಹೆದರಿ ಮಾಡಿದ ಬಿತ್ತನೆಯನ್ನೆಲ್ಲ ಹಾಳು ಮಾಡುತ್ತಿದ್ದಾರೆ. 

ಟ್ಯಾಂಕರ್‌ ಮೂಲಕವೂ ನೀರು: ವರುಣಾಗಮನದ ನಿರೀಕ್ಷೆಯಲ್ಲಿದ್ದ ರೈತರು, ಹೇಗಾದರೂ ಬೆಳೆ ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎತ್ತಿನ ಗಾಡಿಗಳಲ್ಲಿ, ತಳ್ಳು ಬಂಡಿಗಳಲ್ಲಿ, ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸಿದರು. ಆದರೆ, ಅದು ತಾತ್ಕಾಲಿಕ ಪರಿಹಾರವಷ್ಟೇ. ಮಳೆ ಬಾರದ ಹೊರತು ಬೆಳೆಗಳು ಚೇತರಿಕೆ ಕಾಣುವುದು ಕಷ್ಟ. ಅಲ್ಲದೇ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮೊಳಕೆಯೇ ಉತ್ತಮ ರೀತಿಯಲ್ಲಿ ಬಾರದಿದ್ದಲ್ಲಿ ಮುಂದೆ ಇಳುವರಿ ಕೂಡ ಕುಂಠಿತಗೊಳ್ಳಲಿದೆ. ಮುಂದೆ ನಷ್ಟ
ಅನುಭವಿಸುವುದಕ್ಕಿಂತ ಈಗಲೇ ಅಲ್ಪ ನಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವುದೇ ಲೇಸು ಎನ್ನುತ್ತಾರೆ ರೈತರು.

ಆರಂಭದಲ್ಲೇ ನಷ್ಟ: ಈ ಬಾರಿ ರೈತರಿಗೆ ಆರಂಭದಲ್ಲೇ ನಷ್ಟ ಎದುರಾಗಿದೆ. ಮುಂಗಾರು ಹಂಗಾಮಿಗಾಗಿ ಸಿದ್ಧತೆ ಮಾಡಿಕೊಂಡಿದ್ದ ರೈತಾಪಿ ವರ್ಗ, ಸಾವಿರಾರು ರೂ. ಖರ್ಚು ಮಾಡಿದ್ದರು. ನಂತರ ಸಮರ್ಪಕ ಮಳೆ ಆಗದಿದ್ದರೂ ಬಿತ್ತನೆ ಮಾಡಿದರು. ದೊಡ್ಡ ಮಳೆ ಬಾರದ ಕಾರಣ ಈಗ ಪುನಃ ಹಣ ಖುರ್ಚು ಮಾಡಿ ಬೆಳೆಗಳನ್ನೆಲ್ಲ ನಾಶ ಮಾಡುತ್ತಿದ್ದಾರೆ. ಇನ್ನು ಕೂರಿಗೆ ಪದ್ಧತಿಯಡಿ ಭತ್ತ ಬಿತ್ತನೆ ಮಾಡಿದ ರೈತರ ಸ್ಥಿತಿಯೂ ಭಿನ್ನವಾಗಿಲ್ಲ. ಅವರೂ ಕೂಡ ಪೈಕುಂಟೆ ಹರಗುವ ಮೂಲಕ ಕೊನೆ ಭಾಗಕ್ಕೆ ನೀರು ತಲುಪುವವರೆಗಾದರೂ ಬೆಳೆ ರಕ್ಷಿಸಿಕೊಳ್ಳಬೇಕು ಎಂಬ ತವಕದಲ್ಲಿದ್ದಾರೆ. ಇಲಾಖೆ ಅಧಿಕಾರಿಗಳೇ ಹೇಳಿರುವಂತೆ ಈಗಾಗಲೇ ಭಾಗಶಃ ಜಿಲ್ಲೆ ಬರಕ್ಕೆ ತುತ್ತಾಗಿದೆ. ಆದರೆ, ಸಾವಿರಾರು ರೂ. ಖರ್ಚು ಮಾಡಿಕೊಂಡಿರುವ ರೈತರು ಇನ್ನಾದರೂ ಮಳೆಯಾದರೆ ನಮ್ಮ ಬೆಳೆ ಉಳಿಯಬಹುದೇನೋ ಎನ್ನುವ ನಿರೀಕ್ಷೆಗಣ್ಣುಗಳಲ್ಲಿ ಕಾದು ಕುಳಿತಿದ್ದಾರೆ.

Advertisement

ಮಳೆ ಕೊರತೆಯಿಂದಒಣಗಿದ ಬೆಳೆಯನ್ನೇ ಹರಗಿದ ಅನ್ನದಾತರು 
ಮುದಗಲ್ಲ: ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ, ಹೆಸರು, ಎಳ್ಳು, ತೊಗರಿ, ಸಜ್ಜೆ, ಹತ್ತಿ ಬೆಳೆಗಳು ತೇವಾಂಶ ಕೊರತೆಯಿಂದ ಬಾಡಿವೆ.
ರೈತರು ಬಾಡಿದ ಬೆಳೆಗಳನ್ನು ಈಗ ಹರಗಲು ಮುಂದಾಗಿದ್ದಾರೆ.

ಮಳೆಯಾಶ್ರಿತ ಮಸಾರಿ ಜಮೀನಿನಲ್ಲಿ ಮುಂಗಾರು ಆರಂಭದಲ್ಲಿ ಬಿತ್ತನೆಗೆ ಅನುಕೂಲಕರ ರೀತಿಯಲ್ಲಿ ಮಳೆಯಾಗದೆ ಇದ್ದುದರಿಂದ ಬಿತ್ತನೆ ಮಾಡಿದ ಬೆಳೆ ಮೊಳೆಕೆಯೊಡೆದು 70 ದಿನಗಳಾದರೂ ಬೆಳೆ ನೆಲ ಬಿಟ್ಟು ಮೇಲೇಳಲೇ ಇಲ್ಲ. ಸತತ ಎರಡು ತಿಂಗಳ ಪರ್ಯಂತರ ಆಷಾಡ ಗಾಳಿಗೆ ಬೆಳೆ ನೆಲಕ್ಕೆ ಒರಗಿಕೊಂಡು ಬೆಳವಣಿಗೆ ಕುಂಟಿತಗೊಂಡಿತು.

ಅನೇಕ ಜಮೀನುಗಳಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ನೆಲಕ್ಕೆ ಒರಗಿಕೊಂಡಿದ್ದು ಕಾಯಿ ಬಿಡದೆ ಓಣಗಿದರೆ, ಎಳ್ಳು, ಸೂರ್ಯಕಾಂತಿ ಬೆಳೆ ಗೇಣೆತ್ತರ ಬೆಳೆದು ಕಾಯಿಕಟ್ಟಿ ಕಾಳು ಕಟ್ಟುವ ವೇಳೆಗೆ ತೇವಾಂಶ ಕೊರತೆಯಿಂದ ಬಾಡಿವೆ. ಹೀಗಾಗಿ ಛತ್ತರ, ದೇಸಾಯಿ ಭೋಗಾಪುರ, ಹಡಗಲಿ, ನಾಗಲಾಪುರ, ಕನ್ನಾಪುರಹಟ್ಟಿ, ಆಶಿಹಾಳ, ನಾಗಲಾಪುರ, ಹುನೂರ ಸೇರಿ ಹತ್ತಾರು ಗ್ರಾಮಗಳ ಜಮೀನಿನಲ್ಲಿ ಬೆಳೆದ ಹೆಸರು, ಎಳ್ಳು, ಸೂರ್ಯಕಾಂತಿ ಬೆಳೆಗಳನ್ನು ಹರಗಿ ಸ್ವತ್ಛಗೊಳಿಸಿದ್ದಾರೆ. ದೇಸಾಯಿ ಭೋಗಾಪುರದಲ್ಲಿ 20ಕ್ಕೂ ಹೆಚ್ಚು ರೈತರು ಎಳ್ಳು ಮತ್ತು ಸೂರ್ಯಕಾಂತಿ ಬೆಳೆ ಹರಗಿದ ದೃಶ್ಯ ಕಂಡುಬಂತು.

ದೇವರ ಮೊರೆ: ಕಳೆದ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣವಿದ್ದರೂ ಮಳೆ ಸುರಿಯುತ್ತಿಲ್ಲ. ಹೀಗಾಗಿ ರೈತರು, ಗ್ರಾಮಸ್ಥರು ವರುಣ ಕೃಪೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಸಪ್ತಭಜನೆ , ದೀಡ ನಮಸ್ಕಾರ ಹಾಕುವುದು, ಪಾದಯಾತ್ರೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಗೋಶಾಲೆ ತೆರೆಯಲು ಆಗ್ರಹ: ಮಳೆ ಕೊರತೆಯಿಂದ ಬಿತ್ತಿದ ಬೆಳೆ ಬಾಡತೊಡಗಿದೆ, ಜಾನುವಾರುಗಳಿಗೂ ಮೇವಿನ ತೊಂದರೆ ಎದುರಾಗಿದೆ. ರೈತರು, ಕೃಷಿ ಕಾರ್ಮಿಕರು ಗುಳೆ ಹೊರಟಿದ್ದಾರೆ. ಸರಕಾರ ಬರಪೀಡಿತ ಜಿಲ್ಲೆ ಘೋಷಿಸಬೇಕು. ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕೆಂದು ರೈತ ಸಂಘದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ರೈತ ಶಂಕ್ರಪ್ಪ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಲಿಂಗಸುಗೂರು ತಾಲೂಕಿನಲ್ಲಿ ಒಟ್ಟು 67,570 ಹೆಕ್ಟೇರ್‌ ಪ್ರದೇಶ ಸಾಗುವಳಿ ಜಮೀನಿದ್ದು, ಅದರಲ್ಲಿ 52,802 ಹೆಕ್ಟೇರ್‌
ಪ್ರದೇಶದಲ್ಲಿ ಹೈಬ್ರಿಡ್‌ ಸಜ್ಜೆ, ಸೂರ್ಯಕಾಂತಿ, ಎಳ್ಳು, ತೊಗರಿ, ಹತ್ತಿ ಮತ್ತು ಹೆಸರು ಬಿತ್ತನೆ ಮಾಡಲಾಗಿತ್ತು. ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದ್ದರಿಂದ ಭೂಮಿಯಲ್ಲಿ ತೇವಾಂಶ ಕೊರತೆ ಉಂಟಾಗಿ ಬೆಳೆ ಬಾಳತೊಡಗಿದೆ. 
 ಮಲ್ಲಿಕಾರ್ಜುನ ನಾಗರಹಾಳ, ಕೃಷಿ ಅಧಿಕಾರಿ,  ತಾಲೂಕು ಕೃಷಿ ಇಲಾಖೆ, ಲಿಂಗಸುಗೂರು.

ಮುಂಗಾರು ಹಂಗಾಮಿನಲ್ಲಿ ಎಕರೆಗೆ 10-12 ಸಾವಿರ ಖರ್ಚು ಮಾಡಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಆದರೆ, ಒಮ್ಮೆಯೂ ದೊಡ್ಡ ಮಳೆ ಬಾರದೆ ಬೆಳೆಗಳೆಲ್ಲ ಒಣಗಿ ಹೋದವು. ಮತ್ತೆ ಹಣ ಖರ್ಚು ಮಾಡಿ ಟ್ಯಾಂಕರ್‌ ಮೂಲಕ ನೀರು ಹಾಕಿದರೂ ಬೆಳೆ ಚೇತರಿಸಿಕೊಳ್ಳಲಿಲ್ಲ. ಹೀಗಾಗಿ ವಿಧಿ ಇಲ್ಲದೇ ಬೆಳೆ ನಾಶಪಡಿಸಲಾಯಿತು. 
 ಜಯಪ್ಪಸ್ವಾಮಿ ಉಡುಮಗಲ್‌, ರೈತ ಮುಖಂಡ

ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿದ್ದ ತೊಗರಿ ಬೆಳೆಯೆಲ್ಲ ಮಳೆ ಇಲ್ಲದೇ ಒಣಗಿ ಹೋಯಿತು. ಹಾಗೇ ಬಿಟ್ಟರೆ ಉತ್ತಮ ಇಳುವರಿ ಕೂಡ ಸಿಗುವುದಿಲ್ಲ. ಅಲ್ಲದೇ, ಖರ್ಚು ಕೂಡ ಹೆಚ್ಚಾಗಲಿದ್ದು, ರೈತರೇ ಬೆಳೆಗಳನ್ನು ಕೆಡಿಸಿ ಹಿಂಗಾರು ಬಿತ್ತನೆಗೆ ಮುಂದಾಗಿದ್ದಾರೆ.
ಸುಧಾಕರ್‌, ಗೋನಾಲ

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next