Advertisement

ರೈತರ ಪ್ರತಿಭಟನೆ: ಸಮಸ್ಯೆ ನಿವಾರಣೆಯಾಗಲಿ

10:49 PM Dec 04, 2020 | mahesh |

ಕೇಂದ್ರ ಸರಕಾರ ಇತ್ತೀಚೆಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿಚಾರದಲ್ಲೀಗ ಪ್ರತಿಭಟನೆಗಳು ಜೋರಾಗಿವೆ. ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ದಿಲ್ಲಿಯಲ್ಲಿ ಪ್ರತಿಭಟನೆಯಲ್ಲಿ ನಿರತವಾಗಿದ್ದು, ಕೇಂದ್ರ ಸರಕಾರದ ಜತೆಗೆ ಮಾತುಕತೆ ನಡೆದರೂ ಸದ್ಯಕ್ಕೆ ಫ‌ಲಪ್ರದವಾಗಿಲ್ಲ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರಕಾರ, ಈ ಪ್ರಯತ್ನದ ಭಾಗವಾಗಿ ತಂದ ಕಾಯ್ದೆಗಳು ಕೃಷಿಯನ್ನು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸುವ ಹಾಗೂ ಕೃಷಿ ಮಾರುಕಟ್ಟೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ. ಆದರೆ, ಇದರಲ್ಲಿನ ಕೆಲವು ಅಂಶಗಳ ಬಗ್ಗೆ ರೈತ ಸಂಘಟನೆಗಳಿಗೆ ಅಸಮಾಧಾನವಿದೆ. ಆದಾಗ್ಯೂ, ಈ ವಿಚಾರದಲ್ಲಿ ಪಂಜಾಬ್‌ ಮತ್ತು ಹರಿಯಾಣದ ರೈತರಿಂದ ಆರಂಭದಿಂದಲೂ ಜೋರು ಅಸಮಾಧಾನ ವ್ಯಕ್ತವಾಗುತ್ತಾ ಬಂದಿತ್ತಾದರೂ ಈಗ ಪ್ರತಿಭಟನೆಗಳಿಗೆ ದೇಶಾದ್ಯಂತ ರೈತ ಒಕ್ಕೂಟಗಳು ಕೈಜೋಡಿಸಿವೆ.

Advertisement

ಈ ಹಂತದಲ್ಲಿ ಎರಡೂ ಪಕ್ಷಗಳಿಂದ ಮಾತುಕತೆ ನಡೆದಿದೆಯಾದರೂ, ಗೊಂದಲ ಇನ್ನೂ ಪರಿಹಾರವಾಗಿಲ್ಲ ಎನ್ನುವುದು ವೇದ್ಯ. ಹೊಸ ಕಾಯ್ದೆಗಳು ಜಾರಿಯಾದರೂ ಕನಿಷ್ಠ ಬೆಂಬಲ ವ್ಯವಸ್ಥೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದುವರಿಯಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಅಲ್ಲದೇ, ಕೇಂದ್ರವು ಕಾಯ್ದೆಗಳಲ್ಲಿ ಕೆಲವು ಲೋಪಗಳಿರುವುದನ್ನು ಒಪ್ಪಿಕೊಂಡಿದೆ ಎಂದು ರೈತ ಮುಖಂಡರು ಮಾತುಕತೆಯ ಅನಂತರ ಹೇಳುತ್ತಿದ್ದಾರೆ.

ಇಲ್ಲಿಯವರೆಗೂ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಗಳ ಮೂಲಕವೇ ಮಾರಾಟ ಮಾಡುತ್ತಿದ್ದರಾದರೂ ಮಧ್ಯವರ್ತಿಗಳ ಹಾವಳಿಯೂ ಅವರಿಗೆ ಬಾಧಕವಾಗಿದೆ ಎನ್ನುವುದೂ ಸತ್ಯ. ಈ ನಿಟ್ಟಿನಲ್ಲಿ ಜಾರಿಯಾಗಿರುವ ರೈತರ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ನೆರವು-ಬೆಂಬಲ) ಕಾಯ್ದೆಯು, ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಅಂದರೆ ಇನ್ನು ಮುಂದೆ, ರೈತರು ತಮ್ಮ ಬೆಳೆಗಳನ್ನು ಎಪಿಎಂಸಿಯಷ್ಟೇ ಅಲ್ಲದೇ, ತಮಗಿಷ್ಟವಾದೆಡೆಯಲ್ಲಿ ಮಾರಾಟ ಮಾಡುವ ಹಕ್ಕು ಪಡೆದಿದ್ದಾರೆ. ಆದರೆ, ರೈತರು ಕಾರ್ಪೋರೆಟ್‌ ಒಂದರ ಜತೆ ಒಪ್ಪಂದ ಮಾಡಿಕೊಂಡರೆ ನಿರ್ದಿಷ್ಟ ಗುಣಮಟ್ಟದ ಉತ್ಪನ್ನವನ್ನೇ ಖರೀದಿಸುತ್ತೇವೆ ಎಂಬ ನಿಯಮವೂ ಅದರಲ್ಲಿ ಇರಬಹುದು. ಒಂದು ವೇಳೆ ಆ ಬೆಳೆ ತಾನು ನಿಗದಿಪಡಿಸಿದ ಗುಣಮಟ್ಟ ಹೊಂದಿಲ್ಲ ಎಂದು ಖರೀದಿ ಸಂಸ್ಥೆಯು ನಿರಾಕರಿಸಿತೆಂದರೆ, ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂಥ ಸಂದರ್ಭಗಳಲ್ಲಿ ರೈತರ ಸಹಾ ಯಕ್ಕೆ ಏನು ದಾರಿಗಳಿವೆ ಎನ್ನುವುದರಲ್ಲಿ ಗೊಂದಲ ಇರಬಾರದು. ಈ ನಿಟ್ಟಿನಲ್ಲಿ ಸರಕಾರ ಈಗಾಗಲೇ ಮಾತುಕತೆಯಲ್ಲಿ ಈ ವಿಷಯಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದೆಯೇ ಇಲ್ಲವೇ ಎನ್ನುವುದು ತಿಳಿದಿಲ್ಲ. ಗುರುವಾರ ನಡೆಸಿದ ಮಾತುಕತೆ ಅಪೂರ್ಣವಾಗಿದೆ. ಶನಿವಾರವೂ ಈ ನಿಟ್ಟಿನಲ್ಲಿ ಮತ್ತೂಂದು ಸಭೆ ನಡೆಯಲಿದ್ದು ಭಿನ್ನಾಭಿಪ್ರಾಯಗಳು, ಗೊಂದಲಗಳು ಬಗೆಹರಿಯುವಂತಾಗಲಿ.

ಸಹಜವಾಗಿಯೇ ಕಾಯ್ದೆಗಳ ರೂಪದಲ್ಲಿ ಬೃಹತ್‌ ಬದಲಾವಣೆಗಳನ್ನು ತಂದಾಗ ಕೆಲವು ಅಡ್ಡಿಗಳು ಎದುರಾಗುತ್ತವೆ. ಆದರೆ ಆರೋಪ-ಪ್ರತ್ಯಾರೋಪಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಾತುಕತೆಯ ಮೂಲಕ ಅಡ್ಡಿಗಳನ್ನು ಸರಿಪಡಿಸಿಕೊಳ್ಳುವುದೇ ಇದಕ್ಕೆ ಪರಿಹಾರ. ಇನ್ನು ಇದೇ ವೇಳೆಯಲ್ಲೇ ಈ ಗೊಂದಲಕ್ಕೆ ವಿಪಕ್ಷಗಳೂ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ. ಅನ್ನದಾತನ ಸಮಸ್ಯೆಗಳು, ಆತಂಕಗಳು ನಿವಾರಣೆಯಾಗುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಚಿಂತಿಸಿ, ಮುನ್ನಡೆಯುವುದು ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next