ಸವದತ್ತಿ: ಬೆಳೆವಿಮೆ ಮತ್ತು ಬೆಳೆ ಹಾನಿ ಮೊತ್ತ ಪಾವತಿ ಮಾಡುವಲ್ಲಿ ಈ ಭಾಗದ ರೈತರಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಸ್ಥಳೀಯ ಹಾಗೂ ಇತರ ಭಾಗದ ರೈತರು ಹಠಾತನೇ ಸ್ಥಳೀಯ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದ ರೈತರ ಹೊಲಗಳಿಗೆ ನೀರು ನುಗ್ಗಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದು, ಸರ್ಕಾರ ಬೆಳೆನಾಶಕ್ಕೆ ಪರಿಹಾರ ಅಥವಾ ಬೆಳೆ ವಿಮೆ ಮಂಜೂರು ಮಾಡಿದರೂ ಅಧಿಕಾರಿಗಳು ಮಾತ್ರ ಇತ್ತ ಗಮನ ನೀಡದೇ ರೈತರತ್ತ ಅಸಡ್ಡೆ ಭಾವ ತಳೆದಿದ್ದಾರೆಂದು ಪ್ರತಿಭಟನಾ ನಿರತ ಆರೋಪಿಸಿ ಬೆಳೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಅಪಾರ ಮಳೆಯಿಂದಾಗಿ ರೈತರಿಗೆ ದೊಡ್ಡ ನಷ್ಟವಾಗಿದೆ. ಬೆಳೆ ವಿಮೆ ಮೊತ್ತ ಇವತ್ತಿನ ವರೆಗೂ ಜಮೆಯಾಗಿಲ್ಲ. ತಿಂಗಳುಗಟ್ಟಲೇ ಕಚೇರಿಯಿಂದ ಕಚೇರಿಗೆ ಅಲೆದರೂ ಅಧಿಕಾರಿಗಳು ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ. ಹೀಗಾದರೆ ಬಡ ರೈತ ಹೋಗುವುದಾದರೂ ಎಲ್ಲಿಗೆ? ಪರಿಹಾರ ಕೇಳುವುದೇ ತಪ್ಪು ಎಂಬಂತೆ ಅಸಡ್ಡೆ ಭಾವದಲ್ಲಿ ನಮ್ಮನ್ನು ಕಾಣುತ್ತಿದ್ದಾರೆಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆನಂದ ಮಾಮನಿ ಮಾತನಾಡಿ, ರೈತರಿಗೆ ಸೇರಬೇಕಾದ ಬೆಳೆವಿಮೆ ಮೊತ್ತ ಈ ಭಾಗಕ್ಕೆ ಮಾತ್ರವಲ್ಲ ಇಡೀ ತಾಲೂಕಿನಲ್ಲಿ ಸಮಸ್ಯೆಯಾಗಿರುವುದರಿಂದ ಜಿಲ್ಲಾಧಿಕಾರಿ ಜೊತೆ ಸಮಾಲೋಚಿಸಿ ಮರುಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನಾ ನಿರತ ರೈತರಿಗೆ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಸಹ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ವೀರೇಶ ಕಡಗದ, ಸಂಗಮೇಶ ಮಡಿವಾಳರ, ವೀರಭದ್ರ ಪಟ್ಟಣಶೆಟ್ಟಿ, ಬಸವರಾಜ ಸರ್‌ದೇಸಾಯಿ ಸೇರಿದಂತೆ ಸುತ್ತಮುತ್ತಲಿನ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರೈತರ ಗೋಳು ಇಲ್ಲಿ ಯಾರೂ ಕೇಳ್ಳೋರಿಲ್ಲ ಅದಕ್ಕಾಗಿ ನಾವೆಲ್ಲ ತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪರಿಹಾರ ಸಿಗದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡ ಶ್ರೀಕಾಂತ ಹಟ್ಟಿಹೊಳಿ ಹೇಳಿದರು.
ದೇಶಕ್ಕೆ ಅನ್ನ ನೀಡುವ ರೈತ ಸಂಕಷ್ಟದಲ್ಲಿದ್ದರೂ, ಅಧಿಕಾರಿಗಳ ಈ ನಡೆ ಬೇಸರ ತಂದಿದ್ದು, ರೈತರಿಗೆ ಪರಿಹಾರ ನೀಡುವ ಕಾರ್ಯ ಶೀಘ್ರವೇ ಜರುಗದಿದ್ದರೆ ರೈತರೊಂದಿಗೆ ಹೋರಾಡಲು ಬದ್ಧ ಎಂದು ಶಾಸಕ ಆನಂದ ಮಾಮನಿ ಆಕ್ರೋಶ ವ್ಯಕ್ತಪಡಿಸಿದರು.