ಚೇಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ.26 ರಂದು ಬೆಂಗಳೂರಿನಲ್ಲಿ ಟ್ಟ್ರ್ಯಾಕ್ಟರ್, ಎತ್ತಿನಬಂಡಿ, ಟ್ಯಾಕ್ಸಿ, ಟೆಂಪೋ, ಜೀಪು, ಕಾರು, ಮೋಟಾರ್ ಬೈಕ್‌ಗಳ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಪೊ›.ನಂಜುಂಡಸ್ವಾಮಿ ಬಣ) ಚೇಳೂರು ಹೋಬಳಿ ಅಧ್ಯಕ್ಷ ಆರ್.ಶಿವಾರೆಡ್ಡಿ ತಿಳಿಸಿದರು.
ದೆಹಲಿಯಲ್ಲಿ ರೈತರ ಧರಣಿ ನಡೆಸುತ್ತಿದ್ದಾರೆ. 50ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದರೂ ಪ್ರಧಾನಿ ಮೋದಿ ಅವರು ಸ್ಪಂದಿಸಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದರು.
ಇದನ್ನೂ ಓದಿ:ಮಾಸಾಂತ್ಯಕ್ಕೆ 12 ಕೆರೆ ಭರ್ತಿ: ನಿರಂಜನ್
ಕಾರ್ಪೊರೇಟ್ ಕಂಪನಿಗಳ ಕೈಗೆ ರೈತರ ಜುಟ್ಟು ನೀಡಲು ಕೇಂದ್ರ ಸರ್ಕಾರ ಹವಣಿಸುತ್ತಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿರುವುದು ಖಂಡನೀಯ. ಈ ಕಾಯ್ದೆಗಳಿಂದ ಹೈನುಗಾರಿಕೆ ಮೇಲೆ ಕರಿನೆರಳು ಬೀಳಲಿದೆ ಎಂದರು. ಚೇಳೂರು ಗ್ರಾಪಂನ ಕೆ.ಎನ್. ಸೋಮಶೇಖರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಹೊಸ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಬೀದಿಪಾಲು ಮಾಡಲು ಹೊರಟಿವೆ. ಅನ್ನದಾತರ ವಿರೋಧ ಕಟ್ಟಿಕೊಳ್ಳುವಸರ್ಕಾರಗಳು ಉಳಿಯಲು ಸಾಧ್ಯವಿಲ್ಲ ಎಂದರು.
ಮುಖಂಡರಾದ ಪುಲಗಂಟಿ ಶ್ರೀನಿವಾಸ, ಅಪ್ಪನ್ನ,ಗುರುಗುಟ್ಲು ಸೀನಪ್ಪ, ಪುಲಗಲ್ ಗೆಜ್ಜಿ ವೆಂಕಟರಾಯಪ್ಪ, ಬಿ.ಎಸ್.ಬಿ.ಎಸ್.ಮರಿಯಪ್ಪ, ಚೇಳೂರಿನ ಆಂಜಿನೇಯರೆಡ್ಡಿ ಹಾಜರಿದ್ದರು.