ನವದೆಹಲಿ:ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ-ಹರ್ಯಾಣ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತನೊಬ್ಬ ಅಲಿಪುರ್ ಪೊಲೀಸ್ ಸಿಬಂದಿ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ಪರಿಣಾಮ ರೈತರು, ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಶ್ವಥ್ ನಾರಾಯಣ, ಮಾಧುಸ್ವಾಮಿ ಜವಾಬ್ದಾರಿ ಹುದ್ದೆ ನಿಭಾಯಿಸುವುದು ಸೂಕ್ತವಲ್ಲ: ಸದನ ಸಮಿತಿ
ದೆಹಲಿ-ಹರ್ಯಾಣ ಸಿಂಘು ಗಡಿಪ್ರದೇಶದಲ್ಲಿ ಸುಮಾರು 200 ಮಂದಿ ಗುಂಪೊಂದು ರೈತರ ಟೆಂಟ್ ಮೇಲೆ ಕಲ್ಲು ತೂರಾಟ ಆರಂಭಿಸಿತ್ತು. ಆದರೆ ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರದೇಶವನ್ನು ಪೊಲೀಸರು ಬಂದ್ ಮಾಡಿದ್ದರು ಕೂಡಾ 200-300 ಜನ ಪ್ರತಿಭಟನಾ ಸ್ಥಳದೊಳಕ್ಕೆ ಹೇಗೆ ನುಗ್ಗಿದರು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿದ್ದ ಗುಂಪು ರೈತರ ವಾಷಿಂಗ್ ಮೆಶಿನ್ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಲು ಯತ್ನಿಸಿದ್ದು, ಕೂಡಲೇ ಪ್ರತಿಭಟನೆ ನಡೆಸುತ್ತಿರುವ ಸ್ಥಳವನ್ನು ಬಿಟ್ಟು ಹೊರಡುವಂತೆ ಒತ್ತಾಯಿಸಿರುವುದಾಗಿ ವರದಿ ವಿವರಿಸಿದೆ.
ಎಸ್ ಎಚ್ ಒ ಪ್ರದೀಪ್ ಕುಮಾರ್ ಮೇಲೆ ಸರವಣ್ ಸಿಂಗ್ ಪಂಥೇರ್ ತಲ್ವಾರ್ ನಿಂದ ಹಲ್ಲೆ ನಡೆಸಿದ್ದು, ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ಸಿಂಗ್ ಫೋಟೊವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಒಂದೆಡೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರವಾಯು ಪ್ರಯೋಗ, ಲಾಠಿಚಾರ್ಜ್ ನಡೆಸುತ್ತಿದ್ದು, ಮತ್ತೊಂದೆಡೆ ಸ್ಥಳೀಯರು ಮತ್ತು ರೈತರ ನಡುವೆ ಘರ್ಷಣೆ ನಡೆದಿದ್ದು, ಸ್ಥಳೀಯರು ರೈತರ ಟೆಂಟ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ರೈತರು ಕೂಡಾ ಕಲ್ಲು ತೂರಾಟ ನಡೆಸಿರುವುದಾಗಿ ವರದಿ ತಿಳಿಸಿದೆ.