Advertisement

ನೋಂದಣಿಗೆ ರೈತರ ನೂಕುನುಗ್ಗಲು

03:25 PM Sep 07, 2018 | Team Udayavani |

ಬೈಲಹೊಂಗಲ: ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಬುಧವಾರ ಆರಂಭಿಸಲಾದ ಹೆಸರು ಖರೀದಿ ಕೇಂದ್ರದಲ್ಲಿ ಮೊದಲ ದಿನವೇ ಸಾವಿರಾರು ರೈತರು ನೋಂದಣಿಗಾಗಿ ಆಗಮಿಸಿದ್ದರಿಂದ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾದ ಪ್ರಸಂಗ ನಡೆಯಿತು.

Advertisement

ಎಫ್‌.ಎ.ಕ್ಯೂ. ಗುಣಮಟ್ಟದ ಹೆಸರು ಕಾಳು ಖರೀದಿಸಲು ತಾಲೂಕಿನ ದೊಡವಾಡ ಗ್ರಾಮದ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೇಂದ್ರ ಪ್ರಾರಂಭಿಸಲಾಗಿದ್ದು, ನೋಂದಣಿಗೆ ಸೆ. 9ರವರೆಗೆ ಮಾತ್ರ ದಿನಾಂಕ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ ಸಂಘದಲ್ಲಿ ಖರೀದಿ ಕೇಂದ್ರ ಆರಂಭಿಸುವಂತೆ ಅಧಿಕೃತ ಆದೇಶ ಬಂದಿಲ್ಲವಾದರೂ ತಾಲೂಕು ಎಪಿಎಂಸಿ ಅಧಿಕಾರಿಗಳ ನಿರ್ದೇಶನದಂತೆ ಒಮ್ಮಲೇ ಒತ್ತಡವಾಗದಿರಲೆಂದು ರೈತರ ನೋಂದಣಿ ಆರಂಭಿಸಲಾಗಿದೆ. ಖರೀದಿ ಏಜೆನ್ಸಿಯವರು ಅರ್ಜಿ ಅಪಲೋಡ್‌ ಮಾಡಲು ಮೊಬೈಲ್‌ ರಿಜಿಸ್ಟ್ರೇಷನ್‌ನ ಒಂದೇ ಆ್ಯಪ್‌ ಕಳಿಸಿದ್ದು ತೊಂದರೆಗೆ ಕಾರಣವಾಗಿದೆ ಎಂದು ಸಂಘದ ಆಡಳಿತ ಮಂಡಳಿ ಸದಸ್ಯರು ತಿಳಿಸಿದರು.

ರಾಜ್ಯದಲ್ಲೇ ಅತಿ ಹೆಚ್ಚು ಸುಮಾರು 2,500 ಹೆಕ್ಟೇರ್‌ ನಷ್ಟು ಹೆಸರನ್ನು ದೊಡವಾಡ ಕೃಷಿ ಭೂಮಿ ವ್ಯಾಪ್ತಿಯಲ್ಲೇ ಬೆಳೆಯಲಾಗಿದೆ. ಎಲ್ಲ ರೈತರ ರಿಜಿಸ್ಟ್ರೇಷನ್‌ಗಾಗಿ ನಾಲ್ಕೈದು ಆ್ಯಪ್‌ಗ್ಳಾದರೂ ಬೇಕು. ನೋಂದಣಿಗೆ ಕೇವಲ ಐದೇ ದಿನ ಬಾಕಿ ಇರುವ ಕಾರಣ ರೈತರು ರಾತ್ರಿಯೇ ನೋಂದಣಿಗಾಗಿ ಪಾಳಿ ನಿಂತಿದ್ದು, ಗೊಂದಲಕ್ಕೆ ಕಾರಣವಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಸುಮಾರು 1500 ರೈತರ ಹೆಸರನ್ನು ಒಂದೇ ದಿನ ನೋಂದಣಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ರೈತರಿಗೆ ಸಮಸ್ಯೆಯಾಗದಂತೆ ಖರೀದಿ ಕೇಂದ್ರಗಳಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಬೇಕೆಂಬ ಡಿಸಿ ಆದೇಶವನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುತ್ತಲಿನ ಗ್ರಾಮಗಳ ರೈತರಿಗೂ ಇದೊಂದೇ ಖರೀದಿ ಕೇಂದ್ರ ಸಮೀಪದಲ್ಲಿದ್ದು ನೋಂದಣಿಗೆ ಇನ್ನು ಹೆಚ್ಚಿನ ರೈತರು ಆಗಮಿಸುವ ನಿರೀಕ್ಷೆ ಇದ್ದು ಗಲಾಟೆ ಗದ್ದಲ ಉಂಟಾಗುವ ಸಂಭವವಿದೆ. ಆದ್ದರಿಂದ ನೋಂದಣಿ ದಿನಾಂಕ ವಿಸ್ತರಿಸಬೇಕು. ಏಜೆನ್ಸಿಯವರಿಂದ ನಾಲ್ಕೈದಾದರೂ ಮೊಬೈಲ್‌ ರಿಜಸ್ಟ್ರೇಷನ್‌ ಆ್ಯಪ್‌ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ರೈತರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೊಡವಾಡ ಪೊಲೀಸ್‌ ಠಾಣೆಯಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next