ನೆಲಮಂಗಲ: ರೈತರ ಭೂಮಿಯನ್ನು ಕಸಿದು ಕೊಂಡು ಅಧಿಕಾರಿಗಳ ಇಚ್ಛೆಯಂತೆ ಎಕರೆಗೆ 90 ಲಕ್ಷ ನಿಗದಿ ಮಾಡಿ ಭೂ ಮಾಲೀಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ರೈತರ ಭೂಮಿಯ ದರ ಮರು ನಿಗಧಿಯಾಗಬೇಕು ಎಂದು ಭೂಮಿ ಕಳೆದುಕೊಳ್ಳುತ್ತಿರುವ ರೈತರು ಕೆಐಎಡಿಬಿ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲು ಸಿದ್ಧರಾಗಿದ್ದಾರೆ.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಓಬಳಾಪುರ ಕೈಗಾರಿಕಾ ಪ್ರದೇಶ ಎಂದು ಗುರುತಿಸಿ ಸುತ್ತಲಿನ ಐದಾರು ಹಳ್ಳಿಗಳ 879 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಇದರ ವಿರುದ್ಧ ಈಗಾಗಲೇ ನಾಲ್ಕು ಬಾರಿ ರೈತರು ರಸ್ತೆ ತಡೆದು ಗ್ರಾಮದಲ್ಲಿ ದರ ಮರು ನಿಗದಿ ಮಾಡುವಂತೆ ಪ್ರತಿಭಟಿಸಿದ್ದರು. ಅಧಿಕಾರಿಗಳು ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಿಲ್ಲ. ಇಂದಿನ ನಮ್ಮ ಭೂಮಿಗೆ ಸರ್ಕಾರಿ ಬೆಲೆ ಅಡಿಯಲ್ಲಿ 1.40 ಕೋಟಿ ರೂ. ಹಣವನ್ನು ನೀಡಬೇಕಾಗು ತ್ತದೆ. ಆದ್ದರಿಂದ, ಸೂಕ್ತ ಬೆಲೆ ನಿಗದಿ ಮಾಡಬೇಕು. ಇಲ್ಲವಾದಲ್ಲಿ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ಗ್ರಾಮಸ್ಥರು ಓಬಳಾಪುರ ಗ್ರಾಮದ ಗಂಗಸಂದ್ರಮ್ಮ ದೇವಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ಕಟ್ಟುನಿಟ್ಟಾಗಿ ನಿರ್ಧರಿಸಿದ್ದಾರೆ.
ಗ್ರಾಮಸ್ಥರ ಆರೋಪ: ಓಬಳಾಪುರ ಗ್ರಾಮ ದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿದ್ದು, ಎಕರೆಗೆ ಉಪನೋಂದಣಿ ಇಲಾಖೆಯ ಸರ್ಕಾರಿ ಬೆಲೆಯಲ್ಲಿ ನೀಡಿದ್ದಾರೆ. ಅಡಕೆ, ತೆಂಗು ಮರಗಳಿಗೆ 8000 ದಿಂದ 18000 ಸಾವಿರ ರೂ.ವರೆಗೂ ಪರಿಹಾರ ನೀಡಿದ್ದಾರೆ. ಆದರೆ, ಕೆಐಎಡಿಬಿಯವರು ಹಣ ಮಾಡಲು ರೈತರ ಭೂಮಿಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಶಾಸಕರ ವಿರುದ್ಧ ಅಸಮಾಧಾನ: ನೆಲ ಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸ್ವಗ್ರಾಮದಲ್ಲೇ 500 ಎಕರೆ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಪರವಾಗಿ ನಿಂತು ಪರಿಹಾರ ಕೊಡಿಸಲು ವಿಫಲರಾಗಿದ್ದಾರೆ. ಗ್ರಾಮದಲ್ಲಿ ಈ ಸಂಬಂಧವಾಗಿ ನಡೆಯುವ ಯಾವುದೇ ಸಭೆಗಳಿಗೆ ಬರುವುದಿಲ್ಲ. ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸುತ್ತಿಲ್ಲ. ಸದನದಲ್ಲಿ ಈ ವಿಚಾರವಾಗಿ ಪ್ರಶ್ನೆ ಮಾಡುತ್ತೇನೆ ಎಂದವರು ಎಲ್ಲಿ ಹೋದರು. ಇವರಿಂದ ಗ್ರಾಮಕ್ಕೆ ಯಾವುದೇ ಅನುಕೂಲಗಳಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಹೋರಾಟದ ಎಚ್ಚರಿಕೆ: ಓಬಳಾಪುರ ಗ್ರಾಮದ ಮುಖಂಡ ವಕೀಲ ಹನುಮಂತೇಗೌಡ ಮಾತನಾಡಿ, ನಮ್ಮ ಗ್ರಾಮದಲ್ಲಿ ಅಡಕೆ, ತೆಂಗು ಮಾವು ಮತ್ತು ಕೋಳಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿರುವ ರೈತರು ಸಾಕಷ್ಟು ಮಂದಿ ಇದ್ದಾರೆ. ಭೂಸ್ವಾಧೀನ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದರೂ, ಯಾವುದೇ ಪ್ರಯೋಜನ ಆಗಿಲ್ಲ. ನಮ್ಮ ಭೂಮಿಗೆ ಸೂಕ್ತವಾದ ಬೆಲೆ ನೀಡಬೇಕು. ಇಲ್ಲವಾದ್ದಲ್ಲಿ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗ್ರಾಮದ ಮುಖಂಡ ವಿಜಯಣ್ಣ ಕಾರಾಳಪ್ಪ, ಶಂಕರಪ್ಪ, ಹನುಮಂತರಾಜು, ಮಹಿಮಣ್ಣ, ಟಿಎಪಿಎಂಸಿ ಅದ್ಯಕ್ಷ ಗುರುಪ್ರಕಾಶ್, ಗ್ರಾಪಂ ಸದಸ್ಯ ಶ್ರೀಧರ್, ಸೋಮಶೇಖರ್, ಬಾಬು, ರಂಗನಾಥ್ ಹಾಗೂ ಗ್ರಾಮಸ್ಥರು ಇದ್ದರು.