ಕೊಪ್ಪಳ: ಸರ್ಕಾರವು ಭೂ ಸುಧಾರಣಾ ಕಾಯ್ದೆ, ಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿ ಹಲವು ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದು, ಇದರಿಂದ ರೈತರಿಗೆ ಗಂಡಾಂತರವಾಗಿದೆ. ಇದನ್ನು ಖಂಡಿಸಿ ವಿಧಾನಸೌಧ ಮುತ್ತಿಗೆ ಹಾಕುವ ಜೊತೆಗೆ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ ಎಂದು ಹಸಿರು ಸೇನೆ ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕಾಯ್ದೆಗಳ ವಿಚಾರ ಸಂಕಿರಣದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಸರ್ಕಾರವು ರೈತರಿಗೆ ಗಂಡಾಂತರವಾದ ಕಾಯ್ದೆ ಬಂದಿವೆ. ರೈತರು ಕಾಯ್ದೆ ತಿದ್ದುಪಡಿಯಿಂದ ಆಗುವಂತಹ ಅನಾಹುತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮೋದಿ ಅವರಿಗೆ ರೈತರ ಸಂಕಷ್ಟ ಗೊತ್ತಿಲ್ಲ. ಅವರು ಚಹಾ ಮಾರಾಟ ಮಾಡಿದವರು. ಆದರೆ ನಾನು ರೈತನ ಮಗನೆಂದು, ಹಸಿರು ಶಾಲು ಹೆಗಲಿಗೆ ಹಾಕಿಕೊಂಡು ರೈತರ ಹೆಸರಲ್ಲಿ ಪ್ರಮಾಣ ಮಾಡಿ ಅಧಿಕಾರ ನಡೆಸುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರು ರೈತರ ಹಿತ ಕಾಯಬೇಕೇ ಹೊರತು ಅವರ ಜೀವಕ್ಕೆ ಕುತ್ತು ತರುವಂತ ಕೆಲಸ ಮಾಡಬಾರದು. ಸರ್ಕಾರವು ಕೋವಿಡ್ ಹೆಸರಲ್ಲಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತಿದೆ. ಇದನ್ನುರೈತರು ತಿಳಿಯಬೇಕು. ರೈತರನ್ನು ದಿವಾಳಿ ಮಾಡುವ ಉದ್ದೇಶದಿಂದ ಮೋದಿಹಾಗೂ ಯಡಿಯೂರಪ್ಪ ಸರ್ಕಾರಗಳು ಕಾಯ್ದೆ ಜಾರಿ ಮಾಡುತ್ತಿವೆ. ಮೊದಲೇ ಕೋವಿಡ್ ಹೆಸರಲ್ಲಿ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೀರಿ. ಈಗ ಎಪಿಎಂಸಿಯಲ್ಲೂ ಕಾರ್ಪೋರೆಟ್ ಕಂಪನಿಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ವರ್ತಕ ವ್ಯಾಪಾರಸ್ಥರಿಗೂ ಅವಕಾಶ ಇಲ್ಲದಂತಾಗುತ್ತಿದೆ. ಬಿಎಸ್‌ವೈ ಅವರು ಯಡಿಯೂರಪ್ಪ ರೈತ ವಿರೋ ಧಿ ಎಂಬ ಪಟ್ಟ ಬರಬಾರದು ಎಂದೆದಿದ್ದರೆ ಸುಗ್ರೀವಾಜ್ಞೆ ರದ್ದು ಪಡಿಸಬೇಕೆಂದರು.
ಸರ್ಕಾರಗಳು ರೈತರ ಅನುಮತಿ ಇಲ್ಲದೇ ಇದ್ದರೂ ಸ್ವಾ ಧೀನ ಮಾಡಿಕೊಳ್ಳುವ ಕಾಯ್ದೆ ತಂದಿದೆ. ಇದರಿಂದ ರೈತರಿಗೆ ದೊಡ್ಡ ಅನ್ಯಾಯ ಆಗುತ್ತಿದೆ. 2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರವು ಕಾಯ್ದೆ ಜಾರಿ ಮಾಡಿತ್ತು. ಆ ಕಾಯ್ದೆಯಡಿ ಶೇ.80 ರೈತರ ಒಪ್ಪಿಗೆ ಇರಬೇಕು. ಈಗ ಸುಗ್ರೀವಾಜ್ಞೆ ತಂದು ಎಲ್ಲವನ್ನೂ ಹಾಳು ಮಾಡಿದೆ ಎಂದರು. ಇನ್ನು ಯೂರಿಯಾ ಕೊರತೆ ರಾಜ್ಯದೆಲ್ಲೆಡೆ ಕೇಳಿ ಬಂದಿದೆ. ಆದರೆ ಸರ್ಕಾರವು ಸಿನಿಮಾ ನಟನಾದ ಬಿ.ಸಿ. ಪಾಟೀಲ್ ಅವರನ್ನು ಕರೆ ತಂದು ಮಂತ್ರಿ ಮಾಡಿದ್ದಾರೆ. ಅವರು ಮಾಧ್ಯಮದ ಮುಂದೆ ಪೋಜು ಕೊಟ್ಟು ದಿನಕ್ಕೊಂದು ಹೇಳಿಕೆ ನೀಡುತ್ತಾ ಸುತ್ತಾಡುತ್ತಿದ್ದಾರೆ. ರೈತರ ಹಿತ ಕಾಯುವ ಕೆಲಸ ಮಾಡಿಲ್ಲ. ಯೂರಿಯಾ ಕೊರತೆ ನೀಗಿಸಿಲ್ಲ. ದುಪ್ಪಟ್ಟು ಬೆಲೆಗೆ ಗೊಬ್ಬರ ಮಾಡುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.
ಎಪಿಎಂಸಿ ಅಧ್ಯಕ್ಷ ನಾಗರಾಜ ಚಳ್ಳೂಳ್ಳಿ, ಹನುಮಂತಪ್ಪ ಹೊಳೆಯಾಚೆ, ನಜೀರಸಾಬ್ ಮೂಲಿಮನಿ, ಇಸ್ಮಾಯಿಲ್ ನಾಲಬಂದ, ದೊಡ್ಡಪ್ಪ ಸಜ್ಜಲಗುಡ್ಡ, ಮಹಾಂತಮ್ಮ ಪಾಟೀಲ್, ಶಂಕ್ರಗೌಡ ಬೀಳಗಿ ಉಪಸ್ಥಿತರಿದ್ದರು.
ಗಾಂಜಾದಲ್ಲಿ ಕೆಲವು ಔಷಧೀಯ ಗುಣವಿದ್ದರೂ ಅದನ್ನು ಲೀಗಲ್ ಮಾಡಬಾರದು. ಇದರಿಂದ ಭವಿಷ್ಯದ ಮಕ್ಕಳಿಗೆ ದೊಡ್ಡ ಪೆಟ್ಟು ಬೀಳಲಿದೆ. ಯಾವುದನ್ನೋ ದಿಕ್ಕು ತಪ್ಪಿಸಲು ಗಾಂಜಾ ಚರ್ಚೆಗೆ ಬಂದಿದೆ. ಗಾಂಜಾ ದಂಧೆ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲರಿಗೂ ಈ ಇದಕ್ಕೊಂದು ವಿಶೇಷ ಅಧಿಕಾರಿ ನೇಮಿಸಿ ಕ್ರಮ ಕೈಗೊಳ್ಳಿ ಎಂದರು.
–ಕೋಡಿಹಳ್ಳಿ ಚಂದ್ರಶೇಖರ, ಹಸಿರು ಸೇನೆ, ರೈತ ಮುಖಂಡ