Advertisement

ಬೆಳೆ ವಿಮೆ ಮಾಡಿಸಲು ರೈತರ ನಿರಾಸಕ್ತಿ

09:46 PM Jul 22, 2019 | Lakshmi GovindaRaj |

ಚಾಮರಾಜನಗರ: ಕಳೆದ ವರ್ಷದ ಬೆಳೆ ವಿಮೆ ಹಣ ಕೈ ಸೇರದಿರುವುದು ಹಾಗೂ ಅದಕ್ಕೂ ಹಿಂದಿನ ಹಣ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಬೆಳೆವಿಮೆ ಮಾಡಿಸಲು ರೈತರು ನಿರಾಸಕ್ತಿ ವಹಿಸಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ತಮ್ಮ ಹೆಸರು ನೋಂದಣಿ ಮಾಡಿಸಲು ರೈತರು ನಿರೀಕ್ಷಿತ ಪ್ರಮಾಣದಲ್ಲಿ ಮುಂದೆ ಬರುತ್ತಿಲ್ಲ.

Advertisement

ಜು.31 ಕೊನೆ ದಿನ: ರೈತರು ಬಿತ್ತನೆ ಮಾಡಿದ ಬೆಳೆ ಸಮರ್ಪಕವಾಗಿ ಮಳೆಯಾಗದೇ ಒಣಗಿ ನಷ್ಟವಾದರೆ. ಬೆಳೆ ವಿಮೆಯಲ್ಲಿ ಅದಕ್ಕೆ ಪರಿಹಾರ ನೀಡಲಾಗುತ್ತದೆ. ಬಹುತೇಕ ಬೆಳೆಗಳಿಗೆ ವಿಮೆ ಕಂತಿನ ಹಣ ಪಾವತಿಸಲುಜು. 31 ಕೊನೆ ದಿನ. ಹೀಗಿದ್ದರೂ ಜಿಲ್ಲೆಯಲ್ಲಿ ಈವರೆಗೆ ವಿಮೆ ಕಂತಿನ ಹಣ ಪಾವತಿಸಿ ಯೋಜನೆಯಡಿ ನೋಂದಣಿಯಾಗಿರುವ ರೈತರ ಸಂಖ್ಯೆ ಜು.10ರವರೆಗೆ ಕೇವಲ 6,878 ಮಾತ್ರ !

ಪಾವತಿಗಾಗಿ ಪರಿಶೀಲನೆ: 2016-17ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 24 ಕೋಟಿ ರೂ. ವಿಮೆ ಹಣ ವಿಳಂಬವಾಗಿದ್ದರೂ ಬಿಡುಗಡೆಯಾಗಿದ್ದು, ಈ ಪೈಕಿ 17 ಸಾವಿರ ರೈತರಿಗೆ 11 ಕೋಟಿ ರೂ. ಹಣವನ್ನು ಪಾವತಿ ಮಾಡಲಾಗಿದೆ. ಇನ್ನು 32 ಸಾವಿರ ರೈತರಿಗೆ 13 ಕೋಟಿ ರೂ. ಹಣ ಸಹ ಬಂದಿದ್ದು, ಪಾವತಿಗಾಗಿ ಪರಿಶೀಲನೆ ನಡೆಯುತ್ತಿದೆ. ಆದರೆ, ಆಧಾರ್‌ ಜೋಡಣೆ ಸಮಸ್ಯೆಯಿಂದಾಗಿ ಆ ಸಾಲಿನ 1400 ಮಂದಿ ರೈತರಿಗೆ ಹಣ ಕೈ ಸೇರಿಲ್ಲ. ಹೀಗಾಗಿ ಅದನ್ನು ಪರಿಶೀಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹಣ ಪಾವತಿಸಲು ಹಿಂದೇಟು: ಒಟ್ಟಾರೆ, 2016-17ನೇ ಸಾಲಿನ ವಿಮೆ ಹಣ ವಿಳಂಬವಾದದ್ದು ಹಾಗೂ ಕಳೆದ ಸಾಲಿನಲ್ಲಿ ನೋಂದಣಿಯಾಗಿದ್ದ ಒಟ್ಟು 15 ಸಾವಿರ ರೈತರಿಗೆ ಇನ್ನು ವಿಮೆ ಹಣ ಬಿಡುಗಡೆಯಾಗದಿರುವುದು ಈ ಸಾಲಿನಲ್ಲಿ ವಿಮೆ ಕಂತಿನ ಹಣ ಪಾವತಿಸಲು ರೈತರು ಹಿಂದೇಟು ಹಾಕಲು ಕಾರಣ. ಆದರೂ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, 2016-17ನೇ ಸಾಲಿನಲ್ಲಿ ರೈತರಿಂದ ಪಾವತಿಯಾದ ಕಂತಿನ ಹಣ 2.5 ಕೋಟಿ ರೂ. ಆದರೆ, ಅದಕ್ಕೆ ಪ್ರತಿಯಾಗಿ ಬೆಳೆ ನಷ್ಟಕ್ಕೆ ಬಿಡುಗಡೆಯಾಗಿರುವ ಹಣ 24 ಕೋಟಿ ರೂ. ! ಈಗಾಗಲೇ ಕೆಲ ಬೆಳೆಗಳಿಗೆ ವಿಮೆ ಕಂತಿನ ಹಣ ಪಾವತಿಸುವ ದಿನಾಂಕ ಕೊನೆಗೊಂಡಿದೆ. ಇನ್ನು ಬಹುತೇಕ ಬೆಳೆಗಳಿಗೆ ಕಂತಿನ ಹಣ ಪಾವತಿಸಿ ವಿಮೆ ಯೋಜನೆಗೆ ನೋಂದಣಿ ಮಾಡಿಸಲು ಜು. 31ರವರೆಗೂ ಕಾಲಾವಕಾಶವಿದೆ.

1,489 ಮಂದಿ ಮಾತ್ರ ನೋಂದಣಿ: ಸದ್ಯ ಈವರೆಗೆ ಚಾಮರಾಜನಗರ ತಾಲೂಕಿನಲ್ಲಿ 3,103ಮಂದಿ ಕಂತಿನ ಹಣ ಕಟ್ಟಿ ನೋಂದಣಿ ಮಾಡಿಸಿದ್ದಾರೆ. ಗುಂಡ್ಲು ಪೇಟೆ ತಾಲೂಕಿನಲ್ಲಿ 99 ಮಂದಿ, ಹನೂರಿನಲ್ಲಿ ಕೇವಲ 23 ಮಂದಿ , ಕೊಳ್ಳೇಗಾಲ ತಾಲೂಕಿನಲ್ಲಿ 2,164 ಮಂದಿ ಹಾಗೂ ಯಳಂದೂರು ತಾಲೂಕಿನಲ್ಲಿ 1,489 ಮಂದಿ ಮಾತ್ರ ಬೆಳೆವಿಮೆಗೆ ನೋಂದಣಿ ಮಾಡಿಸಿದ್ದಾರೆ. ಕಳೆದ ವರ್ಷ ಮುಂಗಾರು ಹಂಗಾಮಿಗೆ 15,196 ಮಂದಿ ರೈತರು ನೋಂದಣಿ ಮಾಡಿಸಿದ್ದರು. ಆದರೆ, ಈ ಬಾರಿ ಅಷ್ಟು ಮಂದಿಯೂ ನೋಂದಣಿಗೊಳ್ಳುತ್ತಾರೋ ಇಲ್ಲವೋ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಜಿಲ್ಲೆಯಲ್ಲಿ ಬೆಳೆಯ ಪರಿಸ್ಥಿತಿ: ಜಿಲ್ಲೆಯಲ್ಲಿ ವಾರ್ಷಿಕ ಬಿತ್ತನೆ ಗುರಿ 1.50 ಲಕ್ಷ ಹೆಕ್ಟೇರ್‌. ಆದರೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ 47 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಈ ಪೈಕಿ ಬಹುತೇಕ ಬೆಳೆ ಮಳೆ ಕೊರತೆ ಪರಿಣಾಮ ಬಾಡಿ, ಒಣಗುವ ಸ್ಥಿತಿಯಲ್ಲಿವೆ. ಒಂದು ಹೆಕ್ಟೇರ್‌ಗೆ ಒಬ್ಬ ರೈತರು ಎಂಬ ಲೆಕ್ಕಾಚಾರದಲ್ಲೂ ಒಟ್ಟು 47 ಸಾವಿರ ಮಂದಿಗೆ ಬೆಳೆ ನಷ್ಟವಾಗಲಿದೆ. ಆದರೆ, ಈವರೆಗೆ ಬೆಳೆ ವಿಮೆಗಾಗಿ ನೋಂದಣಿಗೊಂಡಿರುವ ರೈತರ ಸಂಖ್ಯೆ 6,878 ಮಾತ್ರ. ತೊಗರಿ, ಹುರುಳಿ, ರಾಗಿ, ಹತ್ತಿ ಹಾಗೂ ಭತ್ತ (ನೀರಾವರಿ) ಬೆಳೆಗಳಿಗೆ ಜು. 31ರವರೆಗೂ ವಿಮೆ ಕಂತಿನ ಹಣ ಪಾವತಿಸಿ, ನೋಂದಣಿಯಾಗಲು ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.

* ಬನಶಂಕರ ಆರಾಧ್ಯ.ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next