Advertisement

ಗುಳೆ ಹೊರಡಲು ಸಿದ್ಧವಾದ ರೈತರು, ಕೃಷಿ ಕಾರ್ಮಿಕರು

06:00 AM Oct 14, 2018 | |

ಕಲಬುರಗಿ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ತತ್ತರಿಸಿದ್ದ ಉತ್ತರ ಕರ್ನಾಟಕದ ರೈತರಿಗೆ ಈಗ ಹಿಂಗಾರಿಯಲ್ಲೂ ಬರದ ಛಾಯೆ ಆವರಿಸಿದೆ. ಬದುಕು ದುಸ್ತರವಾಗಿದ್ದು, ಅನ್ನದಾತರು ಹಾಗೂ ಕೃಷಿ ಕಾರ್ಮಿಕರು ಗುಳೆ ಹೊರಡಲು ಸಜ್ಜಾಗಿದ್ದಾರೆ.

Advertisement

ಮಳೆ ಅಭಾವದಿಂದ ಹೈಕ ಭಾಗದಲ್ಲಿ ಮುಂಗಾರು ಬೆಳೆಗಳು ಬರಲಿಲ್ಲ. ಈಗ ಹಿಂಗಾರಿಯಲ್ಲೂ ಭೂಮಿಯಲ್ಲಿ ತೇವಾಂಶವಿಲ್ಲದ ಕಾರಣ ಜೋಳ, ಕಡಲೆ, ಗೋಧಿ ಬಿತ್ತನೆ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಸೆಪ್ಟೆಂಬರ್‌ ಕೊನೆ ವಾರ, ಅಕ್ಟೋಬರ್‌ನ ಮೊದಲೆರಡು ವಾರ ಜೋಳ ಬಿತ್ತನೆಗೆ ಸಕಾಲ. ಈಗಲೂ ಬಿತ್ತನೆ ಮಾಡಲಾಗದೆ ಕೆಲ ರೈತರು, ಕೃಷಿ ಕಾರ್ಮಿಕರು ಗುಳೆಗೆ ಮುಂದಾಗಿದ್ದಾರೆ.

ಉತ್ತರ ಕರ್ನಾಟಕದಾದ್ಯಂತ ಪ್ರತಿವರ್ಷ ಸುಮಾರು 12 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಜೋಳ ಬಿತ್ತನೆಯಾಗುತ್ತದೆ. ರಾಜ್ಯದಲ್ಲಿ ಜೋಳದಿಂದಲೇ 50 ಲಕ್ಷ ಮೆಟ್ರಿಕ್‌ ಟನ್‌ ಮೇವು ದೊರಕುತ್ತದೆ. ಈ ಬಾರಿ ಶೇ.25ರಷ್ಟು ಕೂಡ ಬಿತ್ತನೆಯಾಗಿಲ್ಲ. ಕಡಲೆ ಸಹ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಸೇರಿ ಕನಿಷ್ಠ 20 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗುತ್ತದೆ. ಮಳೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದವರಿಗೆ ಹಿಂಗಾರು ಕೈಕೊಟ್ಟು ಆತಂಕದ ಸ್ಥಿತಿ ನಿರ್ಮಾಣ ಮಾಡಿದೆ.

ಗೋಧಿ, ಕುಸುಬೆ, ಸೂರ್ಯಕಾಂತಿ ಬಿತ್ತನೆಗೂ ಮುಂದಾಗುತ್ತಿಲ್ಲ. ಮುಂಗಾರು ಹಂಗಾಮಿನ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸೋಯಾಬಿನ್‌, ಎಳ್ಳು ಬೆಳೆ ಕೆಲವು ಕಡೆ ಅಲ್ಪ ಮಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ಇಳುವರಿ ಬಂದಿದೆ. ಆದರೆ ಹಿಂಗಾರು ಮಳೆ ಅಭಾವದಿಂದ ಕೈಗೆಟುಕದಂತಾಗಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿರುವ ತೊಗರಿ ಈಗಾಗಲೇ ಶೇ.50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಕಡಿಮೆ ಇಳುವರಿ ಬರುವ ಸಾಧ್ಯತೆಗಳಿವೆ.

ಮೋಡ ಬಿತ್ತನೆಗೆ ಮಾಡಲಿಲ್ಲ ಮನಸ್ಸು: ಆಗಸ್ಟ್‌ ಕೊನೆವಾರ, ಸೆಪ್ಟೆಂಬರ್‌ ಮೊದಲ ಹಾಗೂ ಎರಡನೇ ವಾರದಲ್ಲಿ ಮೋಡ ವ್ಯಾಪಕವಾಗಿದ್ದರೂ ಮಳೆ ಸುರಿಯಲಿಲ್ಲ. ಈ ಸಂದರ್ಭದಲ್ಲಿಯೇ ಮೋಡ ಬಿತ್ತನೆ ಮಾಡಬೇಕೆಂದು ರೈತರು ಆಗ್ರಹಿಸಿದ್ದರು. ಆದರೆ ಸರ್ಕಾರ ಸೂಕ್ತ ನಿರ್ಧಾರ ತಳೆಯಲಿಲ್ಲ. ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆಯಾಗಿದೆ. ಉಪ ಸಮಿತಿ ರಚಿಸಲಾಗಿದೆ ಎಂದು ಸಬೂಬು ಹೇಳಿದರೆ ಹೊರತು ನಿರ್ಧಾರ ತೆಗೆದುಕೊಳ್ಳಲಿಲ್ಲ.

Advertisement

ಶೇ.89ರಷ್ಟು ಕೊರತೆ
ಕಲಬುರಗಿ ಜಿಲ್ಲೆಯಲ್ಲಿ ಅಕ್ಟೋಬರ್‌ನ ಮೊದಲೆರಡು ವಾರದಲ್ಲಿ 59 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಕೇವಲ 7 ಮಿ.ಮೀ ಮಳೆಯಾಗಿ ಶೇ.89ರಷ್ಟು ಕೊರತೆಯಾಗಿದೆ.ಸೆಪ್ಟೆಂಬರ್‌ ತಿಂಗಳಿನಲ್ಲಿ 189 ಮಿ.ಮೀ. ಮಳೆ ಪೈಕಿ ಕೇವಲ 63 ಮಿ.ಮೀ. ಮಳೆಯಾಗಿ ಶೇ.67ರಷ್ಟು ಕೊರತೆಯಾಗಿದೆ. ಉಳಿದಂತೆ ಅಕ್ಟೋಬರ್‌ನಲ್ಲಿ ಮುಗಿದಿರುವ ಈ ಎರಡು ವಾರದಲ್ಲಿ ಉತ್ತರ ಕರ್ನಾಟಕದಲ್ಲಿ 62 ಮಿ.ಮೀ. ಮಳೆಯಾಗ ಬೇಕಿತ್ತು. ಆದರೆ ಕೇವಲ 6 ಮಿ.ಮೀ. ಮಳೆಯಾಗಿ ಶೇ. 90ರಷ್ಟು ಕೊರತೆಯಾಗಿದೆ.

ಹಿಂಗಾರು ಹಂಗಾಮಿನ ಮಳೆ ಶೇ.90ರಷ್ಟು ಕೊರತೆ ಉಂಟಾಗಿದ್ದರಿಂದ ಬೆಳೆಗಳು ದುಃಸ್ಥಿತಿ ಉಂಟಾಗಿದೆ. ಆದರೆ ರೈತ, ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಾರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಅಲ್ಲದೇ ರೈತರಿಗೆ ಇನ್‌ಪುಟ್‌ ಸಬ್ಸಿಡಿ ದೊರಕುವ ಹೆಜ್ಜೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿ ಸಮೀಕ್ಷೆ ನಡೆದಿದೆ.
ರಿತೇಂದ್ರನಾಥ ಸೂಗುರ,
ಕೃಷಿ ಜಂಟಿ ನಿರ್ದೇಶಕರು, ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಆಗಿರುವ ಮುಂಗಾರು ಹಂಗಾಮಿನ ಬೆಳೆ ಹಾನಿಯ ಸಮೀಕ್ಷೆ ನಡೆದಿದ್ದು, ಶೇ.50ರಷ್ಟು ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ. ಹಿಂಗಾರಿ ಬಿತ್ತನೆಯೇ ಆಗಿಲ್ಲ. ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿಯಿಂದ ಸಮಗ್ರ ಕ್ರಿಯಾ ಯೋಜನೆ ಹಾಗೂ ಮಂಜೂರಾತಿ ದೊರೆತ ಕೆಲಸಗಳನ್ನು ಮಾಸಾಂತ್ಯ ನಂತರ ಕೈಗೊಳ್ಳಲಾಗುವುದು.
ಆರ್‌. ವೆಂಕಟೇಶಕುಮಾರ,
ಜಿಲ್ಲಾಧಿಕಾರಿ, ಕಲಬುರಗಿ

– ಹಣಮಂತರಾದ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next