ನವದೆಹಲಿ: ರೈತ ಹೋರಾಟವನ್ನು ಬೆಂಬಲಿಸಿ ಹಾಗೂ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಹರ್ಯಾಣದ ಸಿಖ್ ಗುರು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿ ಸಿಂಘು ಗಡಿಯಲ್ಲಿ ನಡೆದಿದೆ.
ಮೃತಪಟ್ಟ ಗುರುವನ್ನು ಸಂತ್ ಬಾಬಾ ರಾಮ್ ಸಿಂಗ್ (65) ಎಂದು ಗುರುತಿಸಲಾಗಿದೆ. ಇವರು ಹರ್ಯಾಣದ ಕರ್ನಾಲ್ ಮೂಲದವರು.
ಇಂದು (ಡಿ.16) ಸಂತ್ ಬಾಬಾ ರಾಮ್ ಸಿಂಗ್ ರೈತ ಹೋರಾಟದ ಒಗ್ಗಟ್ಟು ತೋರಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ಪತ್ರ ಬರೆದಿಟ್ಟು ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ರೈತರ ದುಸ್ಥಿತಿ ಮತ್ತು ಸರ್ಕಾರದ ದಬ್ಬಾಳಿಕೆಯನ್ನು ನೋಡಲಾಗದೆ ಈ ನಿರ್ಧಾರ ತಳೆದಿರುವುದಾಗಿ ವಿವರಿಸಿದ್ದಾರೆ.
‘ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಹೆಣಗಾಡುತ್ತಿರುವ ರೈತರ ದುಃಸ್ಥಿತಿಗೆ ನಾನು ಸಾಕ್ಷಿಯಾಗಿದ್ದೇನೆ. ಸರ್ಕಾರ ಅವರಿಗೆ ನ್ಯಾಯ ನೀಡುತ್ತಿಲ್ಲ ಎಂದು ನನಗೆ ನೋವಾಗಿದೆ. ಇದು ಅಪರಾಧ. ಸರ್ಕಾರ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ದಬ್ಬಾಳಿಕೆಯ ವಿರುದ್ಧ ಮತ್ತು ರೈತರ ಹಕ್ಕುಗಳಿಗಾಗಿ ಯಾರೂ ಏನನ್ನೂ ಮಾಡಲಿಲ್ಲ. ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಅನೇಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದಬ್ಬಾಳಿಕೆಯ ವಿರುದ್ಧದ ಧ್ವನಿ ಮತ್ತು ರೈತರ ಪರವಾದ ಧ್ವನಿಯಾಗಿದೆ’ ಎಂದು ಪಂಜಾಬಿಯಲ್ಲಿ ಬರೆದ ಆತ್ಮಹತ್ಯೆ ಪತ್ರದಲ್ಲಿ ತಿಳಿಸಿದ್ದಾರೆ.
ಸಂತ ಬಾಬಾ ರಾಮ್ಸಿಂಗ್ ಕರ್ನಾಲ್ನ ಎಸ್ಜಿಪಿಸಿ ಮುಖಂಡರಾಗಿದ್ದರು. ಮಾತ್ರವಲ್ಲದೆ ಇವರಿಗೆ ಕರ್ನಾಲ್ ಮತ್ತು ಸುತ್ತಮುತ್ತ ದೊಡ್ಡ ಪ್ರಮಾಣದ ಅನುಯಾಯಿಗಳಿದ್ದರು ಎನ್ನಲಾಗಿದೆ.